ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

ಕನ್ನಡ ಶಾಸ್ತ್ರೀಯ ಭಾಷಾ ಸ್ಥಾನಮಾನ: 18 ವರ್ಷಗಳ ಸಾಧನೆ, ಆಡಳಿತಾತ್ಮಕ ವೈಫಲ್ಯಗಳು ಶಾಸ್ತ್ರೀಯ ಭಾಷೆಯ ಸ್ಥಾನ ನೀಡಿ ಕನ್ನಡಾಂಬೆಯ ಕೈ ಕಟ್ಟಿ ಕೂರಿಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು :

kannada classical language status


 ಶಾಸ್ತ್ರೀಯ ಭಾಷೆಯ ಸ್ಥಾನ ನೀಡಿ ಕನ್ನಡಾಂಬೆಯ ಕೈ ಕಟ್ಟಿ ಕೂರಿಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು  :

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತು (ಅಕ್ಟೋಬರ್ 31, 2008) ಬರೋಬ್ಬರಿ ಹದಿನೆಂಟು ವರ್ಷಗಳು ಕಳೆದಿವೆ. ದ್ವಿಸಹಸ್ರಮಾನಗಳ ಇತಿಹಾಸವಿರುವ, ಹಲ್ಮಿಡಿ ಶಾಸನದಿಂದ ಹಿಡಿದು ಪಂಪ-ರನ್ನರ ಕಾವ್ಯ ಹಾಗೂ ವಚನ ಸಾಹಿತ್ಯದವರೆಗೆ ಅಖಂಡ ಪರಂಪರೆಯನ್ನು ಹೊಂದಿರುವ ಕನ್ನಡಕ್ಕೆ ಈ ಮಾನ್ಯತೆ ದಕ್ಕಿದ್ದು ಕನ್ನಡಿಗರ ಹೆಮ್ಮೆಯ ವಿಷಯ. ಆದರೆ, ಈ ಸುದೀರ್ಘ ಅವಧಿಯಲ್ಲಿ ಕನ್ನಡದ ಪ್ರಗತಿ ಹಾಗೂ ಆಡಳಿತಾತ್ಮಕ ವ್ಯವಸ್ಥೆಯ ವಾಸ್ತವಿಕ ಚಿತ್ರಣವನ್ನು ಅವಲೋಕಿಸಿದಾಗ, ಹೆಮ್ಮೆಯ ಜೊತೆಗೆ ಗಂಭೀರ ಚಿಂತನೆಯನ್ನು ಹುಟ್ಟುಹಾಕುವ ಹಲವು ಆಘಾತಕಾರಿ ಅಂಶಗಳು ಕಣ್ಣಮುಂದೆ ನಿಲ್ಲುತ್ತವೆ.

ಕೇಂದ್ರ ಸರ್ಕಾರದ ಜವಾಬ್ದಾರಿಗಳು

ಶಾಸ್ತ್ರೀಯ ಸ್ಥಾನಮಾನ ನೀಡಿರುವುದು ಕೇಂದ್ರ ಸರ್ಕಾರದ (ಶಿಕ್ಷಣ ಸಚಿವಾಲಯದ) ಅಡಿಯಲ್ಲಿ. ಹಾಗಾಗಿ, ಈ ಕೆಳಗಿನ ಪ್ರಮುಖ ನಿರ್ಧಾರಗಳನ್ನು ಕೇಂದ್ರ ಸರ್ಕಾರವೇ  ಕೈಗೊಳ್ಳಬೇಕು:

ಪೂರ್ಣ ಸ್ವಾಯತ್ತತೆ : ಮೈಸೂರಿನ ಶಾಸ್ತ್ರೀಯ ಕನ್ನಡ ಕೇಂದ್ರವನ್ನು CIIL ಅಧೀನದಿಂದ ಸಂಪೂರ್ಣವಾಗಿ ಬೇರ್ಪಡಿಸಿ, ಸ್ವತಂತ್ರ ಕಾಯ್ದೆಯ ಅಡಿಯಲ್ಲಿ ಪ್ರತ್ಯೇಕ ಸ್ವಾಯತ್ತ ಸಂಸ್ಥೆಯನ್ನಾಗಿ ಘೋಷಿಸುವುದು ಕೇಂದ್ರ ಸರ್ಕಾರದ ನೇರ ಜವಾಬ್ದಾರಿ.

ಖಾಯಂ ಹುದ್ದೆಗಳ ಸೃಷ್ಟಿ ಹಾಗೂ ನೇಮಕಾತಿ ನಿಯಮಗಳು: ಕಳೆದ 15 ವರ್ಷಗಳಿಂದ ಖಾಲಿ ಇರುವ ಕಾಯಂ ಶೈಕ್ಷಣಿಕ ಹುದ್ದೆಗಳಿಗೆ (ಪ್ರಾಧ್ಯಾಪಕರು, ಸಂಶೋಧಕರು, ಶಾಸನ ತಜ್ಞರು) ಅನುಮೋದನೆ ನೀಡಿ, ದೇಶಮಟ್ಟದಲ್ಲಿ ಅಧಿಸೂಚನೆ ಹೊರಡಿಸುವುದು ಕೇಂದ್ರದ ವ್ಯಾಪ್ತಿಗೆ ಬರುತ್ತದೆ.

ಸಮಾನ ಅನುದಾನ ಹಂಚಿಕೆ: ಸಂಸ್ಕೃತ ಮತ್ತು ತಮಿಳು ಭಾಷೆಗಳಿಗೆ ಸಿಗುವಂತೆ ಕನ್ನಡಕ್ಕೂ ಬಜೆಟ್‌ನಲ್ಲಿ ನೂರಾರು ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡುವುದು ಕೇಂದ್ರದ ಕರ್ತವ್ಯ.

ರಾಜ್ಯ ಸರ್ಕಾರದ ಜವಾಬ್ದಾರಿಗಳು 

ಈ ವಿಷಯದಲ್ಲಿ ರಾಜ್ಯ ಸರ್ಕಾರವೂ ಕೈಕಟ್ಟಿ ಕುಳಿತುಕೊಳ್ಳದೆ, ತನ್ನದೇ ಆದ ಜವಾಬ್ದಾರಿಯನ್ನು ನಿರ್ವಹಿಸಬೇಕು:

ಕೇಂದ್ರದ ಮೇಲೆ ರಾಜಕೀಯ ಮತ್ತು ಆಡಳಿತಾತ್ಮಕ ಒತ್ತಡ:  ಕನ್ನಡಕ್ಕೆ ಅನ್ಯಾಯವಾಗುತ್ತಿರುವ ಕುರಿತು, ಸ್ವಾಯತ್ತ ಸಂಸ್ಥೆ ಮತ್ತು ಅನುದಾನಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ನಿರಂತರವಾಗಿ ದನಿ ಎತ್ತುವುದು ಹಾಗೂ ಸಂಸತ್ತಿನಲ್ಲಿ ಧ್ವನಿ ಮೂಡಿಸುವಂತೆ ಕೇಂದ್ರ ಸಚಿವರು/ಸಂಸದರಿಗೆ ಮನವರಿಕೆ ಮಾಡಿಕೊಡುವುದು ರಾಜ್ಯ ಸರ್ಕಾರದ ಕೆಲಸ.

ರಾಜ್ಯ ಮಟ್ಟದಲ್ಲಿ ಪರ್ಯಾಯ ಪ್ರೋತ್ಸಾಹ:  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮೂಲಕ ರಾಜ್ಯದಲ್ಲೇ ಹಳಗನ್ನಡ ಸಂಶೋಧನೆ, ತಾಳೆಗರಿಗಳ ಸಂರಕ್ಷಣೆ ಮತ್ತು ಹಲ್ಮಿಡಿ ಸೇರಿದಂತೆ ಪ್ರಮುಖ ಶಾಸನಗಳ ಡಿಜಿಟಲೀಕರಣಕ್ಕೆ ಹೆಚ್ಚಿನ ಅನುದಾನ ನೀಡುವುದು ಆಗಬೇಕಿದೆ.

ಶಾಸ್ತ್ರೀಯ ಸ್ಥಾನಮಾನದ ನಂತರ ಆದ ಪ್ರಮುಖ ಉತ್ತಮ ಬೆಳವಣಿಗೆಗಳು ಆಗಿವೆಯೇ

ಕೇಂದ್ರ ಸರ್ಕಾರದ ಕನ್ನಡದ ಕುರಿತ ನಿರ್ಲಕ್ಷ್ಯದ ನಡುವೆಯೂ, ಮೈಸೂರಿನ ಕೇಂದ್ರ ಭಾರತೀಯ ಭಾಷೆಗಳ ಸಂಸ್ಥೆ (CIIL) ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ  ಹಾಗೂ ರಾಜ್ಯದ ವಿದ್ವಾಂಸರ ಪರಿಶ್ರಮದಿಂದ ಕೆಲವು ಮಹತ್ವದ ಸಕಾರಾತ್ಮಕ ಬೆಳವಣಿಗೆಗಳು ಸಂಭವಿಸಿವೆ:

ಹಳಗನ್ನಡ ಕೃತಿಗಳು, ಶಾಸನಗಳು ಮತ್ತು ತಾಳೆಗರಿಗಳ ವೈಜ್ಞಾನಿಕ ಸಂಪಾದನೆ ಹಾಗೂ ಪ್ರಕಟಣಾ ಕಾರ್ಯಗಳು ನಡೆದಿವೆ. ಪಂಪ, ರನ್ನ, ಜನ್ನ, ಹರಿಹರ ಮುಂತಾದ ಮಹಾಕವಿಗಳ ಕೃತಿಗಳನ್ನು ಮತ್ತು ಪ್ರಾಚೀನ ಸಾಹಿತ್ಯವನ್ನು ಉಳಿಸುವ ಹಾಗೂ ಬಿತ್ತರಿಸುವ ಕೆಲಸಗಳು ಆರಂಭವಾಗಿವೆ.

ಫೆಲೋಶಿಪ್ ಹಾಗೂ ಯುವ ವಿದ್ವಾಂಸರಿಗೆ ಪ್ರೋತ್ಸಾಹ: ಹಳಗನ್ನಡ, ಶಾಸನಶಾಸ್ತ್ರ ಮತ್ತು ಸಾಹಿತ್ಯ ಸಂಶೋಧನೆಯಲ್ಲಿ ತೊಡಗಿಕೊಳ್ಳುವ ಯುವ ಸಂಶೋಧಕರಿಗೆ ಹಾಗೂ ವಿದ್ವಾಂಸರಿಗೆ ಸಂಶೋಧನಾ ವೇತನ  ಮತ್ತು ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸಲಾಗುತ್ತಿದೆ.

ತಾಳೆಗರಿಗಳ ಡಿಜಿಟಲೀಕರಣದ ಮುನ್ಸೂಚನೆ:  ಮಠ-ಮಾನ್ಯಗಳು ಮತ್ತು ವಸ್ತುಸಂಗ್ರಹಾಲಯಗಳಲ್ಲಿ ಅಳಿವಿನಂಚಿನಲ್ಲಿದ್ದ ಅಮೂಲ್ಯ ತಾಳೆಗರಿ ಗ್ರಂಥಗಳು ಹಾಗೂ ಕಲ್ಲಿನ ಶಾಸನಗಳನ್ನು ದಾಖಲಿಸುವ ಮತ್ತು ಡಿಜಿಟಲ್ ರೂಪಕ್ಕೆ ತರುವ ಪ್ರಾಥಮಿಕ ಯತ್ನಗಳು ನಡೆದಿವೆ.

ಭಾಷಾ ತಂತ್ರಜ್ಞಾನಕ್ಕೆ ಒತ್ತು: ಹಳಗನ್ನಡ ಪಠ್ಯಗಳನ್ನು ಕಂಪ್ಯೂಟರ್‌ ಗ್ರಹಿಸುವಂತೆ ಮಾಡುವ ನಿಟ್ಟಿನಲ್ಲಿ OCR (Optical Character Recognition) ತಂತ್ರಜ್ಞಾನ ಹಾಗೂ ಡಿಜಿಟಲ್ ಪಠ್ಯ ಭಂಡಾರ ರೂಪಿಸುವ ಸಣ್ಣ ಹೆಜ್ಜೆಗಳನ್ನಿಡಲಾಗಿದೆ.

ಆಡಳಿತಾತ್ಮಕ ನ್ಯೂನ್ಯತೆಗಳು ಮತ್ತು ಕರಾಳ ವಾಸ್ತವ 

ಒಂದು ಕಡೆ ಸಾಹಿತ್ಯಕ ಉತ್ಸಾಹವಿದ್ದರೆ, ಮತ್ತೊಂದೆಡೆ ವ್ಯವಸ್ಥಿತ ಆಡಳಿತಾತ್ಮಕ ನಿರ್ಲಕ್ಷ್ಯ ಕನ್ನಡ ಅಧ್ಯಯನ ಕೇಂದ್ರವನ್ನು ಹೈರಾಣಾಗಿಸಿದೆ. ಪೂರ್ಣ ಸ್ವಾಯತ್ತತೆಯ ಕೊರತೆ : ಚೆನ್ನೈನಲ್ಲಿ 'ಶಾಸ್ತ್ರೀಯ ತಮಿಳು ಸಂಸ್ಥೆ'ಗೆ (CICT) ಸ್ವತಂತ್ರ ಅಧಿಕಾರ ಮತ್ತು ಪ್ರತ್ಯೇಕ ಭವನವಿರುವಂತೆ, ಕನ್ನಡಕ್ಕೆ ಮೈಸೂರಿನ CIIL ನ ಅಧೀನದಲ್ಲೇ ಕಟ್ಟುಬೀಳುವಂತೆ ಮಾಡಲಾಗಿದೆ. ಸ್ವತಂತ್ರ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಲು ಬಿಡದ ಈ ವ್ಯವಸ್ಥೆಯು ಕನ್ನಡ ಕೇಂದ್ರದ ಬೆಳವಣಿಗೆಗೆ ದೊಡ್ಡ ತಡೆಯಾಗಿದೆ.

ಸಿಬ್ಬಂದಿ ನೇಮಕಾತಿಯ ಮಂದಗತಿ (ಶೇ. 80ಕ್ಕೂ ಹೆಚ್ಚು ಖಾಲಿ ಹುದ್ದೆಗಳು):

 ಶಾಸ್ತ್ರೀಯ ಕನ್ನಡ ಕೇಂದ್ರಕ್ಕೆ ಆರಂಭದಲ್ಲಿ ಒಟ್ಟು ಮಂಜೂರಾದ ಪ್ರಮುಖ ಶೈಕ್ಷಣಿಕ ಮತ್ತು ಸಂಶೋಧನಾ ಹುದ್ದೆಗಳು ಅಂದಾಜು ೩೭* ಇದರಲ್ಲಿ ಖಾಯಂ ಆಧಾರದ ೩೦ಕ್ಕೂ ಹೆಚ್ಚು ಹುದ್ದೆಗಳು ಕಳೆದ ೧೫ಕ್ಕೂ ಹೆಚ್ಚು ವರ್ಷಗಳಿಂದ ಖಾಲಿಯಿವೆ.

 ಕಾಯಂ ವೃಂದ ಮತ್ತು ನೇಮಕಾತಿ ನಿಯಮಾವಳಿಗಳು  ಇಂದಿಗೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳದಿರುವುದು ದುರಂತ. ಕೇವಲ ೧-೨ ವರ್ಷಗಳ ಗುತ್ತಿಗೆ ಮತ್ತು ತಾತ್ಕಾಲಿಕ ಫೆಲೋಶಿಪ್ ಆಧಾರದ ಮೇಲೆ ಸಂಸ್ಥೆಯನ್ನು ನಡೆಸಲಾಗುತ್ತಿದೆ ಇದು ಪೂರ್ಣ ಪ್ರಮಾಣದ ಕಾರ್ಯಕ್ಕೆ ತಡೆಯೊಡ್ಡಿದೆ.

ಅನುದಾನ ಹಂಚಿಕೆಯಲ್ಲಿ ತಾರತಮ್ಯ: ತಮಿಳು ಮತ್ತು ಸಂಸ್ಕೃತ ಭಾಷೆಗಳ ಶಾಸ್ತ್ರೀಯ ಕೇಂದ್ರಗಳಿಗೆ ಕೇಂದ್ರ ಸರ್ಕಾರದಿಂದ ಬಜೆಟ್‌ನಲ್ಲಿ ಕೋಟ್ಯಂತರ ರೂ. ಅನುದಾನ ಹರಿದುಬರುತ್ತಿದ್ದರೆ, ಕನ್ನಡಕ್ಕೆ ದೊರೆಯುತ್ತಿರುವ ಅನುದಾನ ಅತ್ಯಂತ ಕನಿಷ್ಠ ಪ್ರಮಾಣದಲ್ಲಿದ್ದು, ಮಹತ್ವಾಕಾಂಕ್ಷಿ ಯೋಜನೆಗಳಿಗೆ ಹಣದ ಕೊರತೆ ಕಾಡುತ್ತಿದೆ.

ರಾಷ್ಟ್ರೀಯ-ಅಂತರರಾಷ್ಟ್ರೀಯ ಅಧ್ಯಯನ ಪೀಠಗಳ ಅಲಭ್ಯತೆ: ದೇಶ-ವಿದೇಶಗಳ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ 'ಕನ್ನಡ ಶಾಸ್ತ್ರೀಯ ಅಧ್ಯಯನ ಪೀಠಗಳು' (Chairs) ಸ್ಥಾಪನೆಯಾಗಿ ಜಾಗತಿಕ ಮಟ್ಟದಲ್ಲಿ ಕನ್ನಡದ ಕೀರ್ತಿ ಪಸರಿಸಬೇಕಿದ್ದ ಕೆಲಸ ನಿರೀಕ್ಷಿತ ವೇಗ ಪಡೆದಿಲ್ಲ.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬಂದು ಇಪ್ಪತ್ತು ವರ್ಷಗಳು ತುಂಬಲು (2028ಕ್ಕೆ) ಇನ್ನು ಕೆಲವೇ ವರ್ಷಗಳು ಬಾಕಿ ಇವೆ. ಈ ಐತಿಹಾಸಿಕ ಮೈಲಿಗಲ್ಲು ತಲುಪುವಷ್ಟರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕಾದ ಅವಶ್ಯಕತೆಯಿದೆ.

ಜನರ ಹಕ್ಕೊತ್ತಾಯಗಳು :

ಮೈಸೂರಿನ 'ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ'ವನ್ನು  CIIL ನ ಹಿಡಿತದಿಂದ ಸಂಪೂರ್ಣವಾಗಿ ಮುಕ್ತಗೊಳಿಸಿ, ಕೇಂದ್ರ ಸರ್ಕಾರದ ಅಡಿಯಲ್ಲಿ ಪ್ರತ್ಯೇಕ ಕಾಯ್ದೆಯೊಂದಿಗೆ ಪೂರ್ಣ ಸ್ವಾಯತ್ತ ಸಂಸ್ಥೆಯಾಗಿ  ಘೋಷಿಸಬೇಕು.

ಕಳೆದ ೧೫ ವರ್ಷಗಳಿಂದ ಖಾಲಿ ಉಳಿದಿರುವ ಮಂಜೂರಾದ ಎಲ್ಲಾ ೩೭ ಕಾಯಂ ಶೈಕ್ಷಣಿಕ ಮತ್ತು ಸಂಶೋಧನಾ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಲು ಪ್ರತ್ಯೇಕ ನೇಮಕಾತಿ ನಿಯಮಾವಳಿ ಜಾರಿಗೆ ತರಬೇಕು.

ತಮಿಳು ಮತ್ತು ಸಂಸ್ಕೃತ ಭಾಷೆಗಳಿಗೆ ಸಿಗುತ್ತಿರುವಷ್ಟೇ ಸಮಾನ ಅನುದಾನ ಮತ್ತು ಆರ್ಥಿಕ ಸೌಲಭ್ಯವನ್ನು  ಕನ್ನಡ ಕೇಂದ್ರಕ್ಕೂ ಒದಗಿಸಿ, ಹಳಗನ್ನಡ ಕಾವ್ಯಗಳ ಅನುವಾದ, ಶಾಸನಗಳ ಡಿಜಿಟಲೀಕರಣ ಮತ್ತು ಹಳಗನ್ನಡ 'ದೃಶ್ಯ ಅಕ್ಷರ ಗುರುತಿಸುವಿಕೆ' ತಂತ್ರಜ್ಞಾನ ಅಭಿವೃದ್ಧಿಗೆ ಬೃಹತ್ ಬಜೆಟ್ ಮೀಸಲಿಡಬೇಕು.

ಕೇವಲ ಘೋಷಣೆಗಳಿಗೆ ಮಾತ್ರ ಸೀಮಿತವಾಗದೆ, ಕನ್ನಡದ ಅಸ್ಮಿತೆ ಮತ್ತು ಶಾಸ್ತ್ರೀಯತೆಯ ಘನತೆ ಜಾಗತಿಕ ಮಟ್ಟದಲ್ಲಿ ಬೆಳಗುವಂತೆ ಮಾಡಲು ಸರ್ಕಾರಗಳು ಬದ್ಧವಾಗಬೇಕಿದೆ ಎಂಬುದು ಕನ್ನಡ ಮನಸ್ಸುಗಳ ಆಗ್ರಹವಾಗಿದೆ.