ತೀರ್ಥಹಳ್ಳಿ: ತಾಲೂಕಿನ ತುಂಗಾ ನದಿಯಲ್ಲಿ ಹೆಣ್ಣು ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬುಕ್ಲಾಪುರ ಸಮೀಪದ ಗಂಗಾದೇವಿಯ ಕಟ್ಟೆ ಬಳಿ ಚೀಲದ ಒಳಗೆ ಕಟ್ಟಿಹಾಕಿ ಮಗುವಿನ ಮೃತದೇಹವನ್ನು ಎಸೆದಿರುವ ಶಂಕೆ ವ್ಯಕ್ತವಾಗಿದೆ.
ಇಂದು ಹುಟ್ಟಿರುವ ಮಗು ಇರಬಹುದು ಎಂಬ ಅನುಮಾನವೂ ವ್ಯಕ್ತವಾಗಿದ್ದು, ಮಗುವಿನ ಹೊಕ್ಕುಳ ಬಳ್ಳಿಯನ್ನು ಸಹ ಕಡಿತಗೊಳಿಸಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇದನ್ನು ಗಮನಿಸಿದರೆ, ಮಗುವಿನ ಜನನದ ಸಮಯದಲ್ಲಿ ತಕ್ಷಣದ ವೈದ್ಯಕೀಯ ನೆರವು ಅಥವಾ ಆಸ್ಪತ್ರೆಯ ಸೌಲಭ್ಯ ಸಿಗದೆ ಮಗು ಮೃತಪಟ್ಟಿರಬಹುದು ಅಥವಾ ಅಂತಹ ಸಂದರ್ಭದಲ್ಲಿ ಉಂಟಾದ ತೊಡಕುಗಳಿಂದ ಈ ಸ್ಥಿತಿ ಸಂಭವಿಸಿರಬಹುದು ಎಂದು ಶಂಕಿಸಬಹುದೇ, ಅಥವಾ ಹೆಣ್ಣು ಮಗು ಎಂಬ ಕಾರಣಕ್ಕೆ ಈ ರೀತಿ ಮಾಡಲಾಗಿದೆಯೇ ಎಂಬ ಪ್ರಶ್ನೆ ಮೂಡುತ್ತಿದ್ದು, ಹಾಗಾಗಿದ್ದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಜಾಗೃತಿ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ.
ನದಿಗೆ ತಂದು ನೇರವಾಗಿ ಎಸೆದಿದ್ದಾರೆಯೇ ಅಥವಾ ಮೇಲ್ಭಾಗದಿಂದ ನೀರಿನಲ್ಲಿ ತೇಲಿ ಬಂದಿದೆಯೇ ಎಂಬ ಪ್ರಶ್ನೆಗಳು ವ್ಯಾಪಕವಾಗಿ ಸ್ಥಳೀಯರಲ್ಲಿ ಚರ್ಚೆಯಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ಹಾಗೂ ಪೊಲೀಸ್ ತನಿಖೆಯ ಬಳಿಕವಷ್ಟೇ ಮಗು ಹುಟ್ಟುವಾಗಲೇ ಮೃತಪಟ್ಟಿತ್ತೇ ಅಥವಾ ಬೇರೆ ಕಾರಣಗಳಿವೆಯೇ ಎಂಬ ಸತ್ಯಾಸತ್ಯತೆ ಹೊರಬರಬೇಕಿದೆ.
