ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

ಪಡಿತರ ಚೀಟಿದಾರರಿಗೆ ಗುಡ್‌ನ್ಯೂಸ್: ಮನೆಯಿಂದಲೇ e-KYC ಮಾಡಲು ‘ಅನ್ನ ಸೇವೆ’ ಆ್ಯಪ್ ಸರತಿ ಸಾಲಿನಲ್ಲಿ ನಿಲ್ಲುವ ಸಮಸ್ಯೆಗೆ ಪರಿಹಾರ


ಅಕ್ಟೋಬರ್ 10ರಿಂದ ರಾಜ್ಯಾದ್ಯಂತ ವಿಸ್ತರಣೆ; ಪ್ರಸ್ತುತ 8 ಜಿಲ್ಲೆಗಳಲ್ಲಿ ಪ್ರಾಯೋಗಿಕ ಜಾರಿ

ಬೆಂಗಳೂರು: ಪಡಿತರ ಚೀಟಿದಾರರು e-KYC ಪೂರ್ಣಗೊಳಿಸಲು ನ್ಯಾಯಬೆಲೆ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಸಮಸ್ಯೆಗೆ ಪರಿಹಾರವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ‘ಅನ್ನ ಸೇವೆ’ (Anna Seve) ಎಂಬ ಹೊಸ ಮೊಬೈಲ್ ಆ್ಯಪ್‌ನ್ನು ಪರಿಚಯಿಸಿದೆ.

ಈ ಆ್ಯಪ್ ಮೂಲಕ ಪಡಿತರ ಚೀಟಿಯಲ್ಲಿ ಹೆಸರಿರುವ ಫಲಾನುಭವಿಗಳು ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಆಧಾರ್ ಆಧಾರಿತ ಮುಖ ಗುರುತಿಸುವಿಕೆ (Face Authentication) ಬಳಸಿ e-KYC ಪೂರ್ಣಗೊಳಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. 

ಅಕ್ಟೋಬರ್ 10ರಿಂದ ರಾಜ್ಯಾದ್ಯಂತ

‘ಅನ್ನ ಸೇವೆ’ ಆ್ಯಪ್‌ನ ಸೇವೆಯನ್ನು ಪ್ರಸ್ತುತ ಬೆಂಗಳೂರು ಸೇರಿದಂತೆ ಆಯ್ದ 8 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ. ಉಳಿದ ಜಿಲ್ಲೆಗಳಿಗೂ ಅಕ್ಟೋಬರ್ 10, 2026ರಿಂದ ಸೇವೆಯನ್ನು ವಿಸ್ತರಿಸಲು ಇಲಾಖೆ ಕ್ರಮ ಕೈಗೊಂಡಿದೆ.

ಆ್ಯಪ್‌ ಅನ್ನು Google Play Storeನಲ್ಲಿ ಲಭ್ಯವಾಗುವಂತೆ ಮಾಡಲಾಗಿದ್ದು, ಆಹಾರ ಇಲಾಖೆಯ ಅಧಿಕೃತ ವ್ಯವಸ್ಥೆಯ ಮೂಲಕ e-KYC ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ. 

ಪ್ರತಿಯೊಬ್ಬ ಸದಸ್ಯರಿಗೂ e-KYC

ಪಡಿತರ ಚೀಟಿಯ ಮುಖ್ಯಸ್ಥರ e-KYC ಮಾತ್ರ ಮಾಡಿಸಿದರೆ ಸಾಕಾಗುವುದಿಲ್ಲ. ಪಡಿತರ ಚೀಟಿಯಲ್ಲಿ ಹೆಸರಿರುವ ಪ್ರತಿಯೊಬ್ಬ ಅರ್ಹ ಕುಟುಂಬ ಸದಸ್ಯರೂ ನಿಗದಿತ e-KYC ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿದೆ ಎಂದು ಆ್ಯಪ್‌ನ ಅಧಿಕೃತ ವಿವರದಲ್ಲಿ ತಿಳಿಸಲಾಗಿದೆ.

ಬಯೋಮೆಟ್ರಿಕ್, ಐರಿಸ್ ಅಥವಾ ಮುಖ ಗುರುತಿಸುವಿಕೆಯಂತಹ ಅನುಮೋದಿತ ಆಧಾರ್ ದೃಢೀಕರಣ ವಿಧಾನಗಳ ಮೂಲಕ e-KYC ನಡೆಸಬಹುದಾಗಿದೆ.

e-KYCಗೆ ಗಡುವು ಅಕ್ಟೋಬರ್ 20

ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆಯಿಂದಾಗಿ e-KYC ಪ್ರಕ್ರಿಯೆಗೆ ತೊಂದರೆಯಾಗಿದ್ದ ಹಿನ್ನೆಲೆಯಲ್ಲಿ, ಸರ್ಕಾರವು e-KYCಗೆ ಇದ್ದ ಗಡುವನ್ನು ಸೆಪ್ಟೆಂಬರ್ 30ರಿಂದ ಅಕ್ಟೋಬರ್ 20, 2026ರವರೆಗೆ ವಿಸ್ತರಿಸಿದೆ. 

ಫಲಾನುಭವಿಗಳು ಗಮನಿಸಬೇಕಾದದ್ದು

ಮನೆಯಿಂದ e-KYC ಮಾಡುವಾಗ ಅಧಿಕೃತ ‘Anna Seve’ ಆ್ಯಪ್‌ನ್ನೇ ಬಳಸುವುದು ಮುಖ್ಯ. ಈ ಹಿಂದೆ ‘Mera Ration’ ಸೇರಿದಂತೆ ಇತರ ಆ್ಯಪ್‌ಗಳ ಮೂಲಕ ಕರ್ನಾಟಕದ ಪಡಿತರ e-KYC ಮಾಡಬಹುದು ಎಂಬ ಮಾಹಿತಿ ಹರಿದಾಡಿತ್ತು. ಆದರೆ ಕರ್ನಾಟಕದ ಪಡಿತರ ವ್ಯವಸ್ಥೆಯೊಂದಿಗೆ ಅಧಿಕೃತ ಸಂಪರ್ಕವಿಲ್ಲದ ಆ್ಯಪ್‌ಗಳಲ್ಲಿ ಮಾಡಿದ e-KYC ರಾಜ್ಯದ ದಾಖಲೆಗಳಲ್ಲಿ ನವೀಕರಣವಾಗದಿರುವ ಸಾಧ್ಯತೆಯ ಬಗ್ಗೆ ಆಹಾರ ಇಲಾಖೆ ಎಚ್ಚರಿಕೆ ನೀಡಿತ್ತು. 

ಎಚ್ಚರಿಕೆ : e-KYC ಪೂರ್ಣಗೊಂಡ ನಂತರ ಅಧಿಕೃತ ಆಹಾರ ಇಲಾಖೆಯ ವ್ಯವಸ್ಥೆಯಲ್ಲಿ ನಿಮ್ಮ e-KYC ಸ್ಥಿತಿ ‘Done/Completed’ ಎಂದು ತೋರಿಸುತ್ತಿದೆಯೇ ಎಂಬುದನ್ನು ಪರಿಶೀಲಿಸುವುದು ಒಳಿತು. 

. ಆ್ಯಪ್ ಬಳಸಲು ಸಾಧ್ಯವಾಗದವರು ನ್ಯಾಯಬೆಲೆ ಅಂಗಡಿಗೆ ತೆರಳಿ e-KYC ಮಾಡಿಸಿಕೊಳ್ಳುವ ಅವಕಾಶ ಮುಂದುವರಿದಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ‘ಅನ್ನ ಸೇವೆ’ ಆ್ಯಪ್ ಮನೆಯಲ್ಲೇ e-KYC ಮಾಡುವ ಹೆಚ್ಚುವರಿ ಸೌಲಭ್ಯ; ನ್ಯಾಯಬೆಲೆ ಅಂಗಡಿಯ e-PoS ಯಂತ್ರದ ಮೂಲಕ ಬಯೋಮೆಟ್ರಿಕ್/ಐರಿಸ್ ದೃಢೀಕರಣದ ವ್ಯವಸ್ಥೆ ಮುಂದುವರಿದಿದೆ.