ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

ತೀರ್ಥಹಳ್ಳಿ ಸೇರಿ 40 ತಾಲೂಕು ಬರಪೀಡಿತ: ರಾಜ್ಯದಲ್ಲಿ ಬರಪೀಡಿತ ತಾಲೂಕು ಸಂಖ್ಯೆ ಒಟ್ಟು 217ಕ್ಕೆ ಏರಿಕೆ

 

ತೀರ್ಥಹಳ್ಳಿ ಸೇರಿ 40 ತಾಲೂಕು ಬರಪೀಡಿತ: ರಾಜ್ಯದಲ್ಲಿ ಬರಪೀಡಿತ ತಾಲೂಕು ಸಂಖ್ಯೆ ಒಟ್ಟು 217ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಹಂಗಾಮಿನ ಮಳೆ ಕೊರತೆಯಿಂದಾಗಿ ತೀರ್ಥಹಳ್ಳಿ ಸೇರಿದಂತೆ  40 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ರಾಜ್ಯ ಸರ್ಕಾರ ಘೋಷಿಸಿದೆ. ಇದರಿಂದ 240 ತಾಲೂಕುಗಳ ಪೈಕಿ ಬರಪೀಡಿತ ತಾಲೂಕುಗಳ ಒಟ್ಟು ಸಂಖ್ಯೆ 217ಕ್ಕೆ ಏರಿಕೆಯಾಗಿದೆ. ಕೇವಲ 23 ತಾಲೂಕುಗಳು ಮಾತ್ರ ಪ್ರಸ್ತುತ ಪಟ್ಟಿಯಿಂದ ಹೊರಗಿವೆ.

ಕಂದಾಯ ಇಲಾಖೆಯ RD 586 TNR 2026 (Part-1), ದಿನಾಂಕ 01-10-2026ರ ಆದೇಶದಂತೆ ಈ ಘೋಷಣೆ ಮಾಡಲಾಗಿದೆ. KSNDMC ನಡೆಸಿದ ವೈಜ್ಞಾನಿಕ ಮೌಲ್ಯಮಾಪನ ಹಾಗೂ ನಂತರದ Ground Truthing ಆಧಾರದ ಮೇಲೆ ಹೊಸ ತಾಲೂಕುಗಳನ್ನು ಪಟ್ಟಿಗೆ ಸೇರಿಸಲಾಗಿದೆ. ಲಭ್ಯವಿರುವ ವರದಿಗಳ ಪ್ರಕಾರ ಹೊಸದಾಗಿ ಸೇರ್ಪಡೆಯಾದ 40 ತಾಲೂಕುಗಳ ಪೈಕಿ 24 ತಾಲೂಕುಗಳನ್ನು ತೀವ್ರ ಬರಪೀಡಿತ ಹಾಗೂ 16 ತಾಲೂಕುಗಳನ್ನು ಸಾಧಾರಣ ಬರಪೀಡಿತ ಎಂದು ವರ್ಗೀಕರಿಸಲಾಗಿದೆ.

ತೀರ್ಥಹಳ್ಳಿಯೂ ಪಟ್ಟಿಯಲ್ಲಿ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಶಿವಮೊಗ್ಗ, ಶಿಕಾರಿಪುರ, ಸೊರಬ ಮತ್ತು ತೀರ್ಥಹಳ್ಳಿ ತಾಲೂಕುಗಳು ಹೊಸದಾಗಿ ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗಿವೆ. ತೀರ್ಥಹಳ್ಳಿಯ ಸೇರ್ಪಡೆಯಿಂದ ಮಲೆನಾಡಿನಲ್ಲಿಯೂ ಮಳೆ ಕೊರತೆ ಹಾಗೂ ಕೃಷಿ ಪರಿಸ್ಥಿತಿಯ ಕುರಿತು ಸರ್ಕಾರದ ಗಮನ ಹೆಚ್ಚಾಗಿದೆ.

ನಾಲ್ಕು ಹಂತಗಳಲ್ಲಿ ಬರ ಘೋಷಣೆ :  2026ರ ಮುಂಗಾರು ಹಂಗಾಮಿನಲ್ಲಿ ಸರ್ಕಾರ ಹಂತ ಹಂತವಾಗಿ ಬರ ತಾಲೂಕುಗಳನ್ನು ಘೋಷಿಸಿದೆ.

  • ಆಗಸ್ಟ್ 27: 101 ತಾಲೂಕು
  • ಸೆಪ್ಟೆಂಬರ್ 17: 23 ತಾಲೂಕು
  • ಸೆಪ್ಟೆಂಬರ್ 22: 53 ತಾಲೂಕು
  • ಅಕ್ಟೋಬರ್ 1: 40 ತಾಲೂಕು

ಈ ನಾಲ್ಕು ಹಂತಗಳ ಬಳಿಕ ಒಟ್ಟು ಸಂಖ್ಯೆ 217 ತಾಲೂಕುಗಳಿಗೆ ತಲುಪಿದೆ.

ಬೆಳೆ ನಷ್ಟದ ಅಂದಾಜು ಮುಂದುವರಿಕೆ :  ಮೊದಲ 177 ಬರಪೀಡಿತ ತಾಲೂಕುಗಳಲ್ಲಿ ಬೆಳೆ ನಷ್ಟದ ಮೌಲ್ಯಮಾಪನ ಪೂರ್ಣಗೊಂಡಿದ್ದು, ಸುಮಾರು 47.09 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಮತ್ತು ಸುಮಾರು ₹46,324.5 ಕೋಟಿ ನಷ್ಟ ಅಂದಾಜಿಸಲಾಗಿದೆ. ಹೊಸದಾಗಿ ಸೇರ್ಪಡೆಯಾದ 40 ತಾಲೂಕುಗಳಲ್ಲಿ ನಷ್ಟದ ಮೌಲ್ಯಮಾಪನ ಇನ್ನೂ ನಡೆಯುತ್ತಿದೆ. ಎಲ್ಲಾ 217 ತಾಲೂಕುಗಳ ನಷ್ಟ ಒಟ್ಟುಗೂಡಿದ ಬಳಿಕ ರಾಜ್ಯದ ಒಟ್ಟು ನಷ್ಟ ₹50,000 ಕೋಟಿಯಿಂದ ₹60,000 ಕೋಟಿವರೆಗೆ ತಲುಪಬಹುದು ಎಂದು ಕಂದಾಯ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ.

ಬರಪೀಡಿತ ತಾಲೂಕುಗಳ ಜಿಲ್ಲಾಧಿಕಾರಿಗಳಿಗೆ SDRF ನಿಯಮಗಳಡಿ ಅಗತ್ಯ ಬರ ಪರಿಹಾರ ಮತ್ತು ತುರ್ತು ಕ್ರಮಗಳನ್ನು ಕೈಗೊಳ್ಳಲು ಅಧಿಕಾರ ನೀಡಲಾಗಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಬೆಳೆ ನಷ್ಟದ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.