ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

ರೋಟರಿ ಶಿಶುವಿಹಾರದಲ್ಲಿ ಗಾಂಧಿ ಜಯಂತಿ ಆಚರಣೆ


ತೀರ್ಥಹಳ್ಳಿ: ರೋಟರಿ ಶಿಶುವಿಹಾರ, ತೀರ್ಥಹಳ್ಳಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ರೋಟರಿ ಜಿಲ್ಲೆ 3182ರ ಸಹಾಯಕ ಗವರ್ನರ್ ರೊ. ನಾಗರಾಜ್ ಎಸ್., ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನದ ಮಹತ್ವವನ್ನು ಸಣ್ಣ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ತಿಳಿಸುವುದು ಉತ್ತಮ ಕಾರ್ಯವಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳು ನಮ್ಮ ಸಂಸ್ಕೃತಿ ಮತ್ತು ಮಹನೀಯರ ಆದರ್ಶಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

“ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ” ಎಂಬ ನಾಣ್ನುಡಿಯಂತೆ, ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ಜ್ಞಾನ ಮತ್ತು ಉತ್ತಮ ಮೌಲ್ಯಗಳನ್ನು ನೀಡುವುದು ಅಗತ್ಯವಾದ್ದರಿಂದ  ಈ ಕಾರ್ಯಕ್ರಮವನ್ನು ಆಯೋಜಿಸಿದ ಮುಖ್ಯ ಶಿಕ್ಷಕಿ ಶ್ರೀಮತಿ ಶ್ವೇತಾ ಆಚಾರ್ಯ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ರೊ. ಕೆ.ಪಿ.ಎಸ್. ಸ್ವಾಮಿ, ರೊ. ಕೆ.ಟಿ. ಚಂದ್ರಪ್ಪ, ರೋಟರಿ ಕ್ಲಬ್ ತೀರ್ಥಹಳ್ಳಿಯ ಮಾಜಿ ಅಧ್ಯಕ್ಷ ರೊ. ಎನ್.ಎಚ್. ರಮೇಶ್ ಹಾಗೂ ಇತರರು ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ರೋಟರಿ ಶಿಶುವಿಹಾರ ತೀರ್ಥಹಳ್ಳಿಯ ಅಧ್ಯಕ್ಷ ರೊ. ಬಿ.ವಿ. ಶ್ರೀಧರ್ ವಹಿಸಿದ್ದರು.

ಇದೇ ದಿನ ಹುಟ್ಟುಹಬ್ಬವನ್ನು ಆಚರಿಸಿಕೊಂಡ ರೊ. ಕೆ.ಟಿ. ಚಂದ್ರಪ್ಪ ಅವರು ಮಕ್ಕಳಿಗೆ ಸಿಹಿ ವಿತರಿಸಿದರು.

ರೋಟರಿ ಕ್ಲಬ್ ತೀರ್ಥಹಳ್ಳಿಯ ಕಾರ್ಯದರ್ಶಿ ರೊ. ಎಂ.ಸಿ. ಸಂಜಯ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಎಲ್ಲರಿಗೂ ವಂದಿಸಿದರು.