ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

ತೀರ್ಥಹಳ್ಳಿಯಲ್ಲಿ ರಾಮೇಶ್ವರ ಸನ್ನಿಧಿಯಲ್ಲಿ ಶತರುದ್ರಾಭಿಷೇಕ, ಸರ್ವ ಸದಸ್ಯರ ಸಭೆ ಹಾಗೂ ಗುರುತಿನ ಚೀಟಿ ವಿತರಣೆ ಅರ್ಚಕರ ಹಿತಾಸಕ್ತಿಗೆ ಒಕ್ಕೂಟದಿಂದ ಹಲವು ಯೋಜನೆಗಳಿಗೆ ಚಿಂತನೆ



ಅರ್ಚಕರ ಹಿತಾಸಕ್ತಿಗೆ ಒಕ್ಕೂಟದಿಂದ ಹಲವು ಯೋಜನೆಗಳಿಗೆ ಚಿಂತನೆ

ತೀರ್ಥಹಳ್ಳಿ: ಧಾರ್ಮಿಕ ದತ್ತಿ ಇಲಾಖೆಯ ಅರ್ಚಕ, ಆಗಮಿಕ ಮತ್ತು ಉಪಾಧಿವಂತರ ಒಕ್ಕೂಟದ ತೀರ್ಥಹಳ್ಳಿ ತಾಲೂಕು ಶಾಖೆ ವತಿಯಿಂದ ತಾಲೂಕಿನ ಪುರಾಧೀಶ್ವರ ಶ್ರೀ ರಾಮೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಗುರುವಾರ ಶತರುದ್ರಾಭಿಷೇಕ ನೆರವೇರಿಸಲಾಯಿತು.

ವೃಷ್ಟಿಯ ಅಸಮತೋಲನದಿಂದ ಪ್ರಕೃತಿಯಲ್ಲಿ ಉಂಟಾಗುತ್ತಿರುವ ಬದಲಾವಣೆಗಳು, ಹೆಚ್ಚುತ್ತಿರುವ ಉಷ್ಣತೆ ಹಾಗೂ ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಅನಾಹುತಗಳ ಕುರಿತು ಚಿಂತಿಸಿ, ಲೋಕಕಲ್ಯಾಣ, ಉತ್ತಮ ಮಳೆ ಹಾಗೂ ಪ್ರಕೃತಿಯ ಸಮತೋಲನಕ್ಕಾಗಿ ಸಂಕಲ್ಪ ಕೈಗೊಳ್ಳಲಾಯಿತು.

ಬಳಿಕ ಶ್ರೀ ಗಾಯತ್ರೀ ಮಂದಿರದಲ್ಲಿ ಒಕ್ಕೂಟದ ಸರ್ವ ಸದಸ್ಯರ ಸಭೆಯು ಶ್ರೀ ರಾಘವೇಂದ್ರ ಭಟ್ ಕೋಣಂದೂರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.  ಸಭೆಯಲ್ಲಿ ಒಕ್ಕೂಟದ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ಹಂಚಿಕೊಳ್ಳುವುದರೊಂದಿಗೆ ಅರ್ಚಕರ ಸಮಸ್ಯೆಗಳು ಹಾಗೂ ಅವುಗಳ ಪರಿಹಾರದ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಅಧ್ಯಕ್ಷರು, ಉತ್ತರ ಭಾರತದ ದೇವಸ್ಥಾನಗಳ ಪ್ರವಾಸಕ್ಕಾಗಿ ಸರ್ಕಾರ ಏರ್ಪಡಿಸಿರುವ ಉಚಿತ ‘ಭಾರತ್ ಗೌರವ ಯಾತ್ರೆ’ಯ ಪ್ರಯೋಜನವನ್ನು ಅರ್ಚಕರು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ತಸ್ತಿಕ್ ಹಣ ಇನ್ನೂ ದೊರೆಯದ ಅರ್ಚಕರು ಅಗತ್ಯ ದಾಖಲೆಗಳನ್ನು ತಾಲೂಕು ಕಚೇರಿಗೆ ಸಲ್ಲಿಸುವಂತೆಯೂ ಸೂಚಿಸಿದರು.

ತೀರ್ಥಹಳ್ಳಿ ತಾಲೂಕಿನಲ್ಲಿ 150ಕ್ಕೂ ಹೆಚ್ಚು ‘ಸಿ’ ದರ್ಜೆಯ ಮುಜರಾಯಿ ದೇವಸ್ಥಾನಗಳಿದ್ದು, ಇಲ್ಲಿನ ಅರ್ಚಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಒಕ್ಕೂಟದಿಂದ ಸಾಧ್ಯವಿರುವ ನೆರವು ಹಾಗೂ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಒಕ್ಕೂಟಕ್ಕೆ ಸ್ವಂತ ಕಟ್ಟಡ ಹಾಗೂ ಅಗತ್ಯ ಸಂಪನ್ಮೂಲಗಳ ಕೊರತೆಯಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದಿಂದ ಸೂಕ್ತ ಸೌಲಭ್ಯ ಅಥವಾ ಸ್ಥಳಾವಕಾಶ ಪಡೆಯಲು ಪ್ರಯತ್ನಿಸಲಾಗುವುದು. ಕೆಲವು ದೇವಸ್ಥಾನಗಳಲ್ಲಿ ಪೂಜಾ ಸಾಮಗ್ರಿಗಳ ಕೊರತೆಯಿರುವುದರಿಂದ ತಾಮ್ರದ ಮತ್ತು ಹಿತ್ತಾಳೆಯ  ಹರಿವಾಣ, ಕಲಶ,ಆರತಿ ತಟ್ಟೆ, ಗಂಟೆ, ಶಂಖ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ದಾನಿಗಳಿಂದ ಸಂಗ್ರಹಿಸಿ ಅರ್ಚಕರಿಗೆ ವಿತರಿಸುವ ಯೋಜನೆಯನ್ನೂ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ತಾಲೂಕಿನ ಮುಜರಾಯಿ ಅರ್ಚಕರಿಗೆ ಗುರುತಿನ ಚೀಟಿ ವಿತರಿಸುವ ಕಾರ್ಯ ನಡೆಯುತ್ತಿದ್ದು, ಇದರಿಂದ ಅರ್ಚಕರಿಗೆ ಗುರುತಿನ ಮಾನ್ಯತೆ ದೊರೆಯುವುದರೊಂದಿಗೆ ಮುಂದಿನ ದಿನಗಳಲ್ಲಿ ವಿವಿಧ ಅವಕಾಶಗಳನ್ನು ಪಡೆಯಲು ಸಹಕಾರಿಯಾಗಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ವರ್ಷದ ಎಲ್ಲ ದಿನಗಳಲ್ಲಿಯೂ ರಜೆ ಇಲ್ಲದೆ ಸೇವೆ ಸಲ್ಲಿಸುವ ಅರ್ಚಕರಿಗೆ ದೊರೆಯುತ್ತಿರುವ ವೇತನ ಕನಿಷ್ಠ ಮಟ್ಟದಲ್ಲಿದೆ. ಈ ಹಿನ್ನೆಲೆಯಲ್ಲಿ ಅರ್ಚಕರಿಗೆ  ತೊಂದರೆಯಾಗದಂತೆ ಸರ್ಕಾರ ಕಟ್ಟು ನಿಟ್ಟಿನ ಕಾನೂನು ಹಾಗೂ ನಿಯಮಗಳಿಂದ ತೊಂದರೆ ಕೊಡಬಾರದು. ಅರ್ಚಕರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರಕ್ಕಾಗಿ ಒಕ್ಕೂಟದ ವತಿಯಿಂದ ಮನವಿ ಸಲ್ಲಿಸಲಾಗುವುದು ಎಂದು ಅಧ್ಯಕ್ಷರು ಹೇಳಿದರು.

ಭಕ್ತರ ಏಳಿಗೆ ಹಾಗೂ ಲೋಕಕಲ್ಯಾಣಕ್ಕಾಗಿ ಪ್ರತಿನಿತ್ಯ ತಮ್ಮ ಗ್ರಾಮದ ದೇವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ, “ಸರ್ವೇ ಜನಾಃ ಸುಖಿನೋ ಭವಂತು” ಎಂದು ಪ್ರಾರ್ಥಿಸುವ ಅರ್ಚಕರ ಸೇವೆಗೆ ಸಮಾಜದ ಕೊಡುಗೆಯೂ ಅಗತ್ಯವಾಗಿದೆ. ಆದ್ದರಿಂದ ಅರ್ಚಕರ ಕಲ್ಯಾಣ ಹಾಗೂ ಒಕ್ಕೂಟದ ಕಾರ್ಯಚಟುವಟಿಕೆಗಳಿಗೆ ಉದಾರ ಮನಸ್ಸಿನ ದಾನಿಗಳು ಸಾಧ್ಯವಾದಷ್ಟು ಆರ್ಥಿಕ ಹಾಗೂ ವಸ್ತುರೂಪದ ನೆರವು ನೀಡಬೇಕೆಂದು ಮನವಿ ಮಾಡಿದರು.

ಒಕ್ಕೂಟದ ಕಾರ್ಯದರ್ಶಿ ಶ್ರೀ ದರ್ಶನ್ ಬಾಯರ್ ಸ್ವಾಗತಿಸಿದರು. ಖಜಾಂಚಿ ಶ್ರೀ ಮುರಳೀಧರ್ ವಂದಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಅರ್ಚಕರಿಗೆ ಹಾಗೂ ಸಹಕಾರ ನೀಡಿದ ಶ್ರೀ ರಾಮೇಶ್ವರ ದೇವಸ್ಥಾನದ ಅರ್ಚಕ ಪರಿವಾರ, ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತು ಶ್ರೀ ಗಾಯತ್ರೀ ಮಂದಿರದ ಪದಾಧಿಕಾರಿಗಳಿಗೆ ಒಕ್ಕೂಟದ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.