ತೀರ್ಥಹಳ್ಳಿ:
ಅಳಿವಿನ ಅಂಚಿನಲ್ಲಿರುವ ಸಾಂಪ್ರದಾಯಿಕ ತಾಮ್ರದ ಪಾತ್ರೆ ತಯಾರಿಕಾ ಕಲೆಯನ್ನು ಜೀವಂತವಾಗಿಟ್ಟುಕೊಂಡಿದ್ದ ಅಪರೂಪದ ಕುಶಲಕರ್ಮಿ ಜೋಸೆಫ್ ಡಿಸೋಜ ಅವರಿಗೆ ಪಟ್ಟಣದ ಬಾಳೇಬೈಲಿನಲ್ಲಿ ಸ್ಥಳೀಯರು ಆತ್ಮೀಯವಾಗಿ ಗೌರವಿಸಿ, ಪ್ರೀತಿಯ ಬೀಳ್ಕೊಡುಗೆ ನೀಡಿದರು. ಬದುಕಿನ ಅನಿವಾರ್ಯತೆಗಾಗಿ ಹಾಸನದಿಂದ ತೀರ್ಥಹಳ್ಳಿಗೆ ಬಂದು ನೆಲಸಿದ್ದ ಅವರು, ತಮ್ಮ ಸೌಮ್ಯ ವ್ಯಕ್ತಿತ್ವ, ಗೌರವಯುತ ನಡೆ-ನುಡಿ ಹಾಗೂ ಪ್ರೀತಿಯಿಂದ ಎಲ್ಲರ ಅಚ್ಚುಮೆಚ್ಚಿನವರಾಗಿದ್ದರು. ಇದೀಗ ವೈಯಕ್ತಿಕ ಕಾರಣಗಳಿಂದಾಗಿ ತಮ್ಮ ಸ್ವಂತ ಊರಾದ ಹಾಸನಕ್ಕೆ ಮರಳಲು ನಿರ್ಧರಿಸಿದ ಹಿನ್ನೆಲೆಯಲ್ಲಿ, ಸ್ಥಳೀಯರು ಅವರ ಪಾತ್ರೆ ತಯಾರಿಕಾ ಘಟಕದಲ್ಲೇ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ತಾಮ್ರದ ಲೋಹದ ಪಾತ್ರೆಗಳು, ಮುಖ್ಯವಾಗಿ ನೀರಿನ ಹಂಡೆ ಹಾಗೂ ಬಾಯ್ಲರ್‌ಗಳ ತಯಾರಿಕೆಯಲ್ಲಿ ವಿಶೇಷ ಪ್ರಾವೀಣ್ಯತೆ ಹೊಂದಿದ್ದ ಜೋಸೆಫ್ ಅವರು ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಬಾಳೇಬೈಲಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆಧುನಿಕ ಯುಗದಲ್ಲಿ ಸ್ಟೀಲ್ ಮತ್ತು ಪ್ಲಾಸ್ಟಿಕ್ ಪಾತ್ರೆಗಳ ಬಳಕೆ ಹೆಚ್ಚಾಗುತ್ತಿದ್ದರೂ, ಸಾಂಪ್ರದಾಯಿಕ ತಾಮ್ರದ ಕಲಾಕೃತಿಗಳನ್ನು ರೂಪಿಸುವಲ್ಲಿ ಅವರ ಕೊಡುಗೆ ಅಪಾರವಾದದ್ದು.
ನೆನಪುಗಳು ಸದಾ ಜೀವಂತ: ಸನ್ಮಾನ ಸ್ವೀಕರಿಸಿ ಮಾತನಾಡಿದ ಜೋಸೆಫ್ ಡಿಸೋಜ, "ಈ ಮಟ್ಟದ ಪ್ರೀತಿ ಮತ್ತು ಗೌರವವನ್ನು ನಾನು ನಿರೀಕ್ಷಿಸಿರಲಿಲ್ಲ. ಬಾಳೇಬೈಲಿನ ಪರಿಸರ ಹಾಗೂ ತೀರ್ಥಹಳ್ಳಿಯ ದಿನಗಳ ನೆನಪು ನನ್ನೊಂದಿಗೆ ಸದಾ ಇರುತ್ತವೆ. ಇಷ್ಟೊಂದು ಆತ್ಮೀಯವಾಗಿ ಬೀಳ್ಕೊಡುತ್ತಿರುವುದಕ್ಕೆ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು," ಎಂದು ಭಾವುಕರಾಗಿ ನುಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಸದಸ್ಯರಾದ ರವೀಶ್ ಬಾಬಿ, ರಾಘವೇಂದ್ರ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ, ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಸತೀಶ ಟಿ.ವಿ., ನಚಿಕೇತ್ ಶೆಟ್ಟಿ ಹಾಗೂ ಅನೇಕ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದು, ಜೋಸೆಫ್ ಅವರ ಮುಂದಿನ ಜೀವನಕ್ಕೆ ಶುಭ ಹಾರೈಸಿದರು.
