ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

ಕಾರ್ಪೋರೇಟ್‌ ಕಂಪೆನಿಗಳಿಗೆ ರತ್ನಗಂಬಳಿ ಸ್ವಾಗತಾರ್ಹ ಆದರೆ ಗ್ರಾಮೀಣ ಆಸ್ಪತ್ರಗೂ ನೀಡಿ ಕನಿಷ್ಟ ಗೋಣಿ ಭಾಗ್ಯ.. .... ಕಾರ್ಪೊರೇಟ್‌ಗೆ ತಕ್ಷಣದ ಸೇವೆ, ಬಡವರ ಆಸ್ಪತ್ರೆಗೆ ಸದಾ ವಿಳಂಬವೇ?



ಉದ್ಯಮಕ್ಕಷ್ಟೇ 'ಸುಲಭ ಸೌಲಭ್ಯ'ವೇ? ಗ್ರಾಮೀಣ ಆಸ್ಪತ್ರೆಗಳಿಗೂ ಸಿಗಲಿ 'ಥರ್ಡ್ ಪಾರ್ಟಿ' ತಪಾಸಣೆ ಭಾಗ್ಯ! ಎಂಬುದು ಬಡರೋಗಿಗಳ ಆಗ್ರಹವಾಗಿದೆ.

ರಾಜ್ಯ ಸರ್ಕಾರವು ಇತ್ತೀಚೆಗೆ 'ಸುಲಭ ವಹಿವಾಟು' (EoDB) ಮತ್ತು ಆಡಳಿತ ಸುಧಾರಣೆಯ ಭಾಗವಾಗಿ ವಿವಿಧ ಇಲಾಖೆಗಳಲ್ಲಿ ನಿಯಂತ್ರಣಾತ್ಮಕ ತಪಾಸಣೆ ಹಾಗೂ ಆಡಿಟಿಂಗ್ ಕಾರ್ಯಗಳು ಕಾಲಮಿತಿಯಲ್ಲಿ ಪೂರ್ಣಗೊಳ್ಳಲು ಮಾನ್ಯತೆ ಪಡೆದ ಖಾಸಗಿ (Third-Party) ಏಜೆನ್ಸಿಗಳ ಸೇವೆ ಪಡೆದುಕೊಳ್ಳಲು ಕ್ರಾಂತಿಕಾರಿ ಆದೇಶ ಹೊರಡಿಸಿದೆ. ಉದ್ಯಮ, ಕಾರ್ಖಾನೆ ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿ ಆಡಳಿತಾತ್ಮಕ ವಿಳಂಬವನ್ನು ತಪ್ಪಿಸಲು ಕೈಗೊಂಡಿರುವ ಈ ಹೆಜ್ಜೆ ಖಂಡಿತವಾಗಿಯೂ ಶ್ಲಾಘನೀಯ. ಆದರೆ, ಇದೇ ರೀತಿಯ ಕಾರ್ಯಕ್ಷಮತೆ ಹಾಗೂ ತುರ್ತು ನಿರ್ಧಾರಗಳ ಅಗತ್ಯ ತೀವ್ರವಾಗಿರುವುದು ನಮ್ಮ ಗ್ರಾಮೀಣ ಮತ್ತು ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಎನ್ನುವುದನ್ನು ಸರ್ಕಾರ ಮರೆಯಬಾರದಾಗಿತ್ತು.

ಕಳೆದ ಸಾಲಿನ ಬಜೆಟ್‌ನಲ್ಲಿ ಸರ್ಕಾರವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕ್ಷೇತ್ರಕ್ಕಾಗಿ ₹17,473.4 ಕೋಟಿ ಮೀಸಲಿಟ್ಟಿತ್ತಾದರೂ  ಬಹುತೇಕ ವೆಚ್ಚವನ್ನು ಕಟ್ಟಡ ಮತ್ತು ಖರೀದಿ ಇತ್ಯಾದಿಗಳಿಗೇ ಮೀಸಲಾಗಿಟ್ಟಿದೆ. ಕರ್ನಾಟಕದಲ್ಲಿ ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಸುಮಾರು 2,300 ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHCs), ಅಂದಾಜು 200ಕ್ಕೂ ಹೆಚ್ಚು ಸಮುದಾಯ ಆರೋಗ್ಯ ಕೇಂದ್ರಗಳು (CHCs) ಮತ್ತು 140ಕ್ಕೂ ಹೆಚ್ಚು ತಾಲೂಕು ಆಸ್ಪತ್ರೆಗಳು ಇವೆ. ಇವುಗಳಲ್ಲಿರುವ ಎಕ್ಸ್‌ರೇ ಯಂತ್ರಗಳು, ಅಲ್ಟ್ರಾಸೌಂಡ್ ಸ್ಕ್ಯಾನರ್‌ಗಳು, ರಕ್ತ ಪರೀಕ್ಷಾ ಯಂತ್ರಗಳು (Pathology Analyzers), ಡಯಾಲಿಸಿಸ್ ಘಟಕಗಳು, ವೆಂಟಿಲೇಟರ್‌ಗಳು ಮತ್ತು ಇಸಿಜಿ (ECG) ಯಂತ್ರಗಳ ನಿರ್ವಹಣೆಗೆ ತಗಲುವ ವೆಚ್ಚವನ್ನು ಎ ಎಂಸಿ ಗೆ ವಹಿಸಿದಲ್ಲಿ ಸರ್ಕಾರಕ್ಕೆ ಹೆಚ್ಚೆಂದರೆ ೫೦ರಿಂದ ೬೦ಕೋಟಿರೂ.ಗಳ ವೆಚ್ಚ ತಗುಲಬಹುದು. ಆದರೆ ಬಡರೋಗಿಗಳ ಪಾಲಿಗೆ ಆಗುವ ಉಳಿತಾಯ ಎಷ್ಟು ಎಂಬುದನ್ನೂ ವಿಮರ್ಷಿಸಿ ಮಾನ್ಯ ಆರೋಗ್ಯ ಸಚಿವರು ಮತ್ತು ಮುಖ್ಯಮಂತ್ರಿಗಳು ಕ್ರಮಕೈಗೊಳ್ಳಬೇಕೆಂಬುದು ಬಡರೋಗಿಗಳ ಆಗ್ರಹವಾಗಿದೆ.

ಗ್ರಾಮೀಣ ಹಾಗೂ ತಾಲೂಕು ಹಂತದ ಸಾರ್ವಜನಿಕ ಆಸ್ಪತ್ರೆಗಳು ಬಡ ಮತ್ತು ಮಧ್ಯಮ ವರ್ಗದ ಜನರ ಆರೋಗ್ಯ ರಕ್ಷಣೆಯ ಏಕೈಕ ಆಸರೆಯಾಗಿವೆ. ಆದರೆ, ಅನೇಕ ತಾಲೂಕು ಆಸ್ಪತ್ರೆಗಳಲ್ಲಿ ಲಕ್ಷಾಂತರ, ಕೋಟ್ಯಂತರ ರೂಪಾಯಿ ಮೌಲ್ಯದ ಎಕ್ಸ್‌ರೇ ಮೆಷಿನ್‌ಗಳು, ಸ್ಕ್ಯಾನಿಂಗ್ ಯಂತ್ರಗಳು, ಲ್ಯಾಬ್ ಉಪಕರಣಗಳು, ಇಸಿಜಿ ಹಾಗೂ ವೆಂಟಿಲೇಟರ್‌ಗಳು ಸಣ್ಣಪುಟ್ಟ ತಾಂತ್ರಿಕ ದೋಷಗಳಿಂದಾಗಿ ಅಥವಾ ನಿಯಮಿತ ಸೇವೆ/ಕ್ಯಾಲಿಬ್ರೇಷನ್ ಇಲ್ಲದೆ ಧೂಳು ಹಿಡಿಯುತ್ತಿವೆ.

ಒಂದು ಉಪಕರಣ ಕೆಟ್ಟುನಿಂತರೆ, ಅದನ್ನು ದುರಸ್ತಿ ಮಾಡಲು ಸರಕಾರಿ ಇಲಾಖಾ ಹಂತದ ಅನುಮತಿ, ಟೆಂಡರ್ ಪ್ರಕ್ರಿಯೆ ಮತ್ತು ಬಯೋಮೆಡಿಕಲ್ ಇಂಜಿನಿಯರ್‌ಗಳು ಭೇಟಿ ನೀಡಲು ತಿಂಗಳುಗಟ್ಟಲೆ ಸಮಯ ಹಿಡಿಯುತ್ತದೆ. ಇದರಿಂದಾಗಿ ಗ್ರಾಮೀಣ ಭಾಗದ ಬಡ ರೋಗಿಗಳು ಅನಿವಾರ್ಯವಾಗಿ ದುಬಾರಿ ವೆಚ್ಚ ತೆತ್ತು ಖಾಸಗಿ ಲ್ಯಾಬ್‌ಗಳಿಗೆ ಮತ್ತು ಸಿಟಿ ಸೆಂಟರ್‌ಗಳಿಗೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರವು ಉದ್ಯಮ ಕ್ಷೇತ್ರಕ್ಕೆ ಅನ್ವಯಿಸಿರುವ ಥರ್ಡ್ ಪಾರ್ಟಿ ತಪಾಸಣೆ ಹಾಗೂ ಕಾಲಬದ್ಧ ಸೇವೆಯ ನೀತಿಯನ್ನು ಆರೋಗ್ಯ ಇಲಾಖೆಗೂ ವಿಸ್ತರಿಸಿದರೆ ಅದ್ಭುತ ಬದಲಾವಣೆ ಸಾಧ್ಯವಿತ್ತು. ನಿಗದಿತ ಕಾಲಮಿತಿಯಲ್ಲಿ ಯಂತ್ರಗಳ ದುರಸ್ತಿ, ಖಾಸಗಿ ಅಧಿಕೃತ ಏಜೆನ್ಸಿಗಳಿಗೆ ತಪಾಸಣೆ ಮತ್ತು ಬಿಡಿಭಾಗಗಳ ನಿರ್ವಹಣೆ ಅಂದರೆ CAMC (ಸಂಪೂರ್ಣ ವಾರ್ಷಿಕ ನಿರ್ವಹಣಾ ಒಪ್ಪಂದ) ಹೊಣೆ ನೀಡಿದರೆ, ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಯಂತ್ರಗಳು ಮತ್ತೆ ಸಕ್ರಿಯಗೊಳ್ಳುತ್ತವೆ.

ಆವರ್ತಕ ಆಡಿಟಿಂಗ್ ಮತ್ತು ಸುರಕ್ಷತೆ: ಎಕ್ಸ್‌ರೇ ಯಂತ್ರಗಳ ವಿಕಿರಣ ಪರೀಕ್ಷೆ (Atomic Energy Regulatory Board ) * ನಿಯಮಾವಳಿಯಂತೆ ವಿಕಿರಣ ಸುರಕ್ಷತಾ ಪರೀಕ್ಷೆ (Quality Assurance Test) ಮತ್ತು ಲ್ಯಾಬ್ ಉಪಕರಣಗಳ ನಿಖರತೆಯ ಪರೀಕ್ಷೆಯನ್ನು ಥರ್ಡ್ ಪಾರ್ಟಿ ಏಜೆನ್ಸಿಗಳ ಮೂಲಕ ಕಾಲಕಾಲಕ್ಕೆ ಕಡ್ಡಾಯವಾಗಿ ಮಾಡಿಸುವುದರಿಂದ ರೋಗಿಗಳಿಗೆ ನಿಖರವಾದ ಪರೀಕ್ಷಾ ವರದಿಗಳು ಲಭ್ಯವಾಗುತ್ತವೆ.

ದಾನವಾಗಿ ಬಂದ ಉಪಕರಣಗಳ ಸದ್ಬಳಕೆ: CSR ( ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ) ನಿಧಿ ಅಥವಾ ಉದಾರ ಮನಸ್ಸಿನ ದಾನಿಗಳಿಂದ ತಾಲೂಕು ಆಸ್ಪತ್ರೆಗಳಿಗೆ ಬಂದಿರುವ ಮತ್ತು ಬರುವ ಯಂತ್ರಗಳನ್ನು ಇಲಾಖೆಯ ಸ್ಟಾಕ್ ರಿಜಿಸ್ಟರ್‌ಗೆ ಸೇರಿಸಿ, ಥರ್ಡ್ ಪಾರ್ಟಿ ನಿರ್ವಹಣಾ ವ್ಯಾಪ್ತಿಗೆ ತಂದರೆ ಅವು ಮೂಲೆಗುಂಪಾಗುವುದು ತಪ್ಪುತ್ತದೆ.

ಆದೇಶದ ವ್ಯಾಪ್ತಿ ವಿಸ್ತರಣೆ: ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೂ ತಾಲೂಕು ಆಸ್ಪತ್ರೆಗಳ ಉಪಕರಣಗಳ ಪರೀಕ್ಷೆ ಮತ್ತು ಆಡಿಟಿಂಗ್‌ಗೆ  NABL (National Accreditation Board for Testing and Calibration Laboratories - ಪರೀಕ್ಷೆ ಮತ್ತು ಕ್ಯಾಲಿಬ್ರೇಷನ್ ಪ್ರಯೋಗಾಲಯಗಳ ರಾಷ್ಟ್ರೀಯ ಮಾನ್ಯತೆ ಮಂಡಳಿ)  ಹಾಗೂ QCI (Quality Council of India - ಭಾರತೀಯ ಗುಣಮಟ್ಟ ಮಂಡಳಿ)  ಮಾನ್ಯತೆ ಪಡೆದ ಥರ್ಡ್ ಪಾರ್ಟಿ ಏಜೆನ್ಸಿಗಳನ್ನು ಬಳಸಿಕೊಳ್ಳಲು ಸ್ಪಷ್ಟ ನಿರ್ದೇಶನ ನೀಡಬೇಕು.

ತಾಲೂಕು ಆಸ್ಪತ್ರೆಯ ARS ( ಆರೋಗ್ಯ ರಕ್ಷಾ ಸಮಿತಿ) ಗೆ ಸ್ಥಳೀಯವಾಗಿಯೇ ಮಾನ್ಯತೆ ಪಡೆದ ಮೂರನೇ ವ್ಯಕ್ತಿ ಏಜೆನ್ಸಿಗಳೊಂದಿಗೆ ತುರ್ತು CAMC (ಸಂಪೂರ್ಣ ವಾರ್ಷಿಕ ನಿರ್ವಹಣಾ ಒಪ್ಪಂದ) ಅಥವಾ AMC (ವಾರ್ಷಿಕ ನಿರ್ವಹಣಾ ಒಪ್ಪಂದ) ಮಾಡಿಕೊಳ್ಳಲು ಸೂಕ್ತ ಹಣಕಾಸಿನ ಅಧಿಕಾರ ನೀಡಬೇಕು.

ಇಡೀ ತಾಲೂಕು ಆಸ್ಪತ್ರೆಯಲ್ಲಿ ಯಾವ ಯಂತ್ರ ಕಾರ್ಯನಿರ್ವಹಿಸುತ್ತಿದೆ, ಯಾವುದು ಕೆಟ್ಟುನಿಂತಿದೆ ಎಂಬುದನ್ನು ಥರ್ಡ್ ಪಾರ್ಟಿ ಏಜೆನ್ಸಿಗಳು ಆನ್‌ಲೈನ್ ಡ್ಯಾಶ್‌ಬೋರ್ಡ್ ಮೂಲಕ ಪಾರದರ್ಶಕವಾಗಿ ಸಾರ್ವಜನಿಕವಾಗಿ ಪ್ರದರ್ಶಿಸುವ ವ್ಯವಸ್ಥೆಯಾಗಬೇಕು.

ಕೈಗಾರಿಕೆಗಳು ಮತ್ತು ಉದ್ಯಮಗಳಲ್ಲಿ ಸುಲಭ ವಹಿವಾಟು ಎಷ್ಟು ಮುಖ್ಯವೋ, ಗ್ರಾಮೀಣ ಬಡಜನರ ಆರೋಗ್ಯ ಭದ್ರತೆ ಅದಕ್ಕಿಂತಲೂ ಸಾವಿರ ಪಟ್ಟು ಮುಖ್ಯ. ಆಡಳಿತಾತ್ಮಕ ವಿಳಂಬವನ್ನು ತಪ್ಪಿಸಲು ಸರ್ಕಾರ ಕೈಗೊಂಡಿರುವ ಥರ್ಡ್ ಪಾರ್ಟಿ ತಪಾಸಣೆ ಮತ್ತು ಆಡಿಟಿಂಗ್ ನಿರ್ಧಾರದಲ್ಲಿ "ತಾಲೂಕು ಆಸ್ಪತ್ರೆಗಳು ಮತ್ತು ಕೆಟ್ಟುನಿಂತಿರುವ ವೈದ್ಯಕೀಯ ಯಂತ್ರೋಪಕರಣಗಳ ನಿರ್ವಹಣೆ" ಕಡ್ಡಾಯವಾಗಿ ಸೇರ್ಪಡೆಯಾಗಬೇಕು. ಆಗ ಮಾತ್ರ ಗ್ರಾಮೀಣ ಭಾಗದ ಪ್ರತಿಯೊಬ್ಬ ನಾಗರಿಕನಿಗೂ ಗುಣಮಟ್ಟದ ವೈದ್ಯಕೀಯ ಸೇವೆ ಕಾಲಮಿತಿಯಲ್ಲಿ ಸಿಗಲು ಸಾಧ್ಯ. ಈ ಕುರಿತು ಸರ್ಕಾರ ಆಲೋಚಿಸಬೇಕಿದೆ. ದೊಡ್ಡ ಆಸ್ಪತ್ರೆ  ಕಟ್ಟಡ ಕಟ್ಟಿದ ಮಾತ್ರಕ್ಕೆ ಆರೋಗ್ಯ ಲಭ್ಯವಾಗುವುದಿಲ್ಲ. ಸವಲತ್ತು ಸಿಕ್ಕಾಗ ಮಾತ್ರ ಆರೋಗ್ಯ ಭಾಗ್ಯ ದೊರೆಯುತ್ತದೆ. ಕಾರ್ಪೋರೇಟ್‌ ಜಗತ್ತಿಗೆ ರತ್ನಗಂಬಳಿ ಹಾಕಿದ್ದು ಸ್ವಾಗತಾರ್ಹವಾದರೂ ಆರೋಗ್ಯ ಭದ್ರತೆಯನ್ನೂ ಸರ್ಕಾರ ಒಂದು ಗ್ಯಾರೆಂಟಿಯಂತೆ ಪರಿಗಣಿಸಿ ಹೆಚ್ಚೇನೂ ಆರ್ಥಿಕ ಹೊರೆಯಾಗದಿರುವ ಈ ನಿರ್ಧಾರವನ್ನು ಕೈಗೊಳ್ಳಲೇ ಬೇಕಾಗಿದೆ ಎಂಬ ಆಗ್ರಹ ಸರ್ಕಾರಗಳ ಕಿವಿಗೆ ಕೇಳಿಸೀತೋ ಎನ್ನುವುದೋ ಯಕ್ಷಪ್ರಶ್ನೆಯಾಗಿದೆ.