ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

ಶತಮಾನ ಕಂಡ ಶಾಲೆ : ಹರಳೀಮಠದಲ್ಲಿ "ಗಿರಾಕಿಯೇ ಇಲ್ಲʼʼ ಮಾರಾಯ ನಗೆ ನಾಟಕ

ಶತಮಾನ ಕಂಡ ಶಾಲೆ : ಹರಳೀಮಠದಲ್ಲಿ "ಗಿರಾಕಿಯೇ ಇಲ್ಲʼʼ ಮಾರಾಯ ನಗೆ ನಾಟಕ
 ತೀರ್ಥಹಳ್ಳಿ ತಾಲ್ಲೂಕಿನ ಹರಳಿಮಠ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು 1925ರಲ್ಲಿ ಆರಂಭಗೊಂಡು ಸಾರ್ಥಕ ನೂರು ವರ್ಷಗಳನ್ನು ಪೂರೈಸಿದ್ದು, ಇದರ ಅಂಗವಾಗಿ ಅಕ್ಟೋಬರ್ 31 ಮತ್ತು ನವೆಂಬರ್ 1ರಂದು ಶತಮಾನೋತ್ಸವ ಹಾಗೂ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಶಾಲಾಭಿವೃದ್ಧಿ ಸಮಿತಿ ಹಾಗೂ ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.


ಅಕ್ಟೋಬರ್ 31ರ ಶನಿವಾರ ಬೆಳಿಗ್ಗೆ 10 ಗಂಟೆಗೆ ಶತಮಾನೋತ್ಸವ ಸಭಾ ಕಾರ್ಯಕ್ರಮ ನಡೆಯಲಿದ್ದು, ಗ್ರಾಮದ ಪ್ರಗತಿಪರ ಕೃಷಿಕರಾದ ಶ್ರೀ ಕೃಷ್ಣಕುಮಾರ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರಕಾಶ್ ಡಿ.ಆರ್ ವಹಿಸಲಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕ ಆರಗ ಜ್ಞಾನೇಂದ್ರ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ನಿಕಟಪೂರ್ವ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ. ಹಾಗೂ ವಿವಿಧ ಜನಪ್ರತಿನಿಧಿಗಳು ಮತ್ತು ತಾಲ್ಲೂಕಿನ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಹೇಮರಾಜ್ ಸಿ.ಟಿ ಮತ್ತು ಅಧ್ಯಕ್ಷರಾದ ಶ್ರೀ ರಮೇಶ್ ಎಚ್.ಎಸ್ ಉಪಸ್ಥಿತರಿರಲಿದ್ದು, ಇದೇ ವೇಳೆ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಸನ್ಮಾನ ನೆರವೇರಲಿದೆ.

ಅಂದು ಮಧ್ಯಾಹ್ನ 2 ಗಂಟೆಯಿಂದ ಹಳೆಯ ವಿದ್ಯಾರ್ಥಿಗಳಿಗೆ ಆಟೋಟ ಸ್ಪರ್ಧೆಗಳು, ಸಂಜೆ 5.30ಕ್ಕೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ವಿಜೇತ ಶ್ರೀಮತಿ ರತ್ನಕುಮಾರಿ ಅವರಿಗೆ ಸನ್ಮಾನ ಹಾಗೂ ರಾತ್ರಿ 7 ಗಂಟೆಗೆ ಶಿವಮೊಗ್ಗದ ಸುಮುಖ ಕಲಾ ತಂಡದಿಂದ "ಭೂಕೈಲಾಸ" ಯಕ್ಷಗಾನ ಪ್ರದರ್ಶನ ನಡೆಯಲಿದೆ.
 ನವೆಂಬರ್ 1ರ ಭಾನುವಾರ ಬೆಳಿಗ್ಗೆ 9 ಗಂಟೆಗೆ ಶ್ರೀ ಕಲಾನಾಥೇಶ್ವರ ದೇವಸ್ಥಾನದ ಆವರಣದಿಂದ ಶಾಲೆಯವರೆಗೆ ಬೈಕ್ ರ್ಯಾಲಿ, ನಂತರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನೆರವೇರಲಿದೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ರಕ್ತದಾನ ಶಿಬಿರ, ಮಧ್ಯಾಹ್ನ 2ರಿಂದ 5 ಗಂಟೆಯವರೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನೆರವೇರಲಿದ್ದು, ರಾತ್ರಿ 7 ಗಂಟೆಗೆ ಕುಂದಾಪುರದ ರೂಪಕಲಾ ಕುಳ್ಳಪ್ಪು ಕಲಾತಂಡದಿಂದ "ಗಿರಾಕಿಯೇ ಇಲ್ಲ ಮಾರಾಯ" ನಗೆನಾಟಕ ಪ್ರದರ್ಶನಗೊಳ್ಳಲಿದೆ.

ಪತ್ರಿಕಾಗೋಷ್ಠಿಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಕಾಶ್ ಡಿ.ಆರ್, ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಹೇಮರಾಜ್ ಸಿ.ಟಿ, ಅಧ್ಯಕ್ಷ ರಮೇಶ್ ಎಚ್.ಎಸ್, ಕಾರ್ಯದರ್ಶಿ ಪ್ರದೀಪ್, ಸಹಕಾರ್ಯದರ್ಶಿ ಯಾಕೂಬ್ ಹಾಗೂ ಸಲಹಾ ಸಮಿತಿ ಸದಸ್ಯ ಡಾ. ಸರ್ಜಾಶಂಕರ ಹರಳಿಮಠ ಉಪಸ್ಥಿತರಿದ್ದರು.