ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

ಇಡೀ ಶಿವಮೊಗ್ಗ ಜಿಲ್ಲೆ ಬರಪೀಡಿತ ಪ್ರದೇಶವೆಂದು ಘೋಷಣೆ : ಮಧು ಬಂಗಾರಪ್ಪ


madhu bangarappa

ರಾಜ್ಯ ಸರ್ಕಾರವು ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಹೊಸನಗರ ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸಿ ಆದೇಶ ಹೊರಡಿಸಿದೆ. ಇದರೊಂದಿಗೆ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳೂ ಬರಪೀಡಿತ ಪಟ್ಟಿಗೆ ಸೇರಿದಂತಾಗಿದೆ.

ಈ ಹಿಂದೆ ಜಿಲ್ಲೆಯ ಐದು ತಾಲ್ಲೂಕುಗಳನ್ನು ಮಾತ್ರ ಬರಪೀಡಿತ ಎಂದು ಸರ್ಕಾರ ಘೋಷಿಸಿತ್ತು. ಇತ್ತೀಚೆಗೆ ಶಿವಮೊಗ್ಗ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ನಡೆದ 'ಪ್ರಜಾಸೇವೆ ಆಂದೋಲನ' ಸಭೆಯಲ್ಲಿ ಸಾಗರ ಶಾಸಕರಾದ ಗೋಪಾಲ ಕೃಷ್ಣ ಬೇಳೂರು ಹಾಗೂ ಸ್ಥಳೀಯ ಸಾರ್ವಜನಿಕರು ಶಾಲಾ ಶಿಕ್ಷಣ, ಸಾಕ್ಷರತಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾಗಿದ್ದರು. ಮಳೆ ಕೊರತೆಯಿಂದ ಎದುರಾಗಿರುವ ಭೀಕರ ಬರ ಪರಿಸ್ಥಿತಿಯನ್ನು ವಿವರಿಸಿ, ಸಾಗರ ಮತ್ತು ಹೊಸನಗರ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸುವಂತೆ ಮನವಿ ಸಲ್ಲಿಸಿದ್ದರು.

ಇದಕ್ಕೆ ಸ್ಪಂದಿಸಿದ್ದ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಈ ವಿಷಯವನ್ನು ಮುಖ್ಯಮಂತ್ರಿಗಳ ಹಾಗೂ ಸಚಿವ ಸಂಪುಟದ ಗಮನಕ್ಕೆ ತಂದು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದರು. ಇದೀಗ ರಾಜ್ಯ ಸರ್ಕಾರವು ಸಾಗರ ಹಾಗೂ ಹೊಸನಗರ ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸುವ ಮೂಲಕ ಇಡೀ ಶಿವಮೊಗ್ಗ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯಾಗಿ ಘೋಷಣೆಯಾಗಿದೆ.

ಈ ನಿರ್ಧಾರದಿಂದಾಗಿ ಜಿಲ್ಲೆಯಾದ್ಯಂತ ಬರಗಾಲದ ಸಂಕಷ್ಟ ಎದುರಿಸುತ್ತಿರುವ ರೈತರು ಮತ್ತು ಜನಸಾಮಾನ್ಯರಿಗೆ ನಿಯಮಾನುಸಾರ ಸರ್ಕಾರದ ಬರ ಪರಿಹಾರ ಹಾಗೂ ನೆರವು ಪಡೆಯಲು ಹಾದಿ ಸುಗಮವಾಗಿದೆ.

ಈ ಬಗ್ಗೆ ಮಾ‍ಧ್ಯಮ ಪ್ರಕಟಣೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಸರ್ಕಾರ ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಹೊಸನಗರ ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸಿದ್ದು, ಇದರೊಂದಿಗೆ ಜಿಲ್ಲೆಯ ಎಲ್ಲ ತಾಲ್ಲೂಕುಗಳು ಬರಪೀಡಿತ ಪಟ್ಟಿಗೆ ಸೇರಿದಂತಾಗಿದೆ. ಶಿವಮೊಗ್ಗ ಜಿಲ್ಲಾ ಪ್ರವಾಸದಲ್ಲಿದ್ದಾಗ ಜನರ ವಾಸ್ತವ ಪರಿಸ್ಥಿತಿಯನ್ನು ಕಂಡು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿತ್ತು. ಇದೀಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಬರಪೀಡಿತ ಪಟ್ಟಿಗೆ ಸೇರಿರುವುದು ಸಂಕಷ್ಟದಲ್ಲಿರುವ ರೈತರಿಗೆ ಸ್ವಲ್ಪಮಟ್ಟಿಗಾದರೂ ನಿರಾಳತೆ ಹಾಗೂ ನೆಮ್ಮದಿ ತರಲಿದೆ ಎಂಬ ವಿಶ್ವಾಸವಿದೆ."  ಎಂದು ತಿಳಿಸಿದ್ದಾರೆ.