ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

ಮೂರು ಕುದುರೆ ಕಟ್ಟಿ ಏಕಮುಖ ಸಂಚಾರದಲ್ಲಿ ಪಯಣಿಸುವ ವಿಶ್ವಾಸದೊಂದಿಗೆ ದಸರಾ ಉತ್ಸವ ಸಮಿತಿ : ಅ.17ರಿಂದ ಅ.21ರವರೆಗಿನ ರಾಮೇಶ್ವರ ದಸರಾ ಸಮಿತಿಯ ವಿವಿಧ ಕಾರ್ಯಕ್ರಮಗಳು


ತೀರ್ಥಹಳ್ಳಿ ದಸರಾ
ತೀರ್ಥಹಳ್ಳಿ ದಸರಾ ಉತ್ಸವ ಸಮಿತಿಗೆ  ಅನುಭವ ಸಾಮಾಜಿಕ ಹೊಣೆಗಾರಿಕೆ ರಾಜಕೀಯ ಸಿದ್ಧಾಂತಕ್ಕನುಗುಣವಾಗಿ ಸೊಪ್ಪುಗುಡ್ಡೆ ರಾಘವೇಂದ್ರ, ಅಮರನಾಥ ಶೆಟ್ಟಿ  ಮತ್ತು ಸಂದೇಶಜವಳಿ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದು   ಸುಮಾರು 20ಲಕ್ಷರೂಗಳ ಯೋಜನಾ ವೆಚ್ಚದೊಂದಿಗೆ ಅಕ್ಟೋಬರ್‌ 17ರಿಂದ ಅ.21 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಎಂದು ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ  ಸಂಚಾಲಕರುಗಳಾದ ಸೊಪ್ಪುಗುಡ್ಡೆ ರಾಘವೇಂದ್ರ, ಅಮರನಾಥ ಶೆಟ್ಟಿ  ಮತ್ತು ಸಂದೇಶಜವಳಿ  ಮಾಹಿತಿ ನೀಡಿದ್ದಾರೆ.

ಅಕ್ಟೋಬರ್‌ 17ರಂದು ಬೆಳಿಗ್ಗೆ 10ಕ್ಕೆ ಯುವ ದಸರಾ ಆರಂಭಗೊಳ್ಳಲಿದ್ದು ಇದರ ಅಂಗವಾಗಿ ತುಂಗಾತೀರದ ಮರಳು ಗುಡ್ಡೆಯಮೇಲೆ ಯುವಕರು ಹಾಗೂ ಮಹಿಳೆಯರಿಗೆ ಆಟೋಟ ಸ್ಪರ್ಧೆ ಏರ್ವಡಿಸಲಾಗಿದೆ. ಹಗ್ಗ ಜಗ್ಗಾಟ, ಮೂರು ಕಾಲಿನ ಓಟ, ಗಿರಿಗಿಟ್ಲೆ ಆಟಗಳು ನಡೆಯಲಿದ್ದು ಮಹಿಳೆಯರಿಗೆ ಮತ್ತು ಯುವಕರಿಗೆ ಪ್ರತ್ಯೇಕವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿದೆ. ಅಂದು ಸಂಜೆ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಇರುತ್ತದೆ.

ಅ.17ರ ಬೆಳಿಗ್ಗೆ11 ಗಂಟೆಗೆ ಇಲ್ಲಿನ ಬಾಳೇಬೈಲು ಸರ್ಕಾರಿಪದವಿಪೂರ್ವ ಕಾಲೇಜಿನಲ್ಲಿ ಆಹ್ವಾನಿತ ಅಂತರ ಜಿಲ್ಲಾ ಕವಿಗೋಷ್ಠಿ ನಡೆಯಲಿದ್ದು ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಗಳೊಳಗೊಂಡಂತೆ ಕವಿಗಳ ಆಹ್ವಾನಿತ ದಸರಾ ಕವಿಗೋಷ್ಠಿ ನಡೆಯಲಿದೆ. ಅರಬಗಟ್ಟೆ ಅಣ್ಣಪ್ಪ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲೆ ಡಾ. ಸೌಮ್ಯ ಕೆ.ಸಿ. ಉಪಸ್ಥಿತರಿರಲಿದ್ದಾರೆ. ಸಂಜೆ ೬-೩೦ಕ್ಕೆ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ದಸರಾ ಚಿತ್ರೋತ್ಸವ ಏರ್ಪಡಿಸಿದ್ದು ಯುವ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ದಸರಾ ಕಿರುಚಿತ್ರೋತ್ಸವ ಹಮ್ಮಿಕೊಂಡಿರುವುದಾಗಿ ಉತ್ಸವ ಸಮಿತಿ ತಿಳಿಸಿದೆ.

ಅ. 18ರಂದು ಸಂಜೆ 6.30 ಕ್ಕೆ ನೆಹರೂ ಉದ್ಯಾನವನದಲ್ಲಿ ಮಹಿಳಾ ದಸರಾ ಇರುತ್ತದೆ. ಸ್ಥಳೀಯ ಮಹಿಳಾ ಕಲಾವಿದರಿಂದ ಕುಣಿತ ಭಜನೆ, ಯೋಗನೃತ್ಯ, ನೃತ್ಯರೂಪಕ, ಭರತನಾಟ್ಯ, ನವದುರ್ಗೆಯರ ದೃಶ್ಯಾವಳಿ, ಪ್ರಹಸನ, ಫ್ಯಾಷನ್‌ ಷೋ, ಯಕ್ಷ ನೃತ್ಯ, ಹೆಣ್ಣು ಹುಲಿ ಹೆಜ್ಜೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಅ.19ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಸಂಜೆ 6-30ಕ್ಕೆ ಸಾಂಸ್ಕೃತಿಕ  ಸೌರಭ ಕಾರ್ಯಕ್ರಮವನ್ನು ನೆಹರು ಉದ್ಯಾನವನದಲ್ಲಿ ಏರ್ಪಡಿಸಲಾಗಿದೆ. ನಾಡಿನ ವಿವಿಧ ಪ್ರಸಿದ್ಧ ಗಾಯಕರಿಂದ ಸಂಗೀತ ಕಾರ್ಯಕ್ರಮ, ಜಾನಪದ ಕಲಾತಂಡಗಳಿಂದ ಜಾನಪದ ಜಾತ್ರೆ, ನೃತ್ಯ ವೈವಿಧ್ಯ ಸೇರಿದಂತೆ ಹಲವಾರು ಆಕರ್ಷಕ ಕಾರ್ಯಕ್ರಮ ಅಂದು ನಡೆಯಲಿದೆ.

ಅ.20 ರಂದು ನೆಹರು ಉದ್ಯಾನವನದಲ್ಲಿ  ವನ್ಯಜೀವಿ ಛಾಯಾಚಿತ್ರ, ಚಿತ್ರಕಲೆ, ವರ್ಣಕಲೆ, ಶಿಲ್ಪಕಲೆ, ಜಾನಪದ ವಸ್ತುಗಳು, ಪಾರಂಪಾರಿಕ ವಸ್ತುಗಳು ಹಾಗೂ ಮುಂತಾದ ಕರಕುಶಲ ವಸ್ತುಗಳ ಪ್ರದರ್ಶನವನ್ನೊಳಗೊಂಡ ಕಲಾ ದಸರಾ ನಡೆಯಲಿದೆ. ಅಂದು ಸಂಜೆ ೬-೩೦ಕ್ಕೆ ಸ್ಥಳೀಯ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಸಾಂಸ್ಕೃತಿಕ ವೈಭವ  ನೆರವೇರಲಿದೆ.

ಅ.21ರಂದು ಮಧ್ಯಾಹ್ನ 2.00ಕ್ಕೆ ರಾಮೇಶ್ವರ ದೇವಸ್ಥಾನದ ಆವರಣದಿಂದ ಚಾಮುಂಡೇಶ್ವರಿ ದೇವಿಯ ಅಂಬಾರಿಯೊಂದಿಗೆ ಶ್ರೀ ರಾಮೇಶ್ವರ ಪಲ್ಲಕ್ಕಿ ಉತ್ಸವ ಆಕರ್ಷಕ ಸ್ಥಬ್ಧ ಚಿತ್ರಗಳು, ಕರ್ನಾಟಕದ ಸುಪ್ರಸಿದ್ಧ ಜಾನಪದ ಕಲಾ ತಂಡಗಳೊಂದಿಗೆ ದಸರಾಉತ್ಸವ ಮೆರವಣಿಗೆ ದೇವಸ್ಥಾನದಿಂದ ಕುಶಾವತಿ ಪಾರ್ಕಿನ ವರೆಗೆ ನಡೆಯಲಿದೆ. ಈ ಸಾಂಪ್ರದಾಯಿಕ ಕಾರ್ಯಕ್ರಮಕ್ಕೆ ಶಾಸಕ ಆರಗ ಜ್ಞಾನೇಂದ್ರ ಚಾಲನೆ ನೀಡಲಿದ್ದಾರೆ. ಸಂಜೆ 5.30ಕ್ಕೆ ನವದುರ್ಗೆಯರ ನೃತ್ಯರೂಪಕ ಇರಲಿದ್ದು ಸಂಜೆ 7.15ಕ್ಕೆ ಸಭಾ ಕಾರ್ಯಕ್ರಮ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ಅಭಿನಂದನೆ ನಡೆಯುತ್ತದೆ.  ರಾತ್ರಿ 8ಕ್ಕೆ ಆರ್.‌ ಮದನ್‌ ಪ್ರಾಯೋಜಕತ್ವದ ಹುಲಿಹೆಜ್ಜೆ -3ರ ಹುಲಿವೇಷ ಸ್ಪರ್ಧೆ ನಡೆಯಲಿದೆ .

ಈ ಪತ್ರಿಕಾಗೋಷ್ಠಿಯಲ್ಲಿ ನಾಬಳ ಶಚ್ಚೀಂದ್ರ ಹೆಗ್ಡೆ,  ಲಯನ್‌ ಪಾಂಡುರಂಗಪ್ಪ, ವಿಧಾತ ಅನಿಲ್‌,  ಪ.ಪಂ. ಸದಸ್ಯರಾದ ಸುಶೀಲ ಶೆಟ್ಟಿ, ಜ್ಯೋತಿ ಮೋಹನ್‌ ಭಟ್‌  ಸೇರಿದಂತೆ ಸುಖೇಶ್‌ ಗೌಡ, ಬೆಳ್ಳಯ್ಯ, ಅರುಂಧತಿ ಪಿ. ವಿ . ಭಟ್‌ ಇನ್ನಿತರರಿದ್ದರು.