ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

ಬೆಳಗಿನ ಝಾವ ಮತ್ತು ರಾತ್ರಿ ವೇಳೆಯಲ್ಲಿ ಶಿವಮೊಗ್ಗ-ತೀರ್ಥಹಳ್ಳಿ ಖಾಸಗಿ ಬಸ್‌ಗಳ ದೌರ್ಜನ್ಯ: ಕಾನೂನು ಉಲ್ಲಂಘನೆ ವಿರುದ್ಧ ಬೃಹತ್ ಪ್ರತಿಭಟನೆಗೆ ಜಯಕರ್ನಾಟಕ ಸಂಘಟನೆಗಳ ಎಚ್ಚರಿಕೆ



ತೀರ್ಥಹಳ್ಳಿ: :  ಶಿವಮೊಗ್ಗ ಹಾಗೂ ತೀರ್ಥಹಳ್ಳಿ ನಡುವೆ ಸಂಚರಿಸುವ ಖಾಸಗಿ ಬಸ್‌ಗಳ ಸಿಬ್ಬಂದಿ ಪ್ರಯಾಣಿಕರ ಮೇಲಿನ ಶೋಷಣೆ ಹಾಗೂ ಮನಸೋಇಚ್ಛೆ ವರ್ತನೆ ಮಿತಿಮೀರಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರ್ಮಿಟ್ ನಿಯಮಗಳನ್ನು ಗಾಳಿಗೆ ತೂರಿ ಪ್ರಯಾಣಿಕರನ್ನು ಅರ್ಧದಲ್ಲೇ ಇಳಿಸುವುದು ಹಾಗೂ ಗ್ರಾಮೀಣ ಭಾಗಗಳಿಗೆ ಸಾರಿಗೆ ಸಂಪರ್ಕ ಕಡಿತಗೊಳಿಸುತ್ತಿರುವ ಖಾಸಗಿ ಬಸ್‌ಗಳ ವಿರುದ್ಧ ತಾಲೂಕು ಜಯ ಕರ್ನಾಟಕ ಸಂಘಟನೆ ಅಕ್ಟೋಬರ್ 19ರಂದು ಬೃಹತ್ ಬಸ್ ತಡೆ ಹಾಗೂ ಪ್ರತಿಭಟನೆಗೆ ಕರೆ ನೀಡಿದೆ.

ಶಿವಮೊಗ್ಗ ಬಸ್ ನಿಲ್ದಾಣದಿಂದ ರಾತ್ರಿ10 ಗಂಟೆಯ ನಂತರ ತೀರ್ಥಹಳ್ಳಿಗೆ ಪ್ರಯಾಣಿಸುವ ಪ್ರಯಾಣಿಕರನ್ನು ಅತ್ಯಂತ ಕೀಳು ಮಟ್ಟದ ಭಾಷೆಯಲ್ಲಿ ನಿಂದಿಸುವುದು,  ನಿಯಮದಂತೆ ತೀರ್ಥಹಳ್ಳಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕಾಗಿದ್ದರೂ ಅವರನ್ನು ನಿರ್ಲಕ್ಷಿಸಿ ಬಸ್‌ ನಿಲ್ದಾಣವೂ ತಮ್ಮ ಖಾಸಗಿ ಆಸ್ತಿ ಎಂಬಂತೆ ವರ್ತಿಸುತ್ತಾ ಅಲ್ಲಿರಬೇಡಿ, ಇಲ್ಲಿರಬೇಡಿ ಎಂದು ಜನರನ್ನು ನಿಂದಿಸುತ್ತಾ ಪ್ರಯಾಣಿಕರನ್ನು ಹೈರಾಣಿಗಿಸುತ್ತಿದ್ದಾರೆ.  ಮಹಿಳೆಯರು, ರೈತರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ದಿನಗೂಲಿ ಕಾರ್ಮಿಕರು ಸಾರಿಗೆ ಸೌಕರ್ಯವಿದ್ದರೂ ಇರುವ ಸೌಕರ್ಯ ಕೈಗೆಟುಕದಾಗಿ ಇದ್ದೂ ಇಲ್ಲದಂತೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಈ ಹಿಂದೆ  ಸಹಕಾರ ಸಾರಿಗೆ ವ್ಯವಸ್ಥೆಯು ರಾಮಕೃಷ್ಣಪುರ, ತೀರ್ಥಮುತ್ತೂರು, ಶುಂಠಿಕಟ್ಟೆ, ಹೊದಲ, ಉಬ್ಬೂರು, ಯಡೆಹಳ್ಳಿ, ಅಲಸೆ, ನಾಲೂರು, ಬಿದರಗೋಡು, ಮಲ್ಲಂದೂರು, ಶೇಡ್ಗಾರು, ಹೇರಂಬಾಪುರ, ಗಡಿಕಲ್ಲು , ಮುನ್ನೂರು ಸೇರಿದಂತೆ ಹಲವು ಗ್ರಾಮೀಣ ಪ್ರದೇಶಗಳಿಗೆ ಉತ್ತಮ ಸೇವೆ ನೀಡುತ್ತಿತ್ತು. ಆದರೆ ಪ್ರಸ್ತುತ ಖಾಸಗಿ ಬಸ್‌ಗಳು ಲಾಭದಾಯಕ ಮಾರ್ಗಗಳತ್ತ ಮಾತ್ರ ಗಮನಹರಿಸಿ, ಗ್ರಾಮೀಣ ಭಾಗದ ಮಾರ್ಗಗಳಲ್ಲಿ ಬಸ್ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿವೆ.

ಶಿವಮೊಗ್ಗ ಬಸ್‌ ನಿಲ್ದಾಣದಲ್ಲಿ ನಿತ್ಯ ಕಾನೂನು ಮತ್ತು ಪರ್ಮಿಟ್ ನಿಯಮಗಳ ಬಹಿರಂಗ ಉಲ್ಲಂಘನೆ :

ಮೋಟಾರು ವಾಹನ ಕಾಯ್ದೆ  1988ರ ನಿಬಂಧನೆಗಳ ಸ್ಪಷ್ಟ ಉಲ್ಲಂಘನೆ ಮಾಡುತ್ತಿದೆ. ಪರ್ಮಿಟ್ ಷರತ್ತು ಉಲ್ಲಂಘನೆ ( 66 ಮತ್ತು 84ರ ನಿಯಮದಂತೆ ) ಪರ್ಮಿಟ್ ಪಡೆದ ನಿಯಮಿತ ಮಾರ್ಗ ಮತ್ತು ವೇಳಾಪಟ್ಟಿಯನ್ನು ಪಾಲಿಸದೆ ಸ್ವಇಚ್ಛೆಯಿಂದ ಸಂಚಾರ ರದ್ದುಗೊಳಿಸುವುದು ಹಾಗೂ ನಿಗದಿತ ಸ್ಟಾಪ್‌ಗಳಲ್ಲಿ ಬಸ್ ನಿಲ್ಲಿಸದಿರುವುದು, ಪ್ರಯಾಣಿಕರನ್ನು ಹತ್ತಿಸಿಕೊಳ್ಳದಿರುವುದು ಗುರುತರ ಅಪರಾಧ ಆಗಿದೆ.

ಪ್ರಯಾಣಿಕರಿಗೆ ಸೇವೆ ನಿರಾಕರಣೆ (ನಿಯಮ 178 ಉಲ್ಲಂಘನೆ): ಟಿಕೆಟ್ ಪಡೆದ ಪ್ರಯಾಣಿಕರನ್ನು ಗಮ್ಯಸ್ಥಾನ ತಲುಪಿಸುವ ಮೊದೆಯೇ ಅರ್ಧದಲ್ಲೇ ಇಳಿಸುವುದು ಕಾನೂನುಬಾಹಿರ. ಆ ಬಸ್‌ ನಿಲ್ದಾಣದಲ್ಲಿ ನಿಲ್ಲಿಸುವುದಿಲ್ಲ. ತೂದೂರಿನಲ್ಲಿ ಇಳಿಯ ಬೇಕಾದರೆ ತೀರ್ಥಹಳ್ಳಿ ಟಿಕೇಟ್‌ ಪಡೆಯಿರಿ ಎಂಬೆಲ್ಲಾ ಸಬೂಬು ಹೇಳುವುದು ನಡೆಯುತ್ತಿದೆ.

ಸಾರ್ವಜನಿಕ ಸ್ಥಳದಲ್ಲಿ ಪ್ರಯಾಣಿಕರ ಮೇಲೆ ದೌರ್ಜನ್ಯ ಹಾಗೂ ನಿಂದನೆ:  ಪ್ರಯಾಣಿಕರ ಮೇಲೆ ದುರಾಡಳಿತ ತೋರುವುದು, ನಿಂದಿಸುವುದು ಮತ್ತು ಬೆದರಿಕೆ ಹಾಕುವುದು ಸಾರ್ವಜನಿಕ ಶಾಂತಿಗೆ ಭಂಗ ತರುವ ಕೃತ್ಯವಾಗಿದೆ.

ಹಲವು ವರ್ಷದ ಬೇಡಿಕೆ ಇದ್ದರೂ ಕಣ್ಣಿಗೆ ಕಾಣದಂತಿರುವ ಆರ್.ಟಿ.ಓ. ಅಧಿಕಾರಿಗಳು ಈ ಸಮಸ್ಯೆಗೆ ತಕ್ಷಣವೇ ಶಾಶ್ವತ ಪರಿಹಾರ ನೀಡಬೇಕಿದೆ.

ಶಿವಮೊಗ್ಗ ಮತ್ತು ತೀರ್ಥಹಳ್ಳಿ ಬಸ್ ನಿಲ್ದಾಣಗಳಲ್ಲಿ ರಾತ್ರಿ ವೇಳೆ ಆರ್‌ಟಿಒ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಪ್ರಯಾಣಿಕರಿಗೆ ಕಿರುಕುಳ ನೀಡುವ ಹಾಗೂ ನಿಯಮ ಉಲ್ಲಂಘಿಸುವ ಬಸ್‌ಗಳ ಪರ್ಮಿಟ್‌ಗಳನ್ನು ತಕ್ಷಣವೇ ರದ್ದುಗೊಳಿಸುವ ಇರುವ ಅಧಿಕಾರವನ್ನು ಬಳಸಿಕೊಳ್ಳಬೇಕು ಗ್ರಾಮೀಣ ಸಾರಿಗೆಗೆ ಆದ್ಯತೆ ನೀಡಬೇಕು.

ಶಿವಮೊಗ್ಗ ಬಸ್‌ ನಿಲ್ದಾಣದಲ್ಲಿ ರಾತ್ರಿ ವೇಳೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕು ಮತ್ತು ಸಿಬ್ಬಂದಿಗಳ ವಿರುದ್ಧ ಬರುವ ದೂರುಗಳ ಮೇಲೆ ತಕ್ಷಣವೇ FIR ದಾಖಲಿಸಬೇಕು.

ಪ್ರಯಾಣಿಕರು ನೇರವಾಗಿ ಆರ್‌ಟಿಒ ಅಥವಾ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಬಸ್ ನೋಂದಣಿ ಸಂಖ್ಯೆಯೊಂದಿಗೆ ದೂರು ನೀಡಲು ಜಾಗೃತಿ ಮೂಡಿಸಬೇಕು.

ಸಾರಿಗೆ ಆಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಈ ಸಮಸ್ಯೆಗೆ ಸ್ಪಂದಿಸದಿದ್ದಲ್ಲಿ, ಅಕ್ಟೋಬರ್ 19ರಂದು ತಾಲೂಕು ಜಯ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ಬೃಹತ್ ಮಟ್ಟದ ಹೋರಾಟ ಹಾಗೂ ಬಸ್ ತಡೆ ನಡೆಸಲಾಗುವುದು ಎಂದು ಕುರುವಳ್ಳಿ ನಾಗರಾಜ್ ಎಚ್ಚರಿಸಿದ್ದಾರೆ. ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.