ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

ಕಾಯಿಲೆಯ ಗುಣಲಕ್ಷಣಗಳನ್ನು ಹಲವು ಆಯಾಮಗಳಲ್ಲಿ ಗುರುತಿಸಿ ಚಿಕಿತ್ಸೆ ಪಡೆಯಬೇಕು: ಡಾ. ನಿರಂಜನ್ ಹೆಬ್ಬಾರ್


ಕಾಯಿಲೆಯ ಗುಣಲಕ್ಷಣಗಳನ್ನು ಹಲವು ಆಯಾಮಗಳಲ್ಲಿ ಗುರುತಿಸಿ ಚಿಕಿತ್ಸೆ ಪಡೆಯಬೇಕು: ಡಾ. ನಿರಂಜನ್ ಹೆಬ್ಬಾರ್
ತೀರ್ಥಹಳ್ಳಿ: ಯಾವುದೇ ಕಾಯಿಲೆಯ ಗುಣಲಕ್ಷಣಗಳನ್ನು ಹಲವು ಆಯಾಮಗಳಲ್ಲಿ ಗುರುತಿಸಿ, ಸೂಕ್ತ ತಜ್ಞರ ಸಲಹೆ ಪಡೆದು ಚಿಕಿತ್ಸೆ ಪಡೆಯುವುದು ಅಗತ್ಯ ಎಂದು ಮನೋವೈದ್ಯಶಾಸ್ತ್ರ ಪರಿಣಿತ ಡಾ. ನಿರಂಜನ್ ಹೆಬ್ಬಾರ್ ಹೇಳಿದರು.

ರೋಟರಿ ಕ್ಲಬ್ ತೀರ್ಥಹಳ್ಳಿ ವತಿಯಿಂದ ನಡೆದ  ಕಾರ್ಯಕ್ರಮದಲ್ಲಿ   ‘ಸಾಮಾನ್ಯ ಆರೋಗ್ಯ ಜ್ಞಾನ’ ವಿಷಯದ ಕುರಿತು ಮಾತನಾಡಿದ ಅವರು, ದೈನಂದಿನ ಜೀವನದಲ್ಲಿ ಎದುರಾಗುವ ಸಣ್ಣಪುಟ್ಟ ಆತಂಕ, ಒತ್ತಡ, ಬೇಸರ ಸೇರಿದಂತೆ ಸಾಮಾನ್ಯ ಮಾನಸಿಕ ಸಮಸ್ಯೆಗಳನ್ನು ನಿಯಂತ್ರಿಸಲು ಮನೋವೈದ್ಯಶಾಸ್ತ್ರ ಮತ್ತು ಮನೋವಿಜ್ಞಾನದ ಸಾಮಾನ್ಯ ಜ್ಞಾನವನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದರು.

ನಕಾರಾತ್ಮಕ ಆಲೋಚನೆಗಳನ್ನು ಗುರುತಿಸಿ ಅವುಗಳನ್ನು ವಾಸ್ತವಿಕವಾಗಿ ವಿಶ್ಲೇಷಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ‘ಎಲ್ಲವೂ ಹಾಳಾಗಿಹೋಗುತ್ತದೆ’ ಎಂದು ಚಿಂತಿಸುವ ಬದಲು, ‘ಇದು ಒಂದು ಸಣ್ಣ ಸಮಸ್ಯೆ; ಇದನ್ನು ಪರಿಹರಿಸಲು ನಾನು ಏನು ಮಾಡಬಹುದು?’ ಎಂಬ ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಸ್ತುತ ಕ್ಷಣದಲ್ಲಿ ಬದುಕುವುದು, ಭೂತಕಾಲದ ವಿಷಾದ ಹಾಗೂ ಭವಿಷ್ಯದ ಆತಂಕಗಳನ್ನು ಬದಿಗಿಟ್ಟು ಪ್ರಸ್ತುತ ಮಾಡುತ್ತಿರುವ ಕೆಲಸದ ಮೇಲೆ ಗಮನ ಕೇಂದ್ರೀಕರಿಸುವುದು ಮಾನಸಿಕ ಆರೋಗ್ಯಕ್ಕೆ ಸಹಕಾರಿ ಎಂದರು.

ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ವಿವರಿಸಿದ ಅವರು, ಪ್ರತಿದಿನ 7ರಿಂದ 8 ಗಂಟೆಗಳ ಉತ್ತಮ ನಿದ್ರೆ, ಕನಿಷ್ಠ 30 ನಿಮಿಷಗಳ ನಡಿಗೆ, ಯೋಗ ಅಥವಾ ವ್ಯಾಯಾಮ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ದೈಹಿಕ ಚಟುವಟಿಕೆಗಳಿಂದ ದೇಹದಲ್ಲಿ ಎಂಡಾರ್ಫಿನ್‌ಗಳಂತಹ ರಾಸಾಯನಿಕಗಳು ಬಿಡುಗಡೆಯಾಗಿ ಮನಸ್ಸಿನ ಆರೋಗ್ಯಕ್ಕೂ ಅನುಕೂಲವಾಗುತ್ತದೆ ಎಂದು ಹೇಳಿದರು.

ಇತರರಿಗೆ ಸಹಾಯ ಮಾಡುವುದು, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮನಸ್ಸಿಗೆ ಶಾಂತಿ ಮತ್ತು ತೃಪ್ತಿ ನೀಡುತ್ತದೆ. ಅತಿಯಾದ ಮೊಬೈಲ್ ಬಳಕೆ ಹಾಗೂ ನಿರಂತರವಾಗಿ ನಕಾರಾತ್ಮಕ ಸುದ್ದಿಗಳನ್ನು ವೀಕ್ಷಿಸುವುದರಿಂದ ಆತಂಕ ಹೆಚ್ಚಾಗುವ ಸಾಧ್ಯತೆಯಿದ್ದು, ಮಲಗುವ ಮುನ್ನ ಕನಿಷ್ಠ ಒಂದು ಗಂಟೆ ಮೊಬೈಲ್‌ನಿಂದ ದೂರವಿರುವುದು ಉತ್ತಮ ಎಂದು ಸಲಹೆ ನೀಡಿದರು.

ಡಾ. ನಿರಂಜನ್ ಹೆಬ್ಬಾರ್ ಅವರು ಬಳ್ಳಾರಿ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದು, ಮಣಿಪುರ ಸೆಂಟ್ರಲ್ ಇನ್‌ಸ್ಟಿಟ್ಯೂಟ್‌ನಲ್ಲಿ ನರ ಮತ್ತು ಮನೋವೈದ್ಯಶಾಸ್ತ್ರದಲ್ಲಿ ಎಂ.ಡಿ. ಪದವಿ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿರುವ ಅವರು ಪ್ರಸ್ತುತ ಕೊಪ್ಪದಲ್ಲಿ ಸ್ಪರ್ಶ ಕ್ಲಿನಿಕ್ ನಡೆಸುತ್ತಿದ್ದು, ಪ್ರತಿ ಶನಿವಾರ ತೀರ್ಥಹಳ್ಳಿಯ ಗಾಯತ್ರಿ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ತೀರ್ಥಹಳ್ಳಿ ವತಿಯಿಂದ ಡಾ. ನಿರಂಜನ್ ಹೆಬ್ಬಾರ್ ಅವರನ್ನು ಸನ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ತೀರ್ಥಹಳ್ಳಿ ಅಧ್ಯಕ್ಷ ರೊ. ಎನ್.ಎಚ್. ರಮೇಶ್ ವಹಿಸಿದ್ದರು. ವಲಯ 11ರ ಸಹಾಯಕ ಗವರ್ನರ್ ರೊ. ನಾಗರಾಜ್ ಎಸ್. ಮಾತನಾಡಿದರು. ಕ್ಲಬ್‌ನ ಪೂರ್ವಾಧ್ಯಕ್ಷ ರೊ. ಅನಿಲ್ ಕುಮಾರ್ ಅವರು ಡಾ. ನಿರಂಜನ್ ಹೆಬ್ಬಾರ್ ಅವರನ್ನು ಸಭೆಗೆ ಪರಿಚಯಿಸಿದರು. ಕಾರ್ಯದರ್ಶಿ ರೊ. ಎಂ.ಸಿ. ಸಂಜಯ್ ವಂದಿಸಿದರು.