ವಿಶೇಷ ಪರಿಷ್ಕರಣೆ ಅಭಿಯಾನದ ಕಾಲಾವಧಿ ಮುಗಿದಿದ್ದರೂ ಸಹ, ಹೊಸ ಮತದಾರರ ನೋಂದಣಿ (Form 6) ಹಾಗೂ ತಿದ್ದುಪಡಿಗಳಿಗೆ ಆನ್ಲೈನ್ ಪೋರ್ಟಲ್ voters.eci.gov.in ಮೂಲಕ ವರ್ಷಪೂರ್ತಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ
18 ವರ್ಷ ಪೂರೈಸಿದ ಅಥವಾ ಮುಂಬರುವ ದಿನಗಳಲ್ಲಿ ಪೂರೈಸಲಿರುವ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಫಾರ್ಮ್-6 ಮೂಲಕ ಅರ್ಜಿ ಸಲ್ಲಿಸಬಹುದು. ಅನಿವಾಸಿ ಭಾರತೀಯರು (NRI) ಫಾರ್ಮ್-6A ಬಳಸಬೇಕಾಗುತ್ತದೆ. ಮತದಾರರ ವಿವರಗಳಲ್ಲಿ ತಿದ್ದುಪಡಿ, ವಿಳಾಸ ಬದಲಾವಣೆ ಅಥವಾ ಹೊಸ ಇ-ಎಪಿಕ್ ಕಾರ್ಡ್ ಪಡೆಯಲು ಫಾರ್ಮ್-8 ಮತ್ತು ಮೃತಪಟ್ಟವರ ಹಾಗೂ ಸ್ಥಳ ಬದಲಾಯಿಸಿದವರ ಹೆಸರನ್ನು ಪಟ್ಟಿಯಿಂದ ತೆರವುಗೊಳಿಸಲು ಫಾರ್ಮ್-7 ಅನ್ನು ಬಳಸಲು ಸೂಚಿಸಲಾಗಿದೆ. ಅರ್ಜಿ ಸಲ್ಲಿಸಲು ವಯಸ್ಸಿನ ಹಾಗೂ ವಿಳಾಸದ ಪುರಾವೆಯಾಗಿ ಆಧಾರ್ ಕಾರ್ಡ್, ಪಡಿತರ ಚೀಟಿ, ಎಸ್ಎಸ್ಎಲ್ಸಿ ಅಂಕಪಟ್ಟಿ ಅಥವಾ ಇತರೆ ಅಧಿಕೃತ ದಾಖಲೆಗಳ ಜೊತೆಗೆ ಪಾಸ್ಪೋರ್ಟ್ ಅಳತೆಯ ಭಾವಚಿತ್ರದ ಅಗತ್ಯವಿದೆ.
ಸಾರ್ವಜನಿಕರು ಆನ್ಲೈನ್ನಲ್ಲಿ voters.eci.gov.in ವೆಬ್ಸೈಟ್ ಅಥವಾ 'Voter Helpline' ಮೊಬೈಲ್ ಆ್ಯಪ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬಯಸುವವರು ತಮ್ಮ ವ್ಯಾಪ್ತಿಯ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು (BLO) ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿ ಹಾಗೂ ನೆರವಿಗಾಗಿ ಸಾರ್ವಜನಿಕರು ತಮ್ಮ ತಾಲೂಕು ಕಚೇರಿಯ ತಹಸೀಲ್ದಾರ್, ಸಹಾಯಕ ಕಮಿಷನರ್ ಕಚೇರಿಯ ಮತದಾರರ ನೋಂದಣಾಧಿಕಾರಿಗಳನ್ನು (ERO), ಸ್ಥಳೀಯ ಪಂಚಾಯಿತಿ ಆಡಳಿತ ಅಥವಾ ನಗರ ಪ್ರದೇಶಗಳಲ್ಲಿ ಮಹಾನಗರ ಪಾಲಿಕೆ/ಪುರಸಭೆ/ ಪಟ್ಟಣ ಪಂಚಾಯಿತಿ ಕಚೇರಿಯನ್ನು ನೇರವಾಗಿ ಸಂಪರ್ಕಿಸಬಹುದು. ಯಾವುದೇ ದೂರು ಅಥವಾ ತಕ್ಷಣದ ನೆರವಿಗಾಗಿ ಚುನಾವಣಾ ಆಯೋಗದ ಉಚಿತ ಸಹಾಯವಾಣಿ ಸಂಖ್ಯೆ 1950 ಅನ್ನು ಸಹ ಸಂಪರ್ಕಿಸಬಹುದಾಗಿದೆ.
