ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

ಪಟ್ಟಣ ಪಂಚಾಯಿತಿ ಆಡಳಿತದ ಗಮನಕ್ಕೆ ಪೋಲೀಸರ ಅವಗಾಹನೆಗೆ ,,,,,,,,,,,,,,,,,, ಯಾರಿಗ್ಹೇಳೋಣಾ ನಮ್‌ ಪ್ರಾಬ್ಲಮ್ಮು........................


ತೀರ್ಥಹಳ್ಳಿ : ಇಲ್ಲಿನ ಪಟ್ಟಣ ಪಂಚಾಯಿತಿ ಸಂತೆವ್ಯಾಪಾರಕ್ಕಾಗಿ ಸುಸಜ್ಜಿತ ಸ್ಥಳ ನಿರ್ಮಿಸಿದೆ. ಅಲ್ಲಿ ವ್ಯಾಪಾರವೂ ನಡೆಯುತ್ತಿದೆ. ಗ್ರಾಹಕರೂ ಬರುತ್ತಿದ್ದಾರೆ. ಆದರೆ ಕೆಲವು ವ್ಯಾಪಾರಿಗಳು ಜನಕ್ಕೆ ಬೇಗ ಸಿಗುತ್ತೇವೆ ಹೆಚ್ಚು ವ್ಯಾಪಾರನಡೆಯಬಹುದು ಎಂಬ ಕಾರಣಕ್ಕಾಗಿ ಇಲ್ಲಿನ ಟಿ.ಎ.ಪಿ.ಸಿ.ಎಂ.ಎಸ್. ರಸ್ತೆಯಲ್ಲಿ ಸೋಮವಾರದಂದು ಸಂತೆಯದಿನ ಅಂಗಡಿ ತೆರೆಯುತ್ತಾರೆ. ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲ್ಲಿಸಿಕೊಂಡು ಕೆಲವರು ಮತ್ತು ಇನ್ನು ಕೆಲವರು ಟಾರ್ಪಾಲುಗಳನ್ನು ಕಟ್ಟಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. 


ಸದರಿ ಸ್ಥಳದಲ್ಲಿ ಅಂಗಡಿ ಮುಂಗಟ್ಟುಗಳಿದ್ದು ದಿನನಿತ್ಯ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಆ ಅಂಗಡಿಗಳಿಗೆ ತೆರಳಲು ಮತ್ತು ಅಲ್ಲಿಗೆ ಬರುವವರಿಗೆ ವಾಹನ ನಿಲ್ಲಿಸಲು ಮತ್ತು ರಸ್ತೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಮತ್ತು ವಾಹನ ಸಂಚಾರಕ್ಕೆ ಅಡಚಣೆಯುಂಟಾಗುತ್ತಿದೆ. ಸಂತೆಯ ದಿನ ಅಂಗಡಿ ತೆರೆಯುವ ಈ ವ್ಯಾಪಾರಿಗಳು ತಮ್ಮ ಅಂಗಡಿ ಸಮೀಪ ಯಾವುದಾದರೂ ವಾಹನ ಓಡಾಡಿದರೆ ಅವರೊಂದಿಗೆ ವಾಗ್ವಾದಕ್ಕಿಳಿಯುವ ಮೂಲಕ ಪ್ರತಿವಾರ ಒಂದಿಲ್ಲೊಂದು ಜಗಳ ನಡೆಯುತ್ತಿರುತ್ತಿದೆ. ಅನೇಕ ಸಾರ್ವಜನಿಕರು ಪೋಲೀಸರು ಮತ್ತು ಪಟ್ಟಣ ಪಂಚಾಯಿತಿಗೆ ಮೌಖಿಕವಾಗಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಅಸಮಾಧಾನ ಹೊರಹಾಕುತ್ತಿದ್ದಾರೆ.


ಬಿಎನ್‌ಎಸ್ ಕಾಯಿದೆ 285ರ ಸ್ಪಷ್ಟ ಉಲ್ಲಂಘನೆಯಾಗಿದ್ದರೂ ಪೋಲೀಸರ ಮೌನ.

ಯಾವುದೇ ವ್ಯಕ್ತಿಯ ಕೃತ್ಯದಿಂದ ಸಾರ್ವಜನಿಕ ರಸ್ತೆಯಲ್ಲಿ ಇತರರಿಗೆ ಅಡಚಣೆ, ಅಪಾಯ ಅಥವಾ ತೊಂದರೆ ಉಂಟಾದರೆ  ಭಾರತೀಯ ನ್ಯಾಯ ಸಂಹಿತಿಯ 285ರ ಉಲ್ಲೇಖದಂತೆ ಯಾವುದೇ ವಾರೆಂಟ್ ರಹಿತವಾಗಿ ದಸ್ತಗಿರಿ ಮಾಡಿ ತನಿಖೆ ನಡೆಸುವ ಅಧಿಕಾರವನ್ನು ಈ ಕಾಯಿದೆ ನೀಡಿದೆ. ಹಾಗೂ ಸಾರ್ವಜನಿಕರಿಗೆ ಉಪದ್ರವಾಗುತ್ತಿರುವ ಹಿನ್ನಲೆಯಲ್ಲಿ ೨೦೨೩ರ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ೧೫೨ರಂತೆ ಕ್ರಮಕೈಕೊಳ್ಳಬೇಕಾಗುತ್ತದೆ. ಆದರೂ ವರ್ಷಗಟ್ಟಲೆಯಿಂದ ಈ ವ್ಯಾಪಾರಿಗಳಿಂದ ತೊಂದರೆ ಆಗುತ್ತಿದ್ದರೂ ಪೋಲೀಸರು ಯಾವುದೇ ಕ್ರಮ ಕೈಗೊಳ್ಳದಿರುವುದರ ಬಗ್ಗೆ ಸಾರ್ವಜನಿಕರು ಅಸಮಾಧಾನ ಹೊರಹಾಕುತ್ತಿದ್ದಾರೆ.


ಜವಾಬ್ದಾರಿ ಮರೆತ ಪಟ್ಟಣ ಪಂಚಾಯಿತಿ

ಸಂತೆ ಮೈದಾನದಲ್ಲಿ ಕನಿಷ್ಟ ಮೂಲಭೂತ ಸೌಕರ್ಯ ಒದಗಿಸಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿರುವುದರಿಂದ ಅಲ್ಲಿ ವ್ಯಾಪಾರ ಮಾಡುವವರಿಂದ ಪಟ್ಟಣ ಪಂಚಾಯಿತಿ ಕನಿಷ್ಟ ಆದಾಯ ನಿಗದಿಪಡಿಸಿಕೊಳ್ಳಬಹುದು. ಪಟ್ಟಣ ಪಂಚಾಯಿತಿಗೆ ನಿಗದಿತ ಆದಾಯ ಕೊಡುವವರಿಗೂ ಸಂತೆಯದಿನ ಸಂತೆ ಪ್ರದೇಶದ ಹೊರಗೆ ವ್ಯಾಪಾರ ಮಾಡುವುದರಿಂದ ನಷ್ಟವಾಗುತ್ತದೆ. ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ. ಕರ್ನಾಟಕ ಮುನ್ಸಿಪಲ್ ಕಾಯಿದೆ 1964ರ ನಿಯಮ 216(೨)ರಂತೆ ಸಾರ್ವಜನಿಕರಿಗೆ ತಡೆಯುಂಟಾಗುವುದರಿಂದ ಇದನ್ನು ತೆರವುಗೊಳಿಸುವ ಅಧಿಕಾರ ನೀಡಿದ್ದರೂ ಜನರ ಮತ್ತು ವ್ಯಾಪಾರಿಗಳ ಹಿತಕ್ಕೆ ಧಕ್ಕೆ ಮಾಡುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. 

ಮುಂದಿನ ದಿನಗಳಲ್ಲಿಯಾದರೂ ಸಂಬಂಧಿಸಿದ ಇಲಾಖೆಗಳು ಸಾರ್ವಜನಿಕ ರಸ್ತೆ, ಸಂಚಾರದ ಸುಗಮತೆ ಹಾಗೂ ಸಾರ್ವಜನಿಕ ಶಾಂತಿಗೆ ಸಂಬಂಧಿಸಿದ ಸಮಸ್ಯೆಯಾಗಿ ಪರಿಣಮಿಸದಂತೆ ವ್ಯವಸ್ಥೆ ನಿರ್ಮಿಸಬೇಕಾಗಿದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ.