ಜಯಚಾಮರಾಜೇಂದ್ರ ಸೇತುವೆ ಮೇಲಿಂದ ತುಂಗಾನದಿಗೆ ಗಣೇಶ ವಿಸರ್ಜನೆ; ಸುವರ್ಣ ಸಂಭ್ರಮಕ್ಕೆ ಅದ್ದೂರಿ ತೆರೆ
ತೀರ್ಥಹಳ್ಳಿ: ಇಲ್ಲಿನ ಕುರುವಳ್ಳಿ ಯುವಕ ಸಂಘವು ತನ್ನ 50ನೇ ವರ್ಷದ ಶ್ರೀ ಗಣೇಶೋತ್ಸವವನ್ನು ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅತ್ಯಂತ ವಿಜೃಂಭಣೆಯಿಂದ ಆಚರಿಸುವ ಮೂಲಕ ಸುವರ್ಣ ಮಹೋತ್ಸವದ ಸಂಭ್ರಮಕ್ಕೆ ಅರ್ಥಪೂರ್ಣ ಮೆರುಗು ನೀಡಿತು.
ಐದು ದಶಕಗಳ ಗಣೇಶೋತ್ಸವದ ಪರಂಪರೆಯನ್ನು ಸ್ಮರಿಸುವ ಜೊತೆಗೆ ಪ್ರಸಕ್ತ ಸಾಲಿನ ಉತ್ಸವದಲ್ಲಿ ಸರ್ವಧರ್ಮಗಳ ಪಾಲ್ಗೊಳ್ಳುವಿಕೆಯನ್ನು ಆಕರ್ಷಿಸುವ ರೀತಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಾರ್ವಜನಿಕರ ಸಹಕಾರ ಹಾಗೂ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಗಣೇಶೋತ್ಸವವು ಸಂಭ್ರಮದ ಕೇಂದ್ರವಾಗಿ ಮೂಡಿಬಂತು.
ಗಣೇಶ ವಿಸರ್ಜನಾ ಸಂದರ್ಭದಲ್ಲಿ ಆಕಾಶದಲ್ಲಿ ಸಿಡಿಮದ್ದಿನ ಚಿತ್ತಾರಗಳು ಮೂಡಿ, ನೋಡುಗರ ಗಮನ ಸೆಳೆದವು. ಬೈಕ್ ಹಾಗೂ ಕಾರು ರ್ಯಾಲಿಗಳು ಉತ್ಸವಕ್ಕೆ ಮತ್ತಷ್ಟು ಮೆರುಗು ತಂದರೆ, ಮಹಿಳಾ ಸದಸ್ಯರು ಸೇರಿದಂತೆ ವಿವಿಧ ವರ್ಗದ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.
ಸೇತುವೆ ಮೇಲಿಂದ ತುಂಗೆಯ ಮಡಿಲಿಗೆ
ತೀರ್ಥಹಳ್ಳಿಯ ಇತಿಹಾಸದಲ್ಲೇ ಪ್ರಪ್ರಥಮವೆಂಬಂತೆ ಸುಪ್ರಸಿದ್ಧ ಜಯಚಾಮರಾಜೇಂದ್ರ ಸೇತುವೆ ಮೇಲಿನಿಂದ ಕ್ರೇನ್ ಸಹಾಯದೊಂದಿಗೆ ತುಂಗಾನದಿಯಲ್ಲಿ ಗಣೇಶ ಮೂರ್ತಿಯ ವಿಸರ್ಜನೆ ನೆರವೇರಿಸಲಾಯಿತು. ಅಪರೂಪದ ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸೇತುವೆ ಹಾಗೂ ನದಿತೀರದ ಸುತ್ತಮುತ್ತ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದರು.
ಐದು ದಶಕಗಳ ಹಿಂದೆ ಗಣೇಶೋತ್ಸವಕ್ಕೆ ಮುನ್ನುಡಿ ಬರೆದ ಹಿರಿಯರನ್ನು ಸ್ಮರಿಸುತ್ತಾ, ಅವರ ಆಶಯ ಮತ್ತು ಪರಂಪರೆಯನ್ನು ಮುಂದುವರಿಸುವ ಸಂಕಲ್ಪದೊಂದಿಗೆ ಈ ಬಾರಿಯ ಸುವರ್ಣ ಮಹೋತ್ಸವವನ್ನು ಆಚರಿಸಿ ಮುಂದಿನ ಹತ್ತಾರು ವರ್ಷಗಳ ಕಾಲ ಜನಮಾನಸದಲ್ಲಿ ಉಳಿಯುವಂತಹ ಸ್ಮರಣೀಯ ಗಣೇಶೋತ್ಸವವಾಗಿ ಈ ವರ್ಷದ ಕಾರ್ಯಕ್ರಮ ರೂಪುಗೊಂಡಿದ್ದು, ಅಧ್ಯಕ್ಷ ಎಚ್.ಪಿ. ಅನಿಲ್ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರ ಶ್ರದ್ಧೆ, ಭಕ್ತಿಪೂರ್ವಕ ಪರಿಶ್ರಮದೊಂದಿಗೆ ಸಾರ್ವಜನಿಕರ ಸಹಕಾರ ಹಾಗೂ ಪಾಲ್ಗೊಳ್ಳುವಿಕೆಯಿಂದ ಉತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿತು.
ಐದು ದಶಕಗಳ ಪರಂಪರೆಗೆ ಸುವರ್ಣ ಸ್ಪರ್ಶ ನೀಡಿದ ಕುರುವಳ್ಳಿ ಯುವಕ ಸಂಘದ ಗಣೇಶೋತ್ಸವ, ತೀರ್ಥಹಳ್ಳಿಯ ಸಾಂಸ್ಕೃತಿಕ ಬದುಕಿನಲ್ಲಿ ಮತ್ತೊಂದು ಸ್ಮರಣೀಯ ಅಧ್ಯಾಯವಾಗಿ ದಾಖಲಾಗಿದೆ.
