ತೀರ್ಥಹಳ್ಳಿ: "ಸೈಬರ್ ಅಪರಾಧದ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಅರಿವು" ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.) ತೀರ್ಥಹಳ್ಳಿ ತಾಲೂಕು ಘಟಕದ ವತಿಯಿಂದ, ಸೆಪ್ಟೆಂಬರ್ 26ರ ಶನಿವಾರದಂದು ಬೆಳಿಗ್ಗೆ 10-30 ಕ್ಕೆ ಇಲ್ಲಿನ ಮಾಧವ ಮಂಗಲ ಸಭಾಭವನದಲ್ಲಿ ಏರ್ಪಡಿಸಿದೆ.
ಶ್ರೀ.ಕ್ಷೇ.ಧ.ಗ್ರಾ.ಯೋ. ಬಿಸಿ ಟ್ರಸ್ಟ್ (ರಿ.) ಶಿವಮೊಗ್ಗದ ನಿರ್ದೇಶಕರಾದ ಶ್ರೀಯುತ ಮುರಳೀಧರ್ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಶಿವಮೊಗ್ಗ ಸುರಭಿ ಮಹಿಳಾ ಮಂಡಳಿಯ ನಿರ್ದೇಶಕರಾದ ಶ್ರೀಮತಿ ರೇಖಾ ಗಿರೀಶ್ ಜಿ. ಎಂ. ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಪುಷ್ಪಗುಚ್ಛ ಸ್ಪರ್ಧೆ, ಕರಕುಶಲ ವಸ್ತುಗಳ ಸ್ಪರ್ಧೆ, ಪೌಷ್ಟಿಕ ಆಹಾರ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುವ ಈ ವಿನೂತನ ಕಾರ್ಯಕ್ರಮಕ್ಕೆ ಜ್ಞಾನವಿಕಾಸ ಸಮನ್ವಯಾಧಿಕಾರಿ/ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು ಹಾಗೂ ತೀರ್ಥಹಳ್ಳಿ ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀಮತಿ ಮಮತಾ ಎನ್ ಶೆಟ್ಟಿ ಅವರು ಸ್ವಾಗತಿಸಿದ್ದಾರೆ.