ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

ಸೆ.26ರಂದು ಕೋಣಂದೂರಿನಲ್ಲಿ ಪ್ರಜಾ ಸೇವಾ ಕಾರ್ಯಕ್ರಮ


ತೀರ್ಥಹಳ್ಳಿ: ಸಾರ್ವಜನಿಕರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿ, ಸಂಬಂಧಿಸಿದ ಇಲಾಖೆಗಳ ಮೂಲಕ ಸಕಾಲದಲ್ಲಿ ಸೂಕ್ತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಸೆ.26ರಂದು ‘ಪ್ರಜಾ ಸೇವಾ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಅಗ್ರಹಾರ ಹೋಬಳಿಗೆ ಸಂಬಂಧಿಸಿದ ಕಾರ್ಯಕ್ರಮವು ಸೆ.26ರಂದು ಬೆಳಿಗ್ಗೆ 9.30ಕ್ಕೆ ಕೋಣಂದೂರಿನ ಶ್ರೀ ಶಿವಲಿಂಗೇಶ್ವರ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ತೀರ್ಥಹಳ್ಳಿ ತಾಲ್ಲೂಕು ಕಚೇರಿ ಪ್ರಕಟಣೆ ತಿಳಿಸಿದೆ.

ಸರ್ಕಾರದ ಸುತ್ತೋಲೆಯಂತೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾರ್ವಜನಿಕರು ತಮ್ಮ ವಿವಿಧ ಸಮಸ್ಯೆಗಳು ಹಾಗೂ ಸರ್ಕಾರಿ ಸೇವೆಗಳಿಗೆ ಸಂಬಂಧಿಸಿದ ಕುಂದುಕೊರತೆ, ಅಹವಾಲು ಮತ್ತು ಮನವಿಗಳನ್ನು ಸಲ್ಲಿಸಬಹುದಾಗಿದೆ.

ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಸೇವೆಗಳನ್ನು ಪಡೆಯುವ ಸಂದರ್ಭದಲ್ಲಿ ಎದುರಾಗಿರುವ ಸಮಸ್ಯೆಗಳು, ದಾಖಲೆಗಳಿಗೆ ಸಂಬಂಧಿಸಿದ ತೊಂದರೆಗಳು, ಸರ್ಕಾರಿ ಯೋಜನೆ ಹಾಗೂ ಸೌಲಭ್ಯಗಳ ಕುರಿತು ಇರುವ ಅಹವಾಲುಗಳನ್ನು ಸಾರ್ವಜನಿಕರು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬಹುದಾಗಿದೆ.

ಜನರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ನೇರವಾಗಿ ಮಂಡಿಸಲು ಹಾಗೂ ಸಂಬಂಧಿಸಿದ ಇಲಾಖೆಯ ಗಮನಕ್ಕೆ ತಂದು ಪರಿಹಾರ ಪಡೆಯಲು ‘ಪ್ರಜಾ ಸೇವಾ’ ಕಾರ್ಯಕ್ರಮ ವೇದಿಕೆಯಾಗಲಿದೆ. ಸರ್ಕಾರದ ಪ್ರಜಾ ಸೇವಾ ಅಭಿಯಾನದ ಉದ್ದೇಶವೂ ಆಡಳಿತವನ್ನು ಜನರ ಬಳಿಗೆ ಕೊಂಡೊಯ್ದು, ಸಾರ್ವಜನಿಕರ ಕುಂದುಕೊರತೆಗಳಿಗೆ ಕಾಲಮಿತಿಯಲ್ಲಿ ಸ್ಪಂದಿಸುವುದಾಗಿದೆ.