ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ 94 ಸಿ (ಅಕ್ರಮ ಮನೆ ಸಕ್ರಮಗೊಳಿಸುವ ಕಾಯ್ದೆ) ಕುರಿತಂತೆ ಶಾಸನ ಪರಿಶೀಲನೆಗೆ ಪ್ರತ್ಯೇಕ ಕ್ಯಾಬಿನೆಟ್ ಸಭೆ ನಡೆಸುತ್ತೇನೆ. ಪಾರಂಪರಿಕ ಅರಣ್ಯ ಕಾಯ್ದೆಯಡಿ ಈಗಾಲೇ ಪರಿಶಿಷ್ಟ ಜಾತಿಗೆ 25, ಸಾಮಾನ್ಯ ವರ್ಗಕ್ಕೆ 75 ವರ್ಷಗಳ ಅನುಭೋಗದ ಆಧಾರದಲ್ಲಿ ಹಕ್ಕುಪತ್ರ ಕೊಡಲಾಗುತ್ತಿದೆ. ಅದನ್ನು 25 ವರ್ಷಗಳಿಗೆ ಇಳಿಸುವುದಾಗಿ ತಿಳಿಸಿದರು. ಬಗರ್ ಹುಕುಂ ಕಾಯ್ದೆಯನ್ನು ಮತ್ತಷ್ಟು ಬಲಿಷ್ಟಗೊಳಿಸಲು ಚಿಂತನೆ ನಡೆಸುತ್ತೇನೆ. ಈಗಾಗಲೇ ಅರಣ್ಯ ಒತ್ತುವರಿ ಮಾಡಿಕೊಂಡಿರುವ ಕುಟುಂಬಗಳಿಗೆ ಅರಣ್ಯ ಇಲಾಖೆಯಿಂದ ನೋಟೀಸ್ ಜಾರಿಯಾಗಿದೆ. ಇನ್ನುಮುಂದೆ ಅರಣ್ಯ ಇಲಾಖೆ ಹೊಸ ನೋಟೀಸ್ ಕೊಡಲು ಹೋಗಬೇಡಿ. ಹೊಸ ಒತ್ತುವರಿಗೆ ಅವಕಾಶ ಕೊಡುವುದು ಬೇಡ ಎಂದು ಹೇಳಿದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ ವಿದೇಶೀ ಹಣದ ಮೂಲದಿಂದ ಪಶ್ಚಿಮ ಘಟ್ಟ ಹೋರಾಟ ನಡೆಯುತ್ತಿದೆ. ಇದನ್ನು ಬೇರೆ ದೃಷ್ಟಿಯಿಂದಲೇ ಗಮನಿಸಬೇಕಾಗಿದೆ. 1932ರ ಹಕ್ಕು ಪತ್ರ ರದ್ದಾಗುವ ಸ್ಥಿತಿಗೆ ಬಂದಿದೆ. ಕೆಲವೆಡೆ ಹೆಣ ಸುಡುವ ಜಾಗವೂ ಇಲ್ಲವಾಗಿದೆ. ಕಸ್ತೂರಿ ರಂಗನ್ ವರದಿ ವಿಚಾರವಾಗಿ ಒಬ್ಬರಮೇಲೊಬ್ಬರು ಹೊಣೆಗಾರಿಕೆ ಹೊರಿಸಿ ನುಣುಚಿಕೊಳ್ಳುವ ಯತ್ನ ನಡೆಯಬಾರದು. ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಡೋಣ ಎಂದರು.
ಸಂವಾದದಲ್ಲಿ ಪಾಲ್ಗೊಂಡವರ ಒತ್ತಾಯ :
ಸಭೆಯ ಅತ್ಯಂತ ಪ್ರಮುಖ ಬೇಡಿಕೆ ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಯನ್ನು ಅಂತಿಮಗೊಳಿಸುವ ಮೊದಲು ಭೌತಿಕ ಸಮೀಕ್ಷೆ ನಡೆಸಬೇಕು. ಉಪಗ್ರಹ ಮತ್ತು ಜಿಪಿಎಸ್ ಆಧಾರಿತ ಮ್ಯಾಪಿಂಗ್‌ನಿAದ ಮಾತ್ರ ಪ್ರದೇಶ ಗುರುತಿಸಿರುವುದರಿಂದ ನೆಲಮಟ್ಟದ ವಾಸ್ತವ ಪರಿಸ್ಥಿತಿಯನ್ನೂ ಪರಿಶೀಲಿಸಬೇಕು. ಜನವಸತಿ ಪ್ರದೇಶ, ಕೃಷಿ ಭೂಮಿ, ತೋಟಗಾರಿಕೆ ಪ್ರದೇಶ ಹಾಗೂ ಅರಣ್ಯ ಪ್ರದೇಶಗಳನ್ನು ಪ್ರತ್ಯೇಕವಾಗಿ ಗುರುತಿಸಬೇಕು.
ಕೇರಳ ಮಾದರಿಯಲ್ಲಿ ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸಿ ಭೌತಿಕ ಸಮೀಕ್ಷೆ ನಡೆಸಬೇಕು. ಸಮೀಕ್ಷೆಯ ನಂತರವೇ ಪರಿಸರ ಸೂಕ್ಷ್ಮ ಪ್ರದೇಶದ ಅಂತಿಮ ವ್ಯಾಪ್ತಿಯನ್ನು ನಿಗದಿಪಡಿಸಬೇಕು. ಈಗಾಗಲೇ
ಜನವಸತಿ ಮತ್ತು ಕೃಷಿ ಚಟುವಟಿಕೆಗಳು ನಡೆಯುತ್ತಿರುವ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಿಂದ ಹೊರಗಿಡುವ ಬಗ್ಗೆ ಪರಿಶೀಲಿಸಬೇಕು. ಸಮೀಕ್ಷೆಯ ವರದಿಯನ್ನು ಕೇಂದ್ರ ಸರ್ಕಾರದ ಮುಂದೆ ರಾಜ್ಯದ ಅಧಿಕೃತ ನಿಲುವಿನೊಂದಿಗೆ ಮಂಡಿಸಬೇಕು. ಅಗತ್ಯವಿದ್ದರೆ ಸೂಕ್ತ ದಾಖಲೆಗಳೊಂದಿಗೆ ನ್ಯಾಯಾಲಯ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮುಂದೆಯೂ ವಿಷಯ ಮಂಡಿಸಬೇಕು ಎಂಬುದಾಗಿತ್ತು.
