KERC ಎಂದರೆ **ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಇದು ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ, ಪ್ರಸರಣ, ಸರಬರಾಜು, ವಿತರಣೆ ಮತ್ತು ಮಾರಾಟದ ಮೇಲ್ವಿಚಾರಣೆ ನಡೆಸಲು ಹಾಗೂ ಗ್ರಾಹಕರ ಹಿತಾಸಕ್ತಿ ಕಾಪಾಡಲು ವಿದ್ಯುತ್ ಕಾಯ್ದೆ 2003ರ (Electricity Act 2003) ಸೆಕ್ಷನ್ 82ರ ಅಡಿಯಲ್ಲಿ ಸ್ಥಾಪಿಸಲಾದ ಸ್ವಾಯತ್ತ ನಿಯಂತ್ರಣ ಸಂಸ್ಥೆಯಾಗಿದೆ.
KERC ಯ ಮುಖ್ಯ ಅಧಿಕಾರಗಳು ಮತ್ತು ನಿಯಮಗಳ ಸ್ವರೂಪ:
1. ವಿದ್ಯುತ್ ದರ ನಿರ್ಣಯ : ಮೆಸ್ಕಾಂ (MESCOM), ಬೆಸ್ಕಾಂ (BESCOM) ಸೇರಿದಂತೆ ರಾಜ್ಯದ ಎಲ್ಲಾ ಎಸ್ಕಾಂಗಳು (ESCOMs) ಕೇಳುವ ವಿದ್ಯುತ್ ದರ ಏರಿಕೆ ಪ್ರಸ್ತಾವನೆಗಳನ್ನು ಪರಿಶೀಲಿಸಿ, ಸಾರ್ವಜನಿಕರ ಅಭಿಪ್ರಾಯ ಆಲಿಸಿ ಅಂತಿಮ ವಿದ್ಯುತ್ ದರವನ್ನು ನಿಗದಿಪಡಿಸುವುದು KERC ಯ ಪ್ರಮುಖ ಕೆಲಸ.
2.ಸೇವಾ ಗುಣಮಟ್ಟ ನಿಯಮಾವಳಿಗಳು: ಗ್ರಾಹಕರಿಗೆ ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವುದನ್ನು ಖಚಿತಪಡಿಸಲು ನಿಯಮಗಳನ್ನು ರೂಪಿಸುತ್ತದೆ. ಉದಾಹರಣೆಗೆ: ಟ್ರಾನ್ಸ್ಫಾರ್ಮರ್ ಸುಟ್ಟುಹೋದರೆ ಅಥವಾ ಮೇನ್ ಲೈನ್ ಕಡಿತಗೊಂಡರೆ ಎಷ್ಟು ಗಂಟೆಗಳಲ್ಲಿ ಸರಿಪಡಿಸಬೇಕು? ನಿಗದಿತ ಸಮಯಕ್ಕೆ ಸೇವೆ ನೀಡದಿದ್ದರೆ ಗ್ರಾಹಕರಿಗೆ ಮೆಸ್ಕಾಂ/ಎಸ್ಕಾಂಗಳು ಎಷ್ಟು ಪರಿಹಾರ (ದಂಡ) ನೀಡಬೇಕು ಎಂಬುದನ್ನು ಈ ನಿಯಮಗಳು ಸ್ಪಷ್ಟಪಡಿಸುತ್ತವೆ.
3.ಪರವಾನಗಿ ನೀಡುವುದು : ರಾಜ್ಯದಲ್ಲಿ ವಿದ್ಯುತ್ ಹಂಚಿಕೆ ಮತ್ತು ವ್ಯಾಪಾರ ಮಾಡುವ ಕಂಪನಿಗಳಿಗೆ ಪರವಾನಗಿ ನೀಡುವುದು ಹಾಗೂ ಅವರ ಕಾರ್ಯವೈಖರಿಯನ್ನು ನಿಯಂತ್ರಿಸುವುದು.
4. ವಿವಾದಗಳ ನಿವಾರಣೆ : ವಿದ್ಯುತ್ ಕಂಪನಿಗಳು ಮತ್ತು ಗ್ರಾಹಕರ ನಡುವೆ ಅಥವಾ ವಿದ್ಯುತ್ ಉತ್ಪಾದಕರು ಮತ್ತು ಸರಬರಾಜು ಕಂಪನಿಗಳ ನಡುವೆ ಉದ್ಭವಿಸುವ ವಿವಾದಗಳನ್ನು ಇತ್ಯರ್ಥಪಡಿಸಲು ಗ್ರಾಹಕರ ಕುಂದುಕೊರತೆ ನಿವಾರಣಾ ವೇದಿಕೆ (CGRF) ಮತ್ತು KERC ಮೇಲ್ಮನವಿ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತದೆ.
5. ನವೀಕರಿಸಬಹುದಾದ ಇಂಧನ ನಿಯಮಗಳು : ಸೌರಶಕ್ತಿ (Solar) ಮತ್ತು ಪವನ ಶಕ್ತಿ (Wind Energy) ಬಳಕೆಯನ್ನು ಉತ್ತೇಜಿಸಲು ಹಸಿರು ಇಂಧನ ನೀತಿಗಳು ಮತ್ತು ಕಡ್ಡಾಯ ನಿಯಮಗಳನ್ನು ರೂಪಿಸುತ್ತದೆ.
ಮಲೆನಾಡಿನಲ್ಲಿ ಮಳೆಗಾಲ ಬಂತೆಂದರೆ ವಿದ್ಯುತ್ ಕಣ್ಣಾಮುಚ್ಚಾಲೆ ಸಾಮಾನ್ಯ. ಮರ ಬಿದ್ದು ಕಂಬ ಮುರಿಯುವುದು, ಟ್ರಾನ್ಸ್ಫಾರ್ಮರ್ (TC) ಸುಟ್ಟು ವಾರಗಟ್ಟಲೆ ಕತ್ತಲಲ್ಲಿ ಕಳೆಯುವುದು, ಅಥವಾ ಹೈ-ವೋಲ್ಟೇಜ್ ಬಂದು ಮನೆಯ ಟಿವಿ, ಫ್ರಿಡ್ಜ್, ಮಿಕ್ಸಿ ಸುಟ್ಟುಹೋಗುವುದು ಇಲ್ಲಿನ ಜನರಿಗೆ ಹೊಸದಲ್ಲ. ಆದರೆ, **"ಇದೆಲ್ಲಾ ನಮ್ಮ ಹಣೆಬರಹ"** ಎಂದು ಸುಮ್ಮನಾಗುವ ಗ್ರಾಹಕರಿಗೆ **ವಿದ್ಯುತ್ ಕಾಯ್ದೆ 2003** ಮತ್ತು **ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC)** ನೀಡಿರುವ ಕಾನೂನು ರಕ್ಷಣೆಗಳ ಬಗ್ಗೆ ಮಾಹಿತಿನೋಡಿ :
1. ದಿನಗಟ್ಟಲೆ ಕರೆಂಟ್ ಇಲ್ಲದಿದ್ದರೆ ಮೆಸ್ಕಾಂ ಗ್ರಾಹಕರಿಗೆ ದಂಡ ಕಟ್ಟಬೇಕು!
KERC ಯ 'ಸೇವಾ ಗುಣಮಟ್ಟ ನಿಯಮಾವಳಿ' (Standards of Performance - SoP Regulations) ಪ್ರಕಾರ, ದೂರು ದಾಖಲಾದ ನಂತರ ನಿಗದಿತ ಸಮಯದೊಳಗೆ ಮೆಸ್ಕಾಂ ವಿದ್ಯುತ್ ಸಂಪರ್ಕ ಸರಿಪಡಿಸಲೇಬೇಕು. ತಪ್ಪಿದಲ್ಲಿ ಗ್ರಾಹಕರಿಗೆ ಪರಿಹಾರ ನೀಡುವುದು ಕಡ್ಡಾಯ.
ಸಾಮಾನ್ಯ ಫ್ಯೂಸ್ ಹೋದರೆ (Fuse-off) 24 ಗಂಟೆಯೊಳಗೆ (ನಗರದಲ್ಲಿ 6 ಗಂಟೆ) ಆಗದಿದ್ದರೆ ಪ್ರತಿ ಪ್ರಕರಣಕ್ಕೆ ₹50 ಪರಿಹಾರ ನೀಡಬೇಕು.
ಮೇನ್ ಲೈನ್ / ಕಂಬ ಮುರಿದು ಬಿದ್ದರೆ 24 ಗಂಟೆಯೊಳಗೆ (ನಗರದಲ್ಲಿ 12 ಗಂಟೆ) ಆಗದಿದ್ದರೆ ಪರಿಹಾರ ಪ್ರತಿ ದಿನದ ವಿಳಂಬಕ್ಕೆ ₹50 ಟ್ರಾನ್ಸ್ಫಾರ್ಮರ್ (TC) ಸುಟ್ಟುಹೋದರೆ 24 ಗಂಟೆಯೊಳಗೆ (ನಗರದಲ್ಲಿ 6 ಗಂಟೆ) ಆಗದಿದ್ದರೆ ವಿಳಂಬವಾಗುವ ಪ್ರತಿ ದಿನಕ್ಕೆ ₹50 ಪರಿಹಾರ
ಭಾರಿ ಪ್ರಕೃತಿ ವಿಕೋಪ, ರಸ್ತೆ ಸಂಪರ್ಕ ಕಡಿತದಂತಹ 'Force Majeure' ಸಂದರ್ಭಗಳನ್ನು ಹೊರತುಪಡಿಸಿ, ಸಿಬ್ಬಂದಿ ನಿರ್ಲಕ್ಷ್ಯದಿಂದ ವಿಳಂಬವಾದರೆ ಈ ನಿಯಮ ಅನ್ವಯವಾಗುತ್ತದೆ. ಈ ಹಣವನ್ನು ನಗದು ರೂಪದಲ್ಲಿ ನೀಡುವುದಿಲ್ಲ, ಬದಲಾಗಿ ಮುಂದಿನ ವಿದ್ಯುತ್ ಬಿಲ್ನಲ್ಲಿ ಕಡಿತಗೊಳಿಸಲಾಗುತ್ತದೆ.
ವೋಲ್ಟೇಜ್ ಏರುಪೇರಿನಿಂದ ಟಿವಿ, ಫ್ರಿಡ್ಜ್ ಸುಟ್ಟುಹೋದರೆ ಪರಿಹಾರ ಪಡೆಯುವುದು ಹೇಗೆ?
ಭಾರತೀಯ ವಿದ್ಯುತ್ ನಿಯಮಗಳ (Rule 46) ಪ್ರಕಾರ, ಮನೆಗಳಿಗೆ ಪೂರೈಕೆಯಾಗುವ ವಿದ್ಯುತ್ ವೋಲ್ಟೇಜ್ 230 ವೋಲ್ಟ್ (ಶೇ. 6 ರಷ್ಟು ಹೆಚ್ಚು-ಕಡಿಮೆ ಅಂದರೆ 216V ನಿಂದ 244V ಒಳಗೆ) ಇರಬೇಕು. ಮೆಸ್ಕಾಂ ಲೈನ್ನಲ್ಲಿ ನ್ಯೂಟ್ರಲ್ ವೈರ್ ತುಂಡಾಗಿ ಅಥವಾ ಟ್ರಾನ್ಸ್ಫಾರ್ಮರ್ ದೋಷದಿಂದ ಹೈ-ವೋಲ್ಟೇಜ್ ಬಂದು ಮನೆಯ ಉಪಕರಣಗಳು ಸುಟ್ಟುಹೋದರೆ ಮೆಸ್ಕಾಂ ಹೊಣೆಯಾಗುತ್ತದೆ.
ಪರಿಹಾರ ಪಡೆಯಲು ಏನು ಮಾಡಬೇಕು?
1. ತಕ್ಷಣ ದೂರು ದಾಖಲಿಸಿ: ಘಟನೆ ನಡೆದ ತಕ್ಷಣ ಮೆಸ್ಕಾಂ ಸಹಾಯವಾಣಿ **1912** ಗೆ ಕರೆ ಮಾಡಿ ವೋಲ್ಟೇಜ್ ಏರುಪೇರಿನ ಬಗ್ಗೆ ದೂರು ದಾಖಲಿಸಿ ಮತ್ತು ದೂರಿನ ಸಂಖ್ಯೆ ಬರೆದಿಟ್ಟುಕೊಳ್ಳಿ.
2. ಸಾಕ್ಷ್ಯ ಸಂಗ್ರಹಿಸಿ: ಸುಟ್ಟುಹೋದ ಉಪಕರಣಗಳು, ಟ್ರಿಪ್ ಆದ MCB ಬೋರ್ಡ್ನ ಫೋಟೋ ಮತ್ತು ವಿಡಿಯೋ ತೆಗೆದುಕೊಳ್ಳಿ. ಅಕ್ಕಪಕ್ಕದ ಮನೆಯವರಿಗೂ ಹೀಗಾಗಿದ್ದರೆ ಅವರ ವಿವರವನ್ನೂ ಸಂಗ್ರಹಿಸಿ.
3. ರಿಪೇರಿ ಅಂದಾಜು ಪಟ್ಟಿ (Estimation): ಅಧಿಕೃತ ಟೆಕ್ನಿಷಿಯನ್ ಬಳಿ ಪರಿಶೀಲಿಸಿ, "ಹೈ-ವೋಲ್ಟೇಜ್ನಿಂದಾಗಿ ಉಪಕರಣ ಸುಟ್ಟುಹೋಗಿದೆ" ಎಂದು ನಮೂದಿಸಿರುವ ರಿಪೇರಿ ಬಿಲ್ ಅಥವಾ ಅಂದಾಜು ಪಟ್ಟಿಯನ್ನು ಪಡೆಯಿರಿ.
4. ಲಿಖಿತ ಅರ್ಜಿ ಸಲ್ಲಿಸಿ: 30 ದಿನಗಳ ಒಳಗಾಗಿ ಸ್ಥಳೀಯ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (AEE) ಕಚೇರಿಗೆ ವಿದ್ಯುತ್ ಬಿಲ್ ಪ್ರತಿ, ದೂರಿನ ಸಂಖ್ಯೆ, ಫೋಟೋ ಮತ್ತು ರಿಪೇರಿ ಬಿಲ್ ಲಗತ್ತಿಸಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿ.
5. ಮೆಸ್ಕಾಂ ಸ್ಪಂದಿಸದಿದ್ದರೆ: ಅರ್ಜಿ ಸಲ್ಲಿಸಿದ 90 ದಿನಗಳಲ್ಲಿ ಪರಿಹಾರ ಸಿಗದಿದ್ದರೆ, ಗ್ರಾಹಕರು ಗ್ರಾಹಕರ ಕುಂದುಕೊರತೆ ನಿವಾರಣಾ ವೇದಿಕೆ (CGRF) ಅಥವಾ ಜಿಲ್ಲಾ ಗ್ರಾಹಕರ ನ್ಯಾಯಾಲಯಕ್ಕೆ (Consumer Court) ದೂರು ನೀಡಬಹುದು. ರಾಜ್ಯದ ಹಲವು ಪ್ರಕರಣಗಳಲ್ಲಿ ಗ್ರಾಹಕ ನ್ಯಾಯಾಲಯವು ಗ್ರಾಹಕರಿಗೆ ಉಪಕರಣದ ಪೂರ್ಣ ಮೊತ್ತದ ಜೊತೆಗೆ ಮಾನಸಿಕ ಹಿಂಸೆಗೂ ಪರಿಹಾರ ಕೊಡಿಸಿದ ಉದಾಹರಣೆಗಳಿವೆ.
ಸಾಮಾನ್ಯ ಗ್ರಾಹಕರಿಗೆ ತಿಳಿಯದ ಇನ್ನೆರಡು ಮೆಸ್ಕಾಂ ನಿಯಮಗಳು:
ಮೀಟರ್ ಸುಟ್ಟುಹೋದರೆ ಉಚಿತ ಬದಲಾವಣೆ: ಮೀಟರ್ನಲ್ಲಿ ತಾಂತ್ರಿಕ ದೋಷ ಕಂಡುಬಂದು ಅಥವಾ ಸುಟ್ಟುಹೋದರೆ (ಗ್ರಾಹಕರು ಉದ್ದೇಶಪೂರ್ವಕವಾಗಿ ಹಾಳು ಮಾಡದಿದ್ದರೆ), ಮೆಸ್ಕಾಂ ತನ್ನ ಸ್ವಂತ ಖರ್ಚಿನಲ್ಲಿ ಹೊಸ ಮೀಟರ್ ಅಳವಡಿಸಬೇಕು. ಇದಕ್ಕೆ ಗ್ರಾಹಕರಿಂದ ಹಣ ಪಡೆಯುವಂತಿಲ್ಲ.
ಭದ್ರತಾ ಠೇವಣಿ (Security Deposit) ಮೇಲೆ ಬಡ್ಡಿ: ನೀವು ಹೊಸ ಸಂಪರ್ಕ ಪಡೆಯುವಾಗ ಕಟ್ಟಿರುವ ಠೇವಣಿ ಹಣಕ್ಕೆ (ISD) ಮೆಸ್ಕಾಂ ಪ್ರತಿ ವರ್ಷ ಬಡ್ಡಿ ನೀಡಬೇಕು. ಈ ಬಡ್ಡಿ ಹಣವು ಪ್ರತಿ ವರ್ಷ ಏಪ್ರಿಲ್ ಅಥವಾ ಮೇ ತಿಂಗಳ ವಿದ್ಯುತ್ ಬಿಲ್ನಲ್ಲಿ ಸ್ವಯಂಚಾಲಿತವಾಗಿ ಕಡಿತವಾಗಿರುತ್ತದೆ. ಬಿಲ್ನ ಹಿಂಭಾಗ ಅಥವಾ ಕೆಳಭಾಗದಲ್ಲಿ 'ISD Interest' ಎಂದು ನಮೂದಾಗಿರುವುದನ್ನು ಗಮನಿಸಿ.
ಯಾವುದೇ ವಿದ್ಯುತ್ ಸಮಸ್ಯೆ ಎದುರಾದಾಗ ಲೈನ್ಮ್ಯಾನ್ಗೆ ಫೋನ್ ಮಾಡಿ ಸುಮ್ಮನಾಗುವ ಬದಲು, **1912** ಸಹಾಯವಾಣಿಗೆ ಕರೆ ಮಾಡಿ ಅಧಿಕೃತ ದೂರು ಸಂಖ್ಯೆ ಪಡೆದುಕೊಳ್ಳುವುದು ಗ್ರಾಹಕರ ಮೊದಲ ಅಸ್ತ್ರವಾಗಬೇಕು. ಆದರೂ ಕಾನೂನು ಚಾಲನೆಯಲ್ಲಿದ್ದು ಪಾಲನೆಯಲ್ಲಿ ಕಷ್ಟಕರಸಂಗತಿಯಾಗಿರುವುದು ದುರಂತವಲ್ಲವೇ...
