ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

30 ದಿನದೊಳಗೆ ಗ್ರಾಮಠಾಣಾ ಆಸ್ತಿಗಳಿಗೆ ‘ಈ-ಸ್ವತ್ತು’ ಸಿಗುತ್ತದಾ ; ಆದೇಶ ಕಡತದಲ್ಲೇ ಉಳಿಯುತ್ತಾ

Gramathana property owner holding official e-Swathu Form 9 and Form 11 certificate in a village in Karnataka

ಗ್ರಾಮೀಣ ಪ್ರದೇಶದಲ್ಲಿರುವ ಮನೆ, ಖಾಲಿ ನಿವೇಶನ ಅಥವಾ ಆಸ್ತಿಗಳ ಕಾನೂನುಬದ್ಧ ಡಿಜಿಟಲ್ ಹಕ್ಕು ದಾಖಲೆಯಾದ ‘ಈ-ಸ್ವತ್ತು’  ಆಸ್ತಿ ನೋಂದಣಿ, ಬ್ಯಾಂಕ್ ಸಾಲ ಸೌಲಭ್ಯ ಹಾಗೂ ಮಾಲೀಕತ್ವ ದೃಢೀಕರಣಕ್ಕೆ ಅತ್ಯಂತ ಕಡ್ಡಾಯವಾಗಿದೆ.

ನಮೂನೆ-೯  ಗ್ರಾಮಠಾಣಾ ಆಸ್ತಿಯ ಹಕ್ಕು ಮತ್ತು ಮಾಲೀಕತ್ವವನ್ನು ದೃಢೀಕರಿಸುವ ಅಧಿಕೃತ ದಾಖಲೆ. ನಮೂನೆ-೧೧  ಗ್ರಾಮ ಪಂಚಾಯತಿಯಿಂದ ಆಸ್ತಿ ತೆರಿಗೆ ವಸೂಲಾತಿ ಹಾಗೂ ಆಸ್ತಿಯ ವಿವರಗಳನ್ನು ಒಳಗೊಂಡ ದಾಖಲೆ ಇದಾಗಿದ್ದು ಇದನ್ನು ಪಡೆಯಲಿಚ್ಚಿಸುವ ಸ್ಥಳವು  ಸರ್ಕಾರದ ಕಂದಾಯ ದಾಖಲೆಗಳ ಪ್ರಕಾರ ಅಧಿಕೃತ ಗ್ರಾಮಠಾಣಾ (ಆವಾಸಿ ಪ್ರದೇಶ) ಗಡಿಯೊಳಗೆ ಇರಬೇಕು. ಆಸ್ತಿಯು ವಶದಲ್ಲಿದೆ ಅಥವಾ ಪೂರ್ವಜರಿಂದ ಬಂದಿದೆ ಎಂಬುದಕ್ಕೆ ಹಳೆಯ ಪಂಚಾಯತಿ ಖಾತೆ, ತೆರಿಗೆ ರಶೀದಿ ಅಥವಾ ಹಕ್ಕುಪತ್ರವಿರಬೇಕು. (ಹಕ್ಕು ಪತ್ರ ಕಡ್ಡಾಯವೇನಲ್ಲ) ಗ್ರಾಮ ಪಂಚಾಯತಿಗೆ ಪಾವತಿಸಬೇಕಾದ ಆಸ್ತಿ ತೆರಿಗೆಯನ್ನು ಅರ್ಜಿಸಲ್ಲಿಕೆಯ ದಿನಾಂಕದವರೆಗೆ ಸಂಪೂರ್ಣವಾಗಿ ಚುಕ್ತಾ ಮಾಡಿರಬೇಕು. ಆಸ್ತಿಯು ಸರ್ಕಾರಿ ಜಾಗ, ಗೋಮಾಳ ಅಥವಾ ರಸ್ತೆ ಜಾಗವನ್ನು ಒತ್ತುವರಿ ಮಾಡಿರಬಾರದು. ಹೊಸದಾಗಿ ನಿರ್ಮಿಸಿದ ನಿವೇಶನಗಳಾಗಿದ್ದರೆ ಸಾಂವಿಧಾನಿಕ ಪ್ರಾಧಿಕಾರದಿಂದ ಅನುಮೋದನೆ ಪಡೆದಿರಬೇಕು (ಹಳೆಯ ಸಾಂಪ್ರದಾಯಿಕ ಗ್ರಾಮಠಾಣಾ ಆಸ್ತಿಗಳಿಗೆ ಭೂ ಪರಿವರ್ತನೆ ಅಗತ್ಯವಿರುವುದಿಲ್ಲ.

ಅಗತ್ಯವಿರುವ ದಾಖಲೆಗಳು

* ಅರ್ಜಿದಾರರ ಆಧಾರ್ ಕಾರ್ಡ್

* ಹಳೆಯ ಪಂಚಾಯತಿ ಖಾತೆ ಪುಸ್ತಕ / ಉದ್ಧಾರ ಕಾಗದ / ಹಕ್ಕುಪತ್ರ / ನೋಂದಾಯಿತ ಪತ್ರ

* ಇತ್ತೀಚಿನ ಆಸ್ತಿ ತೆರಿಗೆ ಪಾವತಿಸಿದ ರಶೀದಿ

* ಆಸ್ತಿಯ ಮುಂದೆ ನಿಂತು ತೆಗೆದ ಜಿಪಿಎಸ್ (GPS) ಛಾಯಾಚಿತ್ರ

* ವಿದ್ಯುತ್ ಬಿಲ್ (ಮನೆ/ಕಟ್ಟಡವಿದ್ದರೆ)

ಅರ್ಜಿ ಸಲ್ಲಿಸುವ ಮತ್ತು ಪಡೆಯುವ ವಿಧಾನ

ಹತ್ತಿರದ ಗ್ರಾಮ ಒನ್ *ಬಾಪೂಜಿ ಸೇವಾ ಕೇಂದ್ರ (ಗ್ರಾಮ ಪಂಚಾಯತಿ)  ಅಥವಾ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಯಾದ ಬಳಿಕ ಗ್ರಾಮ ಪಂಚಾಯತಿ ಕಾರ್ಯದರ್ಶಿ ಅಥವಾ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಆಸ್ತಿಯ ಅಳತೆ, ಗಡಿ ಹಾಗೂ ಜಿಪಿಎಸ್ ಫೋಟೋವನ್ನು ತಂತ್ರಾಂಶಕ್ಕೆ ಅಪ್‌ಲೋಡ್ ಮಾಡುತ್ತಾರೆ.

ಪಿಡಿಒ ಅವರು ದಾಖಲೆಗಳನ್ನು ಪರಿಶೀಲಿಸಿ, ಸರ್ಕಾರ ನಿಗದಿಪಡಿಸಿದ ಶುಲ್ಕ ಪಾವತಿಸಿಕೊಂಡು ಡಿಜಿಟಲ್ ಸಹಿ ಮೂಲಕ ಅನುಮೋದನೆ ನೀಡುತ್ತಾರೆ.

ಸಕಾಲ ಸೇವೆಯಡಿ (ಸಾಮಾನ್ಯವಾಗಿ ೧೫ ರಿಂದ ೩೦ ದಿನಗಳ ಒಳಗೆ) ಪ್ರಕ್ರಿಯೆ ಪೂರ್ಣಗೊಂಡು ಅನುಮೋದಿತ ಪ್ರಮಾಣಪತ್ರ ಲಭ್ಯವಾಗುತ್ತದೆ.

‘ಗ್ರಾಮಠಾಣಾ’  ಅಂದರೆ ಯಾವ ಯಾವ ಪ್ರದೇಶಗಳು ಬರುತ್ತವೆ?

ಕರ್ನಾಟಕ ಭೂ ಕಂದಾಯ ಕಾಯ್ದೆಯ  ಪ್ರಕಾರ, ಗ್ರಾಮಠಾಣಾ ಎಂದರೆ ಹಳ್ಳಿಯ ಜನವಸತಿ ಪ್ರದೇಶ. ಸಾಂಪ್ರದಾಯಿಕವಾಗಿ ಹಳ್ಳಿಯ ಜನ ವಾಸಿಸಲು, ಮನೆಗಳನ್ನು ಕಟ್ಟಿಕೊಳ್ಳಲು ಹಾಗೂ ಜಾನುವಾರುಗಳಿಗೆ ಮೀಸಲಿಟ್ಟಿರುವ ಸ್ಥಳವಿದು. ಇದರ ವಿವರ ಹೀಗಿದೆ:

ಹಳೇ ಗ್ರಾಮದ ಆವಾಸಿ ಪ್ರದೇಶ: ಹಳ್ಳಿಯ ಮಧ್ಯೆ ಅಥವಾ ಸುತ್ತಮುತ್ತ ಅನಾದಿ ಕಾಲದಿಂದಲೂ ಜನರು ಮನೆ ಕಟ್ಟಿ ವಾಸಿಸುತ್ತಿರುವ ಜಾಗ. ಕಂದಾಯ ನಕಾಶೆಯಲ್ಲಿ ಗುರುತಿಸಿರುವ ಸ್ಥಳ: ಗ್ರಾಮದ ನಕಾಶೆ ಅಥವಾ ಮ್ಯಾಪ್‌ನಲ್ಲಿ ವಸತಿ ಪ್ರದೇಶವೆಂದು ನಮೂದಾಗಿರುವ ಜಾಗ.

 ಈ ಪ್ರದೇಶದ ಆಸ್ತಿಗಳಿಗೆ ಸಾಮಾನ್ಯವಾಗಿ ಸರ್ವೆ ನಂಬರ್‌ ಬದಲಿಗೆ ಪಂಚಾಯತಿಯಿಂದ ಕಾನೇಷ್ಮಾರಿ ನಂಬರ್‌ ಅಥವಾ ಮನೆ ನಂಬರ್‌ಗಳನ್ನು ನೀಡಲಾಗಿರುತ್ತದೆ.