ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

ರೋಟರಿ ಸದಸ್ಯರ ಮುಖ್ಯ ಧ್ಯೇಯ ಸಮಾಜ ಸೇವೆ: ಬಿ. ಎಂ. ಭಟ್

ರೋಟರಿ ಸದಸ್ಯರ ಮುಖ್ಯ ಧ್ಯೇಯ ಸಮಾಜ ಸೇವೆ: ಬಿ. ಎಂ. ಭಟ್

ರೋಟರಿ ಸದಸ್ಯರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಭಿವೃದ್ಧಿಯ ಅವಕಾಶಗಳನ್ನು ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್ ರೊ. ಬಿ. ಎಂ. ಭಟ್ ಕರೆ ನೀಡಿದರು.

ಇಲ್ಲಿನ ರೋಟರಿ ಕ್ಲಬ್ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಇವರು, ರೋಟರಿ ಸದಸ್ಯತ್ವ ಅಮೂಲ್ಯವಾದದ್ದಾಗಿದ್ದು, ಸಮಾಜ ಸೇವೆಯೇ ಪ್ರತಿಯೊಬ್ಬ ಸದಸ್ಯನ ಮುಖ್ಯ ಧ್ಯೇಯವಾಗಬೇಕು. ಸಮುದಾಯ ಸೇವೆ, ವೃತ್ತಿ ಸೇವೆ, ಯುವಜನ ಸೇವೆ ಹಾಗೂ ಅಂತರರಾಷ್ಟ್ರೀಯ ಸೇವೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.

ಕಳೆದ 58 ವರ್ಷಗಳಿಂದ ರೋಟರಿ ಕ್ಲಬ್ ತೀರ್ಥಹಳ್ಳಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಈ ಪೈಕಿ ರಕ್ತ ಕೇಂದ್ರ ಮತ್ತು ಡಯಾಲಿಸಿಸ್ ಕೇಂದ್ರಗಳು ಪ್ರಮುಖ ಸೇವಾ ಕಾರ್ಯಗಳಾಗಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಬೇಕು. ಮನುಕುಲದ ದೇವಾಲಯವೆಂದು ಗುರುತಿಸಲ್ಪಟ್ಟಿರುವ ರೋಟರಿ ಫೌಂಡೇಶನ್‌ಗೆ ದೇಣಿಗೆ ನೀಡುವ ಮೂಲಕ ಅದರ ಪ್ರಯೋಜನಗಳನ್ನು ರೋಟರಿ ಕ್ಲಬ್ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ತೀರ್ಥಹಳ್ಳಿಯ ಅಧ್ಯಕ್ಷ ರೊ. ಎನ್. ಎಚ್. ರಮೇಶ್ ವಹಿಸಿದ್ದರು. ಅವರು ಕಳೆದ ಮೂರು ತಿಂಗಳಿನಲ್ಲಿ ಕ್ಲಬ್ ವತಿಯಿಂದ ನಡೆದ ಕಾರ್ಯಕ್ರಮಗಳ ವಿವರಗಳನ್ನು ಜಿಲ್ಲಾ ಗವರ್ನರ್ ಅವರಿಗೆ ತಿಳಿಸಿದರು. ರೋಟರಿ ಕ್ಲಬ್ ತೀರ್ಥಹಳ್ಳಿಯ ಕಾರ್ಯವೈಖರಿಯ ಕುರಿತು ವಲಯ 11ರ ಸಹಾಯಕ ಗವರ್ನರ್ ರೊ. ಎಸ್. ನಾಗರಾಜ್ ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಜಿಲ್ಲಾ ಕಾರ್ಯಕ್ರಮಗಳನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ಜೋನಲ್ ಲೆಫ್ಟಿನೆಂಟ್ ರೊ. ವಿಷ್ಣುಮೂರ್ತಿ ಮಾರ್ಗದರ್ಶನ ನೀಡಿದರು.

ರೋಟರಿ ಕ್ಲಬ್ ತೀರ್ಥಹಳ್ಳಿಗೆ ಅಧಿಕೃತ ಭೇಟಿ ನೀಡಿದ ಜಿಲ್ಲಾ ಗವರ್ನರ್ ರೊ. ಬಿ. ಎಂ. ಭಟ್ ಹಾಗೂ ಅವರ ಪತ್ನಿಯನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕ್ಲಬ್‌ನ ಕಾರ್ಯದರ್ಶಿ ರೊ. ಎಂ. ಸಿ. ಸಂಜಯ್ ಮೂರು ತಿಂಗಳ ವರದಿ ವಾಚಿಸಿ, ವಂದನಾರ್ಪಣೆ ಸಲ್ಲಿಸಿದರು. ಸನ್ಮಾನ ಕಾರ್ಯಕ್ರಮದಲ್ಲಿ ಕ್ಲಬ್‌ನ ಮಾಜಿ ಅಧ್ಯಕ್ಷ ರೊ. ಕೆ. ಟಿ. ನಾರಾಯಣಮೂರ್ತಿ ಉಪಸ್ಥಿತರಿದ್ದರು.