ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ ಒಗ್ಗಟ್ಟಾಗಿ ಸಮಾಜದಲ್ಲಿ ನೊಂದವರ ಧ್ವನಿಯಾಗಿ ಕೆಲಸ ಮಾಡಬೇಕು. ಬೆಳವಣಿಗೆ ಆರಂಭದಲ್ಲಿ ಸಮಾಜ ವ್ಯಕ್ತಿಯನ್ನು ಅನುಮಾನಿಸುತ್ತದೆ. ಬೆಳೆದು ನಿಂತ ನಂತರ ಅಪಮಾನಿಸುತ್ತದೆ. ಅನುಮಾನ, ಅಪಮಾನ ಸಹಿಸಿಕೊಂಡು ಯಶಸ್ವಿಯಾದರೆ ಅದೇ ಸಮಾಜ ಸನ್ಮಾನಿಸುತ್ತದೆ. ಟೀಕೆಗಳಿಗೆ ಉತ್ತರಗಳನ್ನು ಕೆಲಸದ ಮೂಲಕ ಕೊಡಬೇಕು. ಸಮರ್ಪಣ ಭಾವದಿಂದ ಸಂಘ ಕಟ್ಟಿದವರನ್ನು ಅಪಮಾನ ಮಾಡುವ ಕೆಲಸ ಮಾಡಬಾರದು. ಗೊಂದಲ ಮಾಡದೆ ಅವರೊಂದಿಗೆ ಕೈಜೋಡಿಸಬೇಕೆಂದು ಕರೆನೀಡಿದರು.
ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ ಹೆಚ್ಚು ಜನಸಂಖ್ಯೆ ಹೊಂದಿರುವವರು ಶೋಷಿತ ಸಮುದಾಯವನ್ನು ತುಳಿಯುವ ಪ್ರಯತ್ನ ಮಾಡಬಾರದು. ಎಲ್ಲರನ್ನು ಒಂದೇ ರೀತಿಯಲ್ಲಿ ನಡೆಸಿಕೊಳ್ಳುವ ಪ್ರಯತ್ನ ಆಗಬೇಕು. ಸಮುದಾಯಕ್ಕೆ ಅನ್ಯಾಯ ನಡೆದರೆ ಅದನ್ನು ಖಂಡಿಸುವ ತಾಕತ್ತು, ಶಕ್ತಿ ಸಮಾಜ ಬಾಂಧವರಲ್ಲಿ ಬೆಳೆಯಬೇಕು. ಅಭಿವೃದ್ಧಿ ನಿಗಮಕ್ಕೆ ೧೦೦ ಕೋಟಿ ಇಟ್ಟೆ ಇಡುತ್ತೇವೆ. ಶಿಕ್ಷಣ ಕೊಟ್ಟು ಭವಿಷ್ಯದ ಮಕ್ಕಳನ್ನು ಯುಪಿಎಸ್ಸಿ, ಡಾಕ್ಟರ್ ಹುದ್ದೆಗೇರಿಸಲು ಮುಂದಾಗಬೇಕು ಎಂದು ಹೇಳಿದರು.
ಮಧುಬಂಗಾರಪ್ಪ ಮಾತನಾಡಿ ಒಂದೂವರೆ ವರ್ಷದಲ್ಲಿ ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ ವಿತರಣೆ ಮಾಡುವ ಭರವಸೆ ನೀಡಿದರು. ಶರಾವತಿ ಭೂ ಸಂತ್ರಸ್ತರ ಭೂ ಹಕ್ಕು ಸಂಬಂಧ ಇನ್ನೆರಡು ವಾರದಲ್ಲಿ ಕ್ಯಾಬಿನೆಟ್ ಸಭೆ ನಡೆಯಲಿದೆ. ಸಭೆಯಲ್ಲಿ ಸಂತ್ರಸ್ತರ ಹಕ್ಕುಗಳನ್ನು ಮಂಡಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ. ರಾಜ್ಯ ಸರ್ಕಾರದ ವರದಿ ಆಧರಿಸಿ ಕೇಂದ್ರ ಸರ್ಕಾರ ಅಂತಿಮ ಮಂಜೂರಾತಿಗೆ ಸಹಿ ಹಾಕಲಿದೆ ಎಂದರು.
ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಅಶೋಕಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಎಸ್‌ಎನ್‌ಜಿವಿ ರಾಜ್ಯ ಉಪಾಧ್ಯಕ್ಷ ಮುಡುಬ ರಾಘವೇಂದ್ರ , ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿದರು..
ನಿಟ್ಟೂರು ಬ್ರಹ್ಮಶ್ರೀ ನಾರಾಯಣಗುರು ಮಹಾಸಂಸ್ಥಾನ ಮಠದ ರೇಣುಕಾನಂದ ಸ್ವಾಮೀಜಿ, ಸಾರಗನಜಡ್ಡು ಶ್ರೀ ಕಾರ್ತಿಕೇಯ ಪೀಠದ ಯೋಗೇಂದ್ರ ಅವಧೂತರು, ಕುದ್ರೊಳ್ಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್, ಎಸ್‌ಜಿವಿ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಇದ್ದರು.
