ತೀರ್ಥಹಳ್ಳಿ: ಶಿವಮೊಗ್ಗ - ತಾಳಗುಪ್ಪ ರೈಲು ಮಾರ್ಗದ ಐತಿಹಾಸಿಕ ಅರಸಾಳು ರೈಲ್ವೆ ನಿಲ್ದಾಣದಲ್ಲಿ ಸಂಚರಿಸುವ ಎಲ್ಲಾ ರೈಲುಗಳಿಗೂ ನಿಲುಗಡೆ ನೀಡಬೇಕು ಹಾಗೂ ಶಿವಮೊಗ್ಗ - ಶೃಂಗೇರಿ ನಡುವೆ ಪ್ರಸ್ತಾವಿತ ರೈಲು ಮಾರ್ಗವನ್ನು ತೀರ್ಥಹಳ್ಳಿಯ ಮೂಲಕವೇ ಹಾದುಹೋಗುವಂತೆ ಕ್ರಮವಹಿಸಬೇಕೆಂದು ಮಾಜಿ ಸಚಿವರು ಹಾಗೂ ತೀರ್ಥಹಳ್ಳಿ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ ಅವರು ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳು ಮತ್ತು ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣರವರಿಗೆ ಮನವಿ ಸಲ್ಲಿಸಿದ್ದಾರೆ.
ಅರಸಾಳು ನಿಲ್ದಾಣದಲ್ಲಿ ಎಲ್ಲಾ ರೈಲುಗಳಿಗೆ ನಿಲುಗಡೆಗೆ ಆಗ್ರಹ
ಶಿವಮೊಗ್ಗ ಜಿಲ್ಲೆಯ ರೈಲು ಸಂಚಾರದ ಇತಿಹಾಸದಲ್ಲಿ ಅರಸಾಳು ನಿಲ್ದಾಣಕ್ಕೆ ಅತ್ಯಂತ ವಿಶೇಷ ಹಿನ್ನೆಲೆಯಿದೆ. ಕನ್ನಡದ ಸುಪ್ರಸಿದ್ಧ ನಟ ದಿವಂಗತ ಶಂಕರ್ ನಾಗ್ ಅವರ ನಿರ್ದೇಶನದ ವಿಶ್ವಪ್ರಸಿದ್ಧ 'ಮಾಲ್ಗುಡಿ ಡೇಸ್' ಧಾರಾವಾಹಿ ಚಿತ್ರೀಕರಣಗೊಂಡ ಪ್ರಸಿದ್ಧ ತಾಣ ಇದಾಗಿದೆ.
ಅರಸಾಳು ರೈಲು ನಿಲ್ದಾಣವು ಹೊಸನಗರ ತಾಲೂಕಿನ ಪೂರ್ಣಭಾಗ ಹಾಗೂ ತೀರ್ಥಹಳ್ಳಿ ತಾಲೂಕಿನ ಅರ್ಧಕ್ಕೂ ಹೆಚ್ಚು ಭಾಗದ ಸಾರ್ವಜನಿಕರಿಗೆ ಪ್ರಯಾಣಿಸಲು ಅತ್ಯಂತ ಅನುಕೂಲಕರವಾಗಿದೆ. ಪ್ರಸ್ತುತ ಈ ಮಾರ್ಗದಲ್ಲಿ ಚಲಿಸುವ ಎಲ್ಲಾ ರೈಲುಗಳು ಇಲ್ಲಿ ನಿಲ್ಲದಿರುವುದರಿಂದ ಸಾವಿರಾರು ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ದಿನಂಪ್ರತಿ ಬೃಹತ್ ಸಂಖ್ಯೆಯಲ್ಲಿ ಪ್ರಯಾಣಿಕರು ಇಲ್ಲಿಂದ ಸಂಚರಿಸುತ್ತಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಈ ಮಾರ್ಗದಲ್ಲಿ ಚಲಿಸುವ ಎಲ್ಲಾ ರೈಲುಗಳಿಗೂ ಅರಸಾಳು ನಿಲ್ದಾಣದಲ್ಲಿ ತಕ್ಷಣವೇ ನಿಲುಗಡೆ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಅವರು ವಿನಂತಿಸಿದ್ದಾರೆ.
ತೀರ್ಥಹಳ್ಳಿ ಮಾರ್ಗವಾಗಿ ಶೃಂಗೇರಿಗೆ ರೈಲು ಯೋಜನೆಗೆ ಮನವಿ
ಶಿವಮೊಗ್ಗದಿಂದ ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶೃಂಗೇರಿಗೆ ರೈಲು ಮಾರ್ಗವನ್ನು ಪ್ರಾರಂಭಿಸುವ ಯೋಜನೆ ಪ್ರಸ್ತಾವನೆಯಲ್ಲಿದೆ. ಈ ಯೋಜನೆಯನ್ನು ತೀರ್ಥಹಳ್ಳಿ ತಾಲೂಕಿನ ಮೂಲಕವೇ ಅನುಷ್ಠಾನಗೊಳಿಸಬೇಕೆಂದು ಶಾಸಕರು ವಿಶೇಷವಾಗಿ ಒತ್ತಾಯಿಸಿದ್ದಾರೆ.
ಪ್ರವಾಸೋದ್ಯಮ ಮತ್ತು ಧಾರ್ಮಿಕ ಮಹತ್ವ:
ಮಲೆನಾಡಿನ ಪ್ರಮುಖ ಕೇಂದ್ರವಾಗಿರುವ ತೀರ್ಥಹಳ್ಳಿಯು ಸಾಂಸ್ಕೃತಿಕ ಹಾಗೂ ಧಾರ್ಮಿಕವಾಗಿ ಅಪಾರ ಮಹತ್ವ ಪಡೆದಿದೆ.
- ರಾಷ್ಟ್ರಕವಿ ಕುವೆಂಪು ಅವರ ಜನ್ಮಸ್ಥಳ ಕುಪ್ಪಳಿ, ಪ್ರಕೃತಿ ಸೌಂದರ್ಯದ ಆಗುಂಬೆ, ಜೈನರ ಪವಿತ್ರ ಯಾತ್ರಾಸ್ಥಳ ಹುಂಚುಜ್ಜೆ (ಹುಂಚ), ಕುಂದಾದ್ರಿ ಹಾಗೂ ಸಮೀಪದ ಕೊಡಚಾದ್ರಿ ಮುಂತಾದ ಪ್ರಸಿದ್ಧ ಪ್ರವಾಸಿ ಹಾಗೂ ಐತಿಹಾಸಿಕ ತಾಣಗಳು ತೀರ್ಥಹಳ್ಳಿಗೆ ಸಮೀಪದಲ್ಲಿವೆ.
- ತೀರ್ಥಹಳ್ಳಿ ಮೂಲಕ ರೈಲು ಮಾರ್ಗ ನಿರ್ಮಿಸಿದರೆ ಮಲೆನಾಡಿನ ಪ್ರವಾಸೋದ್ಯಮಕ್ಕೆ ಬಹುದೊಡ್ಡ ಉತ್ತೇಜನ ಸಿಗಲಿದ್ದು, ಆರ್ಥಿಕ ಪ್ರಗತಿಗೂ ನೆರವಾಗಲಿದೆ.
ಶಾಂತವೇರಿ ಗೋಪಾಲಗೌಡರಿಗೆ ಗೌರವ:
ತೀರ್ಥಹಳ್ಳಿ ಕ್ಷೇತ್ರವು ಶಾಂತವೇರಿ ಗೋಪಾಲಗೌಡರು ಹಾಗೂ ಕಡಿದಾಳು ಮಂಜಪ್ಪನಂತಹ ಆದರ್ಶ ರಾಜಕಾರಣಿಗಳು ಪ್ರತಿನಿಧಿಸಿದ ಪವಿತ್ರ ಭೂಮಿಯಾಗಿದೆ. ಗೋಪಾಲಗೌಡರ ಅಭಿಮಾನಿಗಳಾಗಿ, ತೀರ್ಥಹಳ್ಳಿಯ ಮೂಲಕ ಶೃಂಗೇರಿಗೆ ರೈಲು ಮಾರ್ಗವನ್ನು ಕಲ್ಪಿಸಿಕೊಡುವ ಮೂಲಕ ಅವರಿಗೆ ನಿಜವಾದ ಗೌರವ ಸಲ್ಲಿಸಬೇಕೆಂದು ಆರಗ ಜ್ಞಾನೇಂದ್ರ ಅವರು ತಮ್ಮ ಪತ್ರದಲ್ಲಿ ಕೋರಿದ್ದಾರೆ.
