ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

ಸ್ಥಳೀಯ ಸಂಸ್ಥೆ ಚುನಾವಣೆ ಸಧ್ಯಕ್ಕುಂಟೇ ? ಸರ್ಕಾರದ ನಡೆ ಏನು?


ಸ್ಥಳೀಯ ಸಂಸ್ಥೆ ಚುನಾವಣೆ ಸಧ್ಯಕ್ಕುಂಟೇ ? ಸರ್ಕಾರದ ನಡೆ ಏನು? Are local body elections likely anytime soon? What is the government's stance?
ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಪಂಚಾಯತ್ ರಾಜ್ ಸಂಸ್ಥೆಗಳಿಗೆ (ತಾ.ಪಂ, ಜಿ.ಪಂ. ಮತ್ತು ಗ್ರಾ.ಪಂ.) ಚುನಾವಣೆಗಳು ಎಷ್ಟರಮಟ್ಟಿಗೆ ಹತ್ತಿರದಲ್ಲಿವೆ ಎಂಬುದು ಇಂದು ಲಕ್ಷಾಂತರ ಗ್ರಾಮೀಣ ಜನತೆ ಹಾಗೂ ರಾಜಕೀಯ ಆಕಾಂಕ್ಷಿಗಳಲ್ಲಿ ಮೂಡಿರುವ ದೊಡ್ಡ ಪ್ರಶ್ನೆಯೇ ಆಗಿ ಉಳಿದಿದೆ.

ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಆಡಳಿತಾವಧಿ ಮುಗಿದು ಹಲವು ವರ್ಷಗಳೇ ಕಳೆದಿವೆ. ಕಳೆದೆರಡು ವಾರಗಳ ಹಿಂದಷ್ಟೇ ಸರ್ಕಾರವು  ತಾ.ಪಂ ಮತ್ತು ಜಿ.ಪಂ.ಗಳ ಕ್ಷೇತ್ರವಾರು ಹಾಗೂ ವರ್ಗವಾರು ಅಂತಿಮ ಮೀಸಲಾತಿ ಅಧಿಸೂಚನೆಯನ್ನು ಪ್ರಕಟಿಸಿದೆ.

 ಮೀಸಲಾತಿ ಪಟ್ಟಿ ಹೊರಬಿದ್ದಿರುವುದರಿಂದ ಮತ್ತು ಮತ ಪೆಟ್ಟಿಗೆಗಳ  ಖರೀದಿಗೆ ಸರ್ಕಾರ ಅನುದಾನ ಒದಗಿಸಿರುವುದರಿಂದ, ರಾಜ್ಯ ಚುನಾವಣಾ ಆಯೋಗಕ್ಕೆ ಚುನಾವಣಾ ವೇಳಾಪಟ್ಟಿ  ಪ್ರಕಟಿಸಲು ಇದ್ದ ತಾಂತ್ರಿಕ ಅಡೆತಡೆಗಳು ಬಹುತೇಕ ದೂರವಾಗಿವೆ. ಇದು ಡಿಸೆಂಬರ್ ಅಂತ್ಯ ಅಥವಾ ಜನವರಿ ವೇಳೆಗೆ ತಾ.ಪಂ. ಮತ್ತು ಜಿ.ಪಂ. ಚುನಾವಣೆಗಳು ನಡೆಯುವ ಸಾಧ್ಯತೆ ಇದೆ ಎಂಬುದನ್ನು ಪುಷ್ಟೀಕರಿಸುತ್ತದೆ. ಅಧಿಕೃತವಾಗಿ ಯಾವುದೇ ಆದೇಶ ಹೊರಬಿದ್ದಿಲ್ಲ.

ಗ್ರಾಮ ಪಂಚಾಯಿತಿ  ಪ್ರಸ್ತಾ ಸಧ್ಯಕ್ಕಿಲ್ಲವೇ ?

ಗ್ರಾಮ ಪಂಚಾಯಿತಿಗಳ ಅವಧಿ ಈಗಾಗಲೇ ಮುಕ್ತಾಯಗೊಂಡಿದ್ದರೂ, ಸರ್ಕಾರ ಮತ್ತು ಚುನಾವಣಾ ಆಯೋಗದ ಮೊದಲ ಆದ್ಯತೆ ಬಾಕಿ ಉಳಿದಿರುವ ತಾ.ಪಂ. ಮತ್ತು ಜಿ.ಪಂ. ಚುನಾವಣೆಗಳನ್ನು ಮುಗಿಸುವುದಾಗಿದೆ.

 ಒಂದೇ ಸಮಯದಲ್ಲಿ ಮೂರೂ ಹಂತದ (ಜಿ.ಪಂ, ತಾ.ಪಂ, ಗ್ರಾ.ಪಂ) ಚುನಾವಣೆಗಳನ್ನು ನಡೆಸುವುದು ಆಡಳಿತಾತ್ಮಕವಾಗಿ ಹಾಗೂ ಹಣಕಾಸಿನ ದೃಷ್ಟಿಯಿಂದ ಸರ್ಕಾರಕ್ಕೆ ಸುಲಭವಲ್ಲ. ಆದ್ದರಿಂದ ತಾ.ಪಂ. ಮತ್ತು ಜಿ.ಪಂ. ಚುನಾವಣೆಗಳು ಮುಗಿದ ನಂತರವಷ್ಟೇ ಗ್ರಾ.ಪಂ. ಚುನಾವಣೆಗೆ ಅಧಿಕೃತ ಚಾಲನೆ ಸಿಗಬಹುದು.

ಅಧಿಕಾರ ವಿಕೇಂದ್ರೀಕರಣದ ಕಗ್ಗೊಲೆ ಹಾಗೂ ಸಂವಿಧಾನ ಉಲ್ಲಂಘನೆ 

ಭಾರತೀಯ ಸಂವಿಧಾನದ ವಿಧಿ 243-E ಪ್ರಕಾರ ಸ್ಥಳೀಯ ಸಂಸ್ಥೆಗಳ ಅವಧಿ ಮುಗಿದ6 ತಿಂಗಳೊಳಗೆ ಚುನಾವಣೆ ನಡೆಸುವುದು ಕಡ್ಡಾಯ. ಆದರೆ, ವರ್ಷಗಟ್ಟಲೆ ಆಡಳಿತಾಧಿಕಾರಿಗಳನ್ನು ನೇಮಿಸಿ ಆಡಳಿತ ನಡೆಸಿರುವುದು ಸಂವಿಧಾನದ ಆಶಯಕ್ಕೆ ಎಸಗಿದ ಅಪಚಾರವಾಗಿದೆ. ಚುನಾಯಿತ ಪ್ರತಿನಿಧಿಗಳಿಲ್ಲದೆ ಅಧಿಕಾರಿಗಳಷ್ಟೇ ಆಡಳಿತ ನಡೆಸುವುದರಿಂದ ಗ್ರಾಮ ಮಟ್ಟದ ನೈಜ ಸಮಸ್ಯೆಗಳು ಬಗೆಹರಿಯದೆ ವಿಕೇಂದ್ರೀಕರಣ ವ್ಯವಸ್ಥೆ ದುರ್ಬಲಗೊಂಡಿದೆ.

ಒಟ್ಟಾರೆ ಸರ್ಕಾರದಲ್ಲಿ  "ಹಣಕಾಸಿನ ಅಭಾವದಿಂದ ಅಭಿವೃದ್ಧಿ ಕಾಮಗಾರಿಗಳು ನಿಂತುಹೋಗಿವೆ, ಇಂತಹ ಸಮಯದಲ್ಲಿ ಚುನಾವಣೆ ಎದುರಿಸಿದರೆ ಜನಾಕ್ರೋಶ ಎದುರಿಸಬೇಕಾದೀತು" ಎಂಬ ರಾಜಕೀಯ ಭಯವೂ ಸರ್ಕಾರವನ್ನು ಹಿಂದೇಟು ಹಾಕುವಂತೆ ಮಾಡಿತ್ತು ಎಂಬುದು ವಿರೋಧಪಕ್ಷಗಳ ನುಡಿಯಾಗಿದೆ. ಆ ಪಕ್ಷಗಳೂ ಮೀಸಲಾತಿ ಗೊಂದಲ ತೋರಿಸಿ ಚುನಾವಣೆ ನಡೆಸದೆ ಕಾಲಾಹರಣ ಮಾಡಿರುವುದು ರಾಜಕೀಯ ವಿಪರ್ಯಾಸ.

ಸರ್ಕಾರ ಹಾಗೂ ಚುನಾವಣಾ ಆಯೋಗವು ಚುನಾವಣೆಗಳನ್ನು ಮುಂದೂಡುತ್ತಾ ಬಂದಿದ್ದಕ್ಕೆ
ಉಚ್ಚ ನ್ಯಾಯಾಲಯ ಹಲವು ಬಾರಿ ತರಾಟೆಗೆ ತೆಗೆದುಕೊಂಡಿದೆ. ಆಡಳಿತಾಧಿಕಾರಿಗಳ ನೇಮಕ ಕೇವಲ 'ಮಧ್ಯಂತರ ವ್ಯವಸ್ಥೆ'ಯಷ್ಟೇ ಹೊರತು ಅದನ್ನೇ ಶಾಶ್ವತ ಮಾಡಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ನ್ಯಾಯಾಲಯದ ಈ ಕಟ್ಟುನಿಟ್ಟಿನ ಆದೇಶದ ಬಿಸಿಯೇ ಈಗ ಸರ್ಕಾರ ಮೀಸಲಾತಿ ಪ್ರಕಟಿಸಲು ಪ್ರಮುಖ ಕಾರಣ.

ಸರ್ಕಾರಕ್ಕೆ ರಾಜಕೀಯ ಮತ್ತು ಆರ್ಥಿಕ ಸವಾಲುಗಳಿದ್ದರೂ, ಹೈಕೋರ್ಟ್ ನಿರ್ದೇಶನ ಮತ್ತು ಸಂವಿಧಾನಾತ್ಮಕ ಕಟ್ಟುಪಾಡುಗಳಿಂದಾಗಿ ಇನ್ನು ಮುಂದೆ ಚುನಾವಣೆಗಳನ್ನು ಮುಂದೂಡುವುದು ಸರ್ಕಾರಕ್ಕೆ ಸಾಧ್ಯವಿಲ್ಲದಂತಾಗಿರುವುದರಿಂದ ಚುನಾವಣೆ ನಡೆಯಬಹುದೆಂಬ ನಿರೀಕ್ಷೆ ಹೆಚ್ಚಿದೆ.