ಭಾರತೀಯ ಷೇರು ಮಾರುಕಟ್ಟೆ ಓಟಕ್ಕೆ ಸಕಾಲ ಸೃಷ್ಟಿಯಾಗುತ್ತದೆಯೇ... ಅದು ಇಂದೇ ಎಂದು ಹೇಳಲಾಗುವುದಿಲ್ಲ ಮತ್ತು ಎಂದು ಎಂದು ನಿರ್ಧರಿಸಲೂ ಆಗುವುದಿಲ್ಲ... ವಾತಾವರಣ ಪೂರಕವಾಗಿದೆಯೇ ಎಂಬ ವಿಶ್ಲೇಷಣೆ
ಜಗತ್ತಿನ ಷೇರು ಮಾರುಕಟ್ಟೆಗಳಲ್ಲಿ ದೀರ್ಘಕಾಲದಿಂದ ಒಂದು ಪ್ರಬಲ ನಂಬಿಕೆ ಚಾಲ್ತಿಯಲ್ಲಿತ್ತು. ಅಮೆರಿಕದ ಮಾರುಕಟ್ಟೆ ಸುರಕ್ಷಿತ, ತಂತ್ರಜ್ಞಾನ ಕಂಪನಿಗಳು ಬೆಳವಣಿಗೆಯ ಎಂಜಿನ್, ಕೃತಕ ಬುದ್ಧಿಮತ್ತೆ (ಎಐ) ಭವಿಷ್ಯದ ದೊಡ್ಡ ಆದಾಯದ ಮೂಲ. ಆದರೆ ಈ ನಂಬಿಕೆಗಳ ಹಿಂದೆ ಅಡಗಿರುವ ಸಾಲದ ಹೊರೆ, ಬಡ್ಡಿ ಪಾವತಿಯ ಹೆಚ್ಚುತ್ತಿರುವ ವೆಚ್ಚ ಮತ್ತು ಎಐ ಕ್ಷೇತ್ರದಲ್ಲಿ ಹೂಡಿಕೆಗೆ ತಕ್ಕ ಲಾಭ ದೊರೆಯುತ್ತದೆಯೇ ಎಂಬ ಪ್ರಶ್ನೆಗಳು ಜಾಗತಿಕ ಹೂಡಿಕೆದಾರರನ್ನು ಹೊಸ ಲೆಕ್ಕಾಚಾರದತ್ತ ತಳ್ಳುತ್ತಿದೆ.
ಅಮೆರಿಕ, ಚೀನಾ ಮತ್ತು ತೈವಾನ್ನ ತಂತ್ರಜ್ಞಾನ ಷೇರುಗಳಲ್ಲಿ ಎಐ ಕಂಪನಿಗಳ ನಿರೀಕ್ಷಿತ ಮಟ್ಟದ ಲಾಭಗಳಿಸದಿದ್ದಲ್ಲಿ ನಿರಾಸೆ, ಕಾರ್ಪೋರೇಟ್ ಸಭೆಯಲ್ಲಿ ಎಐ ನಿಂದ ಕಂಪನಿಯ ಕಾರ್ಯದಲ್ಲಿ ವಿಶೇಷ ಪ್ರಗತಿ ಸಾಧ್ಯವಾಗುತ್ತಿಲ್ಲ ಎಂಬ ವಾದ ಹಾಗೂ ಎಐ ಕಂಪನಿಗಳ ಸಾಲದ ಹೊರೆ, ಇನ್ನು ಕೆಲವೇ ತಿಂಗಳಲ್ಲಿ ಸಾಲದ ಕಂತಿನ ಮರುಪಾವತಿಗೆ ನೀಡಿದ್ದ ವಿನಾಯಿತಿ ಅವಧಿ ಮುಗಿದು ಮುಂಬರುವ ದಿನಗಳಲ್ಲಿ ಎಐ ಕಂಪನಿಗಳ ಸಾಲದ ಕಂತಿನ ಪ್ರಾರಂಭಿಕ ಅವಧಿ ಆರಂಭಗೊಳ್ಳಲಿದೆ. ಈ ಹಂತದಲ್ಲಿ ಕಂಪನಿ ಮರುಪಾವತಿಯಲ್ಲಿ ಎಡವಿದರೆ, ಲಾಭಾಂಶ ಕುಸಿತ ಉಂಟಾದರೆ, ಅದರಿಂದ ಭಾರತಕ್ಕೆ ಬಂಡವಾಳ ಹರಿದುಬರುವ ಹೊಸ ಅವಕಾಶ ಸೃಷ್ಟಿಯಾಗಬಹುದೇ ಎಂಬ ಚರ್ಚೆ ವಿತ್ತವಲಯದಲ್ಲಿ ನಡೆಯಲು ಆರಂಭಗೊಂಡಿದೆ. ಆದರೆ ಜಾಗತಿಕ ಬಂಡವಾಳದ ಹರಿವನ್ನು ನಿರ್ಧರಿಸುವ ಸಾಲ, ಬಡ್ಡಿದರ, ಕಂಪನಿಗಳ ಲಾಭ, ಷೇರುಗಳ ಮೌಲ್ಯಮಾಪನ ಮತ್ತು ಭೌಗೋಳಿಕ ರಾಜಕೀಯದ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಬೇಕಾದ ಸತ್ಯವೂ ಅಡಗಿದೆ. ಕೇವಲ ನಂಬಿಕೆ ಮಾತ್ರವೇ ಪುಷ್ಟೀಕರಣಕ್ಕೊಳಪಡುವುದಿಲ್ಲ.
ಅಮೆರಿಕದ ಆರ್ಥಿಕತೆ ನಿಧಾನಗೊಂಡು ಬಡ್ಡಿದರ ಕಡಿತದ ನಿರೀಕ್ಷೆ ಬಲಗೊಂಡರೆ, ಬಾಂಡ್ ಇಳುವರಿ ಇಳಿಯಬಹುದು. ಆಗ ಭಾರತದಂತಹ ದೇಶಗಳ ಷೇರು ಮಾರುಕಟ್ಟೆಗಳು ವಿದೇಶಿ ಹೂಡಿಕೆದಾರರಿಗೆ ಹೆಚ್ಚು ಆಕರ್ಷಕವಾಗುವ ಸಾಧ್ಯತೆ ಇದೆ ಎಂಬ ಚರ್ಚೆಯನ್ನೂ ವಿತ್ತವಲಯ ವಿಶ್ಲೇಷಿಸುತ್ತಿದೆ.
ಅಧಿಕೃತ ಅಂಕಿ ಅಂಶಗಳು ಲೆಕ್ಕದಲ್ಲಿಲ್ಲದಿದ್ದರೂ ಅಮೇರಿಕಾದ ಬಡ್ಡಿ ಪಾವತಿ ರಕ್ಷಣಾ ವೆಚ್ಚವನ್ನು ಮೀರಿಸಬಹುದಾದ ದಿನಗಳು ಬರಲಿವೆಯೇ ಎಂಬ ಅನುಮಾನವೂ ಚರ್ಚೆಯಲ್ಲಿದೆ. ಇದಕ್ಕೆ ಪೂರಕವಾಗಿ ಅಮೆರಿಕದ ಬಜೆಟ್ನಲ್ಲಿ ಸಾಲದ ಮೇಲಿನ ಬಡ್ಡಿ ಪಾವತಿಯ ಹೊರೆ ಹೆಚ್ಚುತ್ತಿರುವುದು ಗಂಭೀರ ಆರ್ಥಿಕ ಚರ್ಚೆಯ ವಿಷಯವಾಗಿದೆ. ಇದರ ಪರಿಣಾಮ ಕೇವಲ ಸರ್ಕಾರಿ ಲೆಕ್ಕಪತ್ರಕ್ಕೆ ಸೀಮಿತವಾಗುವುದಿಲ್ಲ. ಸಾಲದ ಮೇಲಿನ ಬಡ್ಡಿಗೆ ಹೆಚ್ಚಿನ ಹಣ ಮೀಸಲಿಡಬೇಕಾದರೆ, ಮೂಲಸೌಕರ್ಯ, ಸಂಶೋಧನೆ, ಸಾಮಾಜಿಕ ಕಾರ್ಯಕ್ರಮಗಳು ಮತ್ತು ಇತರ ಆದ್ಯತೆಗಳಿಗೆ ಲಭ್ಯವಾಗುವ ಹಣದ ಮೇಲೆ ಒತ್ತಡ ಹೆಚ್ಚಬಹುದು. ಸಾಲದ ಮರುಹಣಕಾಸು ವೆಚ್ಚವೂ ಏರಿದರೆ, ಹಣಕಾಸು ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಬಹುದು.
ಎಐ ಕ್ಷೇತ್ರದ ಬಂಡವಾಳ ಹೂಡಿಕೆ: ಲಾಭಕ್ಕಿಂತ ಸಾಲವೇ ಹೆಚ್ಚಾಗುತ್ತಿದೆಯೇ?
ಕೃತಕ ಬುದ್ಧಿಮತ್ತೆ ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರುತ್ತಿದೆ. ಆದರೆ ಎಐ ಅಭಿವೃದ್ಧಿಗೆ ಅಗತ್ಯವಿರುವ ದತ್ತಾಂಶ ಕೇಂದ್ರಗಳು, ದುಬಾರಿ ಚಿಪ್ಗಳು, ವಿದ್ಯುತ್, ತಂಪುಗೊಳಿಸುವ ವ್ಯವಸ್ಥೆಗಳು ಮತ್ತು ಗಣಕ ಸಾಮರ್ಥ್ಯಕ್ಕೆ ಭಾರಿ ಬಂಡವಾಳ ಬೇಕಾಗಿದೆ. ಪ್ರಮುಖ ತಂತ್ರಜ್ಞಾನ ಕಂಪನಿಗಳು ಎಐ ಮೂಲಸೌಕರ್ಯಕ್ಕಾಗಿ ನೂರಾರು ಶತಕೋಟಿ ಡಾಲರ್ಗಳ ಹೂಡಿಕೆ ಯೋಜನೆಗಳನ್ನು ರೂಪಿಸುತ್ತಿವೆ. ಈ ಹೂಡಿಕೆಯಿಂದ ನಿರೀಕ್ಷಿತ ಆದಾಯ ಸಿಗದಿದ್ದರೆ, ಹೂಡಿಕೆದಾರರ ವಿಶ್ವಾಸ ಕುಸಿಯಬಹುದು. ಆಂಗ್ಲ ಭಾಷೆಯ ಪ್ರಮುಖ ಪತ್ರಿಕೆಯ ಉಲ್ಲೇಖದಂತೆ ವಿಶ್ಲೇಷಿಸುವುದಾದರೆ ಎಐ ಮೂಲಸೌಕರ್ಯದಲ್ಲಿ ಅತಿಯಾದ ಹೂಡಿಕೆ ಮತ್ತು ಭವಿಷ್ಯದ ಆದಾಯದ ಅಂದಾಜುಗಳ ನಡುವಿನ ಅಂತರದ ಬಗ್ಗೆ ಆರ್ ಬಿ ಐ ಮತ್ತು ಐ ಎಮ್ ಎಫ್ ಎಚ್ಚರಿಸಿದೆ. ಅದೇ ದಿನದ ಮಾರುಕಟ್ಟೆ ವರದಿಗಳಲ್ಲಿಯೂ ಎಐಗೆ ಸಂಬಂಧಿಸಿದ ಸಾಲದ ಹೊರೆ ಮತ್ತು ಹಣಕಾಸು ಸಂಗ್ರಹದ ಅಪಾಯಗಳ ಬಗ್ಗೆ ಚರ್ಚೆಯಾಗಿದೆ.
ಆದರೆ ಇಲ್ಲೂ ಎರಡು ವಿಭಿನ್ನ ವಾಸ್ತವಗಳಿವೆ. ಎಐ ತಂತ್ರಜ್ಞಾನಕ್ಕೆ ಬೇಡಿಕೆ ಇದೆ. ಕಂಪನಿಗಳು ಎಐ ಸೇವೆಗಳಿಂದ ನೈಜ ಆದಾಯ ಗಳಿಸುತ್ತಿವೆ; ಚಿಪ್ಗಳ ಬೇಡಿಕೆಯೂ ಪ್ರಬಲವಾಗಿದೆ. ಇತ್ತೀಚೆಗೆ ಪ್ರಕಟಗೊಂಡ ಒಂದು ವರದಿಯ ಪ್ರಕಾರ, ತೈವಾನ್ನ ಪ್ರಮುಖ ಚಿಪ್ ತಯಾರಕ TSMC 2026ರ ಮೂರನೇ ತ್ರೈಮಾಸಿಕದಲ್ಲಿ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ನಿವ್ವಳ ಲಾಭದಲ್ಲಿ ಶೇ. 69ರಷ್ಟು ಬೆಳವಣಿಗೆ ದಾಖಲಿಸಿದೆ. ಇದು ಎಐ ಕ್ಷೇತ್ರದ ಎಲ್ಲ ಕಂಪನಿಗಳೂ ಸಂಕಷ್ಟದಲ್ಲಿವೆ ಎಂಬ ವಾದಕ್ಕೆ ವಿರುದ್ಧವಾದ ಉದಾಹರಣೆಯಾಗಿ ನಿಲ್ಲುತ್ತದೆ. ಹೂಡಿಕೆದಾರರು ಸಮೂಹಸನ್ನಿಗೊಳಗಾಗಿ ಮಾರಾಟ ಅಥವಾ ಖರೀದಿಗೆ ಮುಂದಾದರೆ ಸಂಕಷ್ಟ ಖಚಿತವಾಗಿರುತ್ತದೆ.
ತೈವಾನ್, ಅಮೆರಿಕ ಮತ್ತು ಚೀನಾದ ಷೇರುಗಳು ಕುಸಿದರೆ ಭಾರತದ ಅವಕಾಶ ಎಷ್ಟು?
ತಂತ್ರಜ್ಞಾನ ಸರಪಳಿಯಲ್ಲಿ ಈ ಮೂರು ಆರ್ಥಿಕತೆಗಳು ಪ್ರಮುಖ ಸ್ಥಾನ ಹೊಂದಿವೆ. ಆದರೆ ಅವುಗಳ ಅಪಾಯದ ಸ್ವರೂಪ ಒಂದೇ ಅಲ್ಲ. ಆದರೂ ಎಐ ಕ್ಷೇತ್ರದಲ್ಲಿ ನಿರೀಕ್ಷೆಯ ಲಾಭಕ್ಕೆ ವಿರುದ್ಧವಾದರೆ ಹೂಡಿಕೆಗೆ ಬೇರೆ ಸಮರ್ಥ ಕ್ಷೇತ್ರದ ಆಯ್ಕೆ ಹುಡುಕಬಹುದು. ಆಗ ಉದಯೋನ್ಮುಖವಾಗುತ್ತಿರುವ ಸುಭದ್ರ ಮಾರುಕಟ್ಟೆ ಎಂದು ಭಾರತವನ್ನು ಗುರುತಿಸುವ ಸನ್ನಿವೇಶ ಇದೆ ಎಂಬ ವಾದ ವಿತ್ತವಲಯದಲ್ಲಿದೆ. ಇದಕ್ಕೆ ಪೂರಕವೆಂಬಂತೆ ಅಕ್ಟೋಬರ್ 15ರಂದು ಪ್ರಕಟವಾದ ಮಾರುಕಟ್ಟೆ ವರದಿಯು ಮತ್ತೊಂದು ಸಾಧ್ಯತೆಯನ್ನು ತೋರಿಸಿದೆ. ಇತರ ಏಷ್ಯನ್ ಮಾರುಕಟ್ಟೆಗಳು ಒತ್ತಡಕ್ಕೆ ಒಳಗಾಗಿದ್ದ ಸಂದರ್ಭದಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಸುಮಾರು 1,500 ಅಂಕಗಳ ಏರಿಕೆ ಕಂಡಿತ್ತು. ಭಾರತದ ಮೌಲ್ಯಮಾಪನದ ಆಕರ್ಷಣೆ ಹೂಡಿಕೆದಾರರ ಗಮನ ಸೆಳೆದಿರುವುದು ಇದಕ್ಕೆ ಒಂದು ಕಾರಣವೆಂದು ವರದಿ ತಿಳಿಸಿದೆ.
ಭಾರತದ ಮಾರುಕಟ್ಟೆಗೆ ಹಣ ಹೂಡಲು ಹೂಡಿಕೆದಾರರು ದಾಪುಗಾಲಿಕ್ಕಲು ಅಮೇರಿಕಾದ ಬಾಂಡ್ ಇಳುವರಿ ಇಳಿಯಬೇಕು, ಡಾಲರ್ನ ಬಲ ಕಡಿಮೆಯಾಗಬೇಕು ಡಾಲರ್ ದುರ್ಬಲವಾದರೆ ಭಾರತದ ಮಾರುಕಟ್ಟೆಗೆ ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆಂಬ ನಂಬಿಕೆ ಇದೆ.
ಭಾರತದ ನಿಜವಾದ ಶಕ್ತಿ ಅದರ ಜನಸಂಖ್ಯೆ, ದೇಶೀಯ ಬಳಕೆ, ಕೈಗಾರಿಕಾ ವಿಸ್ತರಣೆ, ಡಿಜಿಟಲ್ ಸೇವೆಗಳು ಮತ್ತು ದೀರ್ಘಕಾಲೀನ ಆರ್ಥಿಕ ಬೆಳವಣಿಗೆಯ ಸಾಮರ್ಥ್ಯದಲ್ಲಿದೆ. ಈ ಸಾಮರ್ಥ್ಯವು ಕಂಪನಿಗಳ ಲಾಭದಲ್ಲಿ ಪ್ರತಿಫಲಿಸಿದಾಗ ಮತ್ತು ಮಾರುಕಟ್ಟೆಯ ಮೌಲ್ಯಮಾಪನ ಸಮಂಜಸವಾಗಿದ್ದಾಗ ವಿದೇಶಿ ಹೂಡಿಕೆದಾರರ ವಿಶ್ವಾಸ ಬಲಗೊಳ್ಳುತ್ತದೆ.
ಹೀಗಾಗಿ, ಭಾರತಕ್ಕೆ ಎಫ್ಐಐಗಳ ಹೊಸ ಅಲೆಯ ಅವಕಾಶ ಇದೆ; ಆದರೆ ಅದು ಖಚಿತವಾಗಿ ಆರಂಭವಾಗಲಿದೆ ಎಂದು ಹೇಳಲು ಇನ್ನೂ ಸಾಕಷ್ಟು ಕಾಯಬೇಕು.
ಇಲ್ಲಿ ಪ್ರಕಟಣೆಗೊಂಡಿರುವುದು ಹಲವು ತಜ್ಞರ ಸಂಧರ್ಭೋಚಿತ ನಿಲುವುಗಳನ್ನು ಕ್ರೋಢೀಕರಿಸಿದ್ದಾಗಿದೆ. ಆದರೆ ಇದು ಮಾರುಕಟ್ಟೆ ಏರುತ್ತದೆ ಎಂದು ಹೂಡಿಕೆದಾರರಿಗೆ ನೀಡುತ್ತಿರುವ ಉತ್ತೇಜನ ಅಲ್ಲ. ಯಾವುದೇ ಕಾಲದಲ್ಲೂ ಮಾರುಕಟ್ಟೆ ಸುಧೀರ್ಘವಾಗಿ ಏರಿಕೆ ಅಥವಾ ಇಳಿಕೆಯ ಒಂದೇ ದಿಕ್ಕಿನಲ್ಲಿ ಮುಖ ಮಾಡಿದ್ದಿಲ್ಲ. ಹೂಡಿಕೆದಾರರರು ಹೂಡಿಕೆಗೆ ಮುನ್ನ ವಿಶ್ಲೇಷಿಸುವುದು ಅಥವಾ ನೋಂದಾಯಿತ ಹೂಡಿಗೆಯ ಸಲಹೆಗಾರರಿಂದ ಸಲಹೆ ಪಡೆದು ಹೂಡಿಕೆ ಮಾಡುವುದು ಒಳಿತು.
