ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

ಬೀದಿ–ವೃತ್ತಗಳಿಗೆ ಸಾಹಿತಿಗಳ ಹೆಸರಿಡುವ ಮೂಲಕ ಸಾಹಿತ್ಯ ಸಾಧಕರ ನೆನಪು ಶಾಶ್ವತಗೊಳಿಸಲು ಮನವಿ

 

  • ಎಂ.ಕೆ. ಇಂದಿರಾ ಸೇರಿದಂತೆ ಖ್ಯಾತ ಸಾಹಿತಿಗಳ ಹೆಸರುಗಳಿಗೆ ಬೇಡಿಕೆ
    ಬೀದಿ–ವೃತ್ತಗಳ ಮೂಲಕ ಸಾಹಿತ್ಯ ಸಾಧಕರ ನೆನಪು ಶಾಶ್ವತಗೊಳಿಸಲು ಮನವಿ
  • ತೀರ್ಥಹಳ್ಳಿಯ ಪ್ರಮುಖ ಬೀದಿಗಳಿಗೆ ಸಾಹಿತಿಗಳ ಹೆಸರು ಇಡಲು ಮನವಿ
    ಕಸಾಪ ಮನವಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಪಟ್ಟಣ ಪಂಚಾಯಿತಿ
  • ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಪ್ರಮುಖ ಬೀದಿ, ವೃತ್ತಗಳಿಗೆ ಸಾಹಿತಿಗಳ ಹೆಸರನ್ನಿಡುವ ಮೂಲಕ ಅವರ ಸಾಹಿತ್ಯಿಕ ಕೊಡುಗೆ ಹಾಗೂ ನೆನಪುಗಳನ್ನು ಶಾಶ್ವತಗೊಳಿಸುವಂತೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಲಾಯಿತು.

    ತೀರ್ಥಹಳ್ಳಿ ಎಂದರೆ ಸಾಹಿತಿಗಳ ಕಾಶಿಯಿದ್ದಂತೆ. ವಿಶ್ವಮಾನವ ಸಂದೇಶ ಸಾರಿದ ಜಗದ ಕವಿ, ಯುಗದ ಕವಿ ಕುವೆಂಪು, ಯು.ಆರ್. ಅನಂತಮೂರ್ತಿಯವರಿಂದ ಮೊದಲ್ಗೊಂಡು ಅಗ್ರಮಾನ್ಯ ಸಾಹಿತಿಗಳು ಇಲ್ಲಿ ಹುಟ್ಟಿ, ನಾಡಿಗೆ ಸಾಹಿತ್ಯದ ಕಂಪು ಬೀರಿದ್ದಾರೆ. ಇಂತಹ ಪುಣ್ಯಭೂಮಿಯಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯವೇ ಇಲ್ಲದೆ ಶೋಷಣೆಗೆ ಸಿಲುಕುತ್ತಿದ್ದ ಸಂದರ್ಭದಲ್ಲಿ ಮಹಿಳೆಯರಲ್ಲಿ ಧೈರ್ಯ ಮೂಡಿಸುವ ರೀತಿಯಲ್ಲಿ ನಿರ್ಭೀತವಾಗಿ ಸಾಹಿತ್ಯ ರಚನೆ ಮಾಡಿದ ಸಾಹಿತಿ ದಿ. ಶ್ರೀಮತಿ ಎಂ.ಕೆ. ಇಂದಿರಾ ಅವರು ಕೂಡ ತೀರ್ಥಹಳ್ಳಿ ತಾಲೂಕಿನಲ್ಲಿಯೇ ಹುಟ್ಟಿದ್ದಾರೆ.

    ಆದ್ದರಿಂದ ಇಂದಿನ ಹಾಗೂ ಮುಂದಿನ ತಲೆಮಾರಿನವರಿಗೂ ಎಂ.ಕೆ. ಇಂದಿರಾ ಅವರ ಸಾಹಿತ್ಯಿಕ ಕೊಡುಗೆ ಹಾಗೂ ವ್ಯಕ್ತಿತ್ವದ ಪರಿಚಯವಾಗುವಂತೆ, ಅವರ ನೆನಪು ಶಾಶ್ವತವಾಗಿ ಉಳಿಯುವ ನಿಟ್ಟಿನಲ್ಲಿ ತೀರ್ಥಹಳ್ಳಿಯ ಯಾವುದಾದರೂ ಪ್ರಮುಖ ಬೀದಿಗೆ ಅವರ ಹೆಸರನ್ನು ಇಡುವಂತೆ ಸೆ. 30ರಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.

    ಅದೇ ರೀತಿ ತೀರ್ಥಹಳ್ಳಿಗೆ ಪ್ರಖ್ಯಾತಿ ತಂದುಕೊಟ್ಟಿರುವ ಸಾಹಿತಿಗಳಾದ ಹಾ.ಮಾ. ನಾಯಕ್, ಕೋಣಂದೂರು ಲಿಂಗಪ್ಪ, ಎಸ್.ವಿ. ಪರಮೇಶ್ವರ ಭಟ್ಟ, 'ನಾಗಾನಂದ', ಎಂ.ಎನ್. ಜಯಪ್ರಕಾಶ್ ಮುಂತಾದವರ ಹೆಸರುಗಳನ್ನು ವಿವಿಧ ಬೀದಿ ಹಾಗೂ ವೃತ್ತಗಳಿಗೆ ಇರಿಸುವ ಮೂಲಕ ಅವರ ನೆನಪುಗಳನ್ನು ಶಾಶ್ವತವಾಗಿ ಉಳಿಸುವ ದಿಸೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯಾಧಿಕಾರಿ ಹಾಗೂ ಕೌನ್ಸಿಲರ್‌ಗಳು ಕ್ರಮ ಕೈಗೊಳ್ಳಬೇಕೆಂದು ಮನವಿ ಪತ್ರದಲ್ಲಿ ತಿಳಿಸಲಾಯಿತು.

    ಇದೇ ಸಂದರ್ಭದಲ್ಲಿ ಬಾಳೇಬೈಲಿನ ಕಸಾಪ ಕನ್ನಡ ಭವನದಲ್ಲಿ ಶೌಚಾಲಯದ ಕಾಮಗಾರಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಿಕೊಡುವಂತೆ ಮನವಿ ಮಾಡಲಾಯಿತು.

    ಮನವಿ ಪತ್ರ ಸ್ವೀಕರಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ಹಾಗೂ ಮುಖ್ಯಾಧಿಕಾರಿ ನಾಗರಾಜ್ ಅವರು ಈ ಕುರಿತು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

    ಈ ಸಂದರ್ಭದಲ್ಲಿ ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಗೀತಾ ರಮೇಶ್, ಸದಸ್ಯರಾದ ಶಬನಮ್, ಜಯಪ್ರಕಾಶ್ ಶೆಟ್ಟಿ, ಕಸಾಪ ಕೋಶಾಧ್ಯಕ್ಷ ಹಾಲಿಗೆ ನಾಗರಾಜ್, ಕಾರ್ಯದರ್ಶಿ ಗಾಯತ್ರಿ ಶೇಷಗಿರಿ, ಸಂಘಟನಾ ಕಾರ್ಯದರ್ಶಿ ಮುನ್ನೂರು ಮೋಹನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಆರ್.ಎಂ. ಧರ್ಮಕುಮಾರ್, ಟಿ.ವಿ. ಸತೀಶ್, ನಿರಂಜನ ಮುಂತಾದವರು ಉಪಸ್ಥಿತರಿದ್ದರು.