ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

ಗೌಪ್ಯವಾಗಿಡಬೇಕೆಂಬ ನಿಯಮನಿಂದ ಅನೇಕ ಔಷಧೀಯ ಸಸ್ಯಗಳ ಜ್ಞಾನ ಮುಂದಿನ ಪೀಳಿಗೆಗೆ ಸಿಗುತ್ತಿಲ್ಲ ವಿಷಮುಕ್ತ ಆಹಾರಕ್ಕಾಗಿ ಸಾವಯವ ಕೃಷಿಯೊಂದೇ ಪರಿಹಾರ. -ಆರಗ ಜ್ಞಾನೇಂದ್ರ



ತೀರ್ಥಹಳ್ಳಿ : ನಾಟಿ ಔಷಧಿ ನೀಡುವ ಕೆಲವರಲ್ಲಿ ಗೌಪ್ಯವಾಗಿಡಬೇಕೆಂಬ ನಿಯಮದಿಂದ ಅನೇಕ ಔಷಧೀಯ ಸಸ್ಯಗಳ ಜ್ಞಾನ ಮುಂದಿನ ಪೀಳಿಗೆಗೆ ಸಿಗುತ್ತಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.  ಇಲ್ಲಿನ ಲಯನ್ಸ್ ಕ್ಲಬ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆಯುವ ಮೂರು ದಿನಗಳ ರಾಜ್ಯಮಟ್ಟದ ಪಶುವೈದ್ಯಕೀಯ ಕಾರ್ಯಾಗಾರ ಮತ್ತು "ಪಶುರೋಗ ಚಿಕಿತ್ಸೆಯಲ್ಲಿ ಆಯುರ್ವೇದ ಮತ್ತು ಪರ್ಯಾಯ ವಿಜ್ಞಾನಗಳ ಮೂಲ ಪರಿಕಲ್ಪನೆಗಳು ಹಾಗೂ ಪಶುಸಂಗೋಪನೆಯಲ್ಲಿ ಅವುಗಳ ಅಳವಡಿಕೆ." ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು ಇಂದು ಅನೇಕರು ಹಲವಾರು ನಾರು-ಬೇರುಗಳಿಂದ , ಔಷಧೀಯ ಗುಣವುಳ್ಳ ಗಿಡಗಳಿಂದ ಔಷಧಿ ನೀಡುತ್ತಿದ್ದಾರೆ. ಅದನ್ನು ಬೇರೆಯರೊಂದಿಗೆ ಹಂಚಿಕೊ0ಡಾಗ ಅದರ ಔಷಧೀಯ ಗುಣ ಕಳೆದುಹೋಗುತ್ತದೆಂಬ ನಂಬಿಕೆ ಕೆಲವರಲ್ಲಿದೆ. ಆದ್ದರಿಂದ ಅವರು ಬೇರೆಯವರಿಗೆ ತಿಳಿಸದೇ ಹೋದಲ್ಲಿ ಮುಂದಿನ ದಿನದಲ್ಲಿ ಅದರ ಮಹತ್ವದ ಅರಿವು ಇತರರಿಗೆ ಸಿಗುವುದಿಲ್ಲ. ಆಯುರ್ವೇದ ವಿಶ್ವವಿದ್ಯಾಲಯಗಳು ಔಷಧಿ ನೀಡುತ್ತಿರುವವರನ್ನು ಸಂಪರ್ಕಿಸಿ ಔಷಧಗಳ ಕುರಿತು ಸಂಶೋಧನೆ ನಡೆಸಬೇಕಿದೆ. 

ರೋಗ ನಿರೋಧಕ ಶಕ್ತಿ ಹೊಂದಿರುವ ಇಲ್ಲಿನ ಮಲೆನಾಡುಗಿಡ್ಡ ತಳಿ ಸಂತತಿ ಕಡಿಮೆಯಾಗುತ್ತಿದೆ. ವ್ಯಾಕ್ಸಿನ್ ಕಾರಣದಿಂದ ಹೈಬ್ರೀಡ್ ತಳಿಗಳು ಹೆಚ್ಚಾಗಿದೆ. ಇವುಗಳಿಗೆ ರೋಗಗಳು ಹೆಚ್ಚು. ಇದಕ್ಕೆ ಔಷಧಿಯ ಬೆಲೆ ವಿಪರೀತವಾಗುತ್ತದೆ ಮತ್ತು ಔಷಧಿ ನೀಡುವ ಪ್ರಮಾಣ ಕೂಡ ಹೆಚ್ಚುಬೇಕು. ಮೊದಲಿನಂತೆ ಜಾನುವಾರು ಮೇಯಿಸಲು ಗೋಮಾಳ ಇತ್ಯಾದಿ ವ್ಯವಸ್ಥೆಗಳಿಲ್ಲ. ಜನ ಬೇಸರಗೊಂಡು ಜಾನುವಾರು ಸಾಕಾಣಿಕೆಯನ್ನೇ ಕೈಬಿಟ್ಟಿದ್ದಾರೆ. ಜಾನುವಾರು ಸಾಕಾಣಿಕೆ ಕಡಿಮೆಯಾಗಿರುವ ಕಾರಣ ರಾಸಾಯನಿಕ ಗೊಬ್ಬರಕ್ಕೆ ಮೊರೆಹೋಗಿದ್ದೇವೆ. ರಸಗೊಬ್ಬರ ಆಮದಿಗಾಗಿ ಪ್ರತಿವರ್ಷ ಏಳೆಂಟು ಲಕ್ಷ ಕೋಟಿರೂ.ಗಳು  ವಿದೇಶೀ ವಿನಿಮಯವಾಗುತ್ತಿದೆ. ನಾವು ತಿನ್ನುವ ಆಹಾರ ವಿಷವಾಗುತ್ತಿದೆ. ವಿಷಮುಕ್ತ ಆಹಾರಕ್ಕಾಗಿ ಸಾವಯವ ಕೃಷಿಯೊಂದೇ ಪರಿಹಾರ. ಜಾನುವಾರು ಸಾಕಾಣಿಕೆ ಅನಿವಾರ್ಯ ಎಂದವರು ಅಭಿಪ್ರಾಯ ಪಟ್ಟರು. ಹಿರೇಸರದ ನೆಸ್ಟ್ ಹೋಂ ಸ್ಟೇಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹುಂಚ ಅಭಿಷೇಕ್, ಶ್ರೀನಾಥ್ ಜೋಯ್ಸ್, ಸಂದೇಶ್, ಸುಧೀರ್, ವಿಷ್ಣು, ಡಾ||ಫಣಿರಾಜ್ ಮೊದಲಾದವರಿದ್ದರು.