ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

ರೋಟರಿ–ಸಾಧನಾ ಸ್ನೇಹ ಕೂಟದಿಂದ ಸಾಂಪ್ರದಾಯಿಕ ತಿಂಡಿ ಸ್ಪರ್ಧೆ

 



ತೀರ್ಥಹಳ್ಳಿ: ಗಣೇಶ ಹಬ್ಬದ ಪ್ರಯುಕ್ತ ಸಾಧನಾ ಮಹಿಳಾ ಬಳಗ, ಕಟ್ಟೆಹಕ್ಲು ಮತ್ತು ರೋಟರಿ ಕ್ಲಬ್ ತೀರ್ಥಹಳ್ಳಿ ಇವರ ಸಹಯೋಗದಲ್ಲಿ ಮನೆಯಲ್ಲಿ ತಯಾರಿಸಿದ ಆರೋಗ್ಯಕರ ಸಾಂಪ್ರದಾಯಿಕ ಉಂಡೆ ಹಾಗೂ ಚಕ್ಕುಲಿ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ 25 ಮಂದಿ ಭಾಗವಹಿಸಿದ್ದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ರೋಟರಿ ಕ್ಲಬ್ ತೀರ್ಥಹಳ್ಳಿ ಅಧ್ಯಕ್ಷ ರೊ. ಎನ್. ಎಚ್. ರಮೇಶ್, ಸಾಂಪ್ರದಾಯಿಕವಾಗಿ ಮನೆಗಳಲ್ಲಿ ತಯಾರಿಸುತ್ತಿದ್ದ ಉಂಡೆ, ಚಕ್ಕುಲಿ ಸೇರಿದಂತೆ ವಿವಿಧ ತಿಂಡಿ ಪದಾರ್ಥಗಳು ರುಚಿಕರವಾಗಿರುವುದರ ಜೊತೆಗೆ ಆರೋಗ್ಯದ ದೃಷ್ಟಿಯಿಂದಲೂ ಮಹತ್ವ ಹೊಂದಿವೆ ಎಂದರು. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಮುಖ್ಯ ಅತಿಥಿ ಹಾಗೂ ತೀರ್ಪುಗಾರರಾಗಿ ಭಾಗವಹಿಸಿದ್ದ ರೋಟರಿ ಜಿಲ್ಲಾ ಚೇರ್ಮನ್ ರೊ. ಕೆ. ಪಿ. ಎಸ್. ಸ್ವಾಮಿ ಮಾತನಾಡಿ, ಸಾಧನಾ ಸ್ನೇಹ ಕೂಟವು ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ ಸ್ಥಳೀಯ ಗೃಹಿಣಿಯರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸಿದೆ. ವಿಶೇಷವಾಗಿ ಅತ್ತೆ–ಸೊಸೆಯರು ಒಟ್ಟಾಗಿ ಭಾಗವಹಿಸಿರುವುದು ಕಾರ್ಯಕ್ರಮದ ವಿಶೇಷತೆ ಎಂದರು.

ತೀರ್ಪುಗಾರರಾಗಿ ಭಾಗವಹಿಸಿದ್ದ ರೊ. ನಯನಾ ಜೆ. ಶೆಟ್ಟಿ ಮಾತನಾಡಿ, ಸ್ಪರ್ಧೆಯಲ್ಲಿ ಬಹುಮಾನಕ್ಕಿಂತ ಭಾಗವಹಿಸುವಿಕೆಯೇ ಮುಖ್ಯ. ಇಂತಹ ಕಾರ್ಯಕ್ರಮಗಳು ಮಹಿಳೆಯರಲ್ಲಿ ಆಸಕ್ತಿ ಹಾಗೂ ಆತ್ಮವಿಶ್ವಾಸ ಬೆಳೆಸಲು ಸಹಕಾರಿಯಾಗುತ್ತವೆ ಎಂದರು.

ಮಾಜಿ ಅಧ್ಯಕ್ಷ ಹಾಗೂ ತೀರ್ಪುಗಾರ ರೊ. ಬಿ. ವಿ. ಶ್ರೀಧರ್ ಮಾತನಾಡಿ, 25 ಮಂದಿ ಸ್ಪರ್ಧಿಗಳು ಉತ್ತಮ ರೀತಿಯಲ್ಲಿ ಸಾಂಪ್ರದಾಯಿಕ ತಿಂಡಿಗಳನ್ನು ತಯಾರಿಸಿ ತಂದಿದ್ದರು. ನಿಗದಿತ ಮಾನದಂಡಗಳ ಆಧಾರದ ಮೇಲೆ ಕೆಲವರಿಗೆ ಬಹುಮಾನ ದೊರೆಯದಿರಬಹುದು. ಆದರೆ ಪ್ರತಿಯೊಬ್ಬರ ಭಾಗವಹಿಸುವಿಕೆಯೂ ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಧನಾ ಸ್ನೇಹ ಕೂಟ, ಕಟ್ಟೆಹಕ್ಲು ಅಧ್ಯಕ್ಷೆ ಶ್ರೀಮತಿ ಶ್ರುತಿ ರಾಮಕೃಷ್ಣ ಮಾತನಾಡಿ, ರೋಟರಿ ಕ್ಲಬ್ ಕಾರ್ಯಕ್ರಮದಲ್ಲಿ ಕೈಜೋಡಿಸಿರುವುದು ಸಂತಸ ತಂದಿದೆ. ಸ್ಪರ್ಧೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ರೋಟರಿ ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು.

ರೊ. ಎಂ. ಎಚ್. ಶಿವಪ್ರಸಾದ್, ರೊ. ಜ್ಯೋತಿ ದಿಲೀಪ್, ರೊ. ಅಶೋಕ್ ನಗರವಳ್ಳಿ, ರೊ. ಪ್ರದೀಪ್, ರೊ. ಗುರುರಾಜ್ ಹಾಗೂ ರೋಟರಿ ಕ್ಲಬ್ ಕಾರ್ಯದರ್ಶಿ ಸಂಜಯ್ ಉಪಸ್ಥಿತರಿದ್ದರು.

ರೋಟರಿ ಕ್ಲಬ್ ತೀರ್ಥಹಳ್ಳಿ ಮಾಜಿ ಅಧ್ಯಕ್ಷ ರೊ. ವೈ. ಟಿ. ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಲತಾ ಶ್ರೀಕಾಂತ್ ವಂದಿಸಿದರು.