ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

ಹಣಕಾಸು – ಭಾಗ 4 ಈ ಸಲಹೆ ದುಡ್ಡು ಮಾಡಿರೋರಿಗಲ್ಲ ; ದುಡ್ಡು ಮಾಡಬೇಕೆಂದುಕೊ0ಡವರಿಗೆ ಮಾತ್ರ


ಹಣ ಉಳಿಸುವ ಅಭ್ಯಾಸ ಬೆಳೆದ ನಂತರ ಮುಂದಿನ ಪ್ರಶ್ನೆ  ಉಳಿಸಿದ ಹಣವನ್ನು ಎಲ್ಲಿ ಇಡಬೇಕು?

ಬ್ಯಾಂಕ್ ಉಳಿತಾಯ ಖಾತೆಯಲ್ಲೇ ಇಡಬೇಕೇ? FD ಮಾಡಬೇಕೇ? ತಿಂಗಳಿಗೆ ಸ್ವಲ್ಪಸ್ವಲ್ಪವಾಗಿ RDಯಲ್ಲಿ ಉಳಿಸಬೇಕೇ? ಪೋಸ್ಟ್ ಆಫೀಸ್ ಯೋಜನೆಗಳನ್ನು ಬಳಸಬಹುದೇ? ಸಹಕಾರಿ ಬ್ಯಾಂಕ್ ಅಥವಾ ಸಂಸ್ಥೆಯಲ್ಲಿ ಠೇವಣಿ ಇಡಬಹುದೇ? ಹೆಚ್ಚಿನ ಬಡ್ಡಿ ನೀಡುವ ಖಾಸಗಿ ಹಣಕಾಸು ಸಂಸ್ಥೆಗಳ FD ಆಯ್ಕೆ ಮಾಡಬಹುದೇ?

ಪ್ರತಿಯೊಂದು ಆಯ್ಕೆಗೂ ತನ್ನದೇ ಆದ ನಿಯಮ, ಲಾಭ ಮತ್ತು ಅಪಾಯಗಳಿವೆ.

ಆದ್ದರಿಂದ “ಹೆಚ್ಚು ಬಡ್ಡಿ ಎಲ್ಲಿ ಸಿಗುತ್ತದೆ?” ಎನ್ನುವುದಕ್ಕಿಂತ “ಯಾವ ಸಾಧನದ ನಿಯಮಗಳು ನನಗೆ ಅರ್ಥವಾಗುತ್ತವೆ ಮತ್ತು ನನ್ನ ಉಳಿತಾಯಕ್ಕೆ ಸೂಕ್ತವಾಗಿವೆ?” ಎಂಬ ಪ್ರಶ್ನೆ ಮುಖ್ಯ.


1. ಬ್ಯಾಂಕ್ ಉಳಿತಾಯ ಖಾತೆ

ಉಳಿತಾಯ ಖಾತೆ ಮುಖ್ಯವಾಗಿ ಹಣವನ್ನು ಸುರಕ್ಷಿತವಾಗಿ ಇಟ್ಟು ಅಗತ್ಯವಿದ್ದಾಗ ಬಳಸಲು ಅನುಕೂಲಕರವಾದ ವ್ಯವಸ್ಥೆ.

ಸಂಬಳ, ಪಿಂಚಣಿ ಅಥವಾ ಇತರ ಆದಾಯ ಪಡೆಯುವುದು, ದಿನನಿತ್ಯದ ಖರ್ಚು, ಡಿಜಿಟಲ್ ಪಾವತಿ ಮುಂತಾದವುಗಳಿಗೆ ಇದು ಉಪಯುಕ್ತ.

ಆದರೆ ದೀರ್ಘಕಾಲ ಬಳಸಬೇಕಾಗದ ದೊಡ್ಡ ಮೊತ್ತವನ್ನೆಲ್ಲ ಉಳಿತಾಯ ಖಾತೆಯಲ್ಲೇ ಇಟ್ಟುಕೊಳ್ಳುವುದರಿಂದ FD ಅಥವಾ ಇತರ ಸೂಕ್ತ ಸಾಧನಗಳಿಂದ ಸಿಗಬಹುದಾದ ಬಡ್ಡಿ ಅವಕಾಶವನ್ನು ಕಳೆದುಕೊಳ್ಳಬಹುದೇ ಎಂಬುದನ್ನೂ ಪರಿಗಣಿಸಬೇಕು.

RBIಯ ಹಣಕಾಸು ಶಿಕ್ಷಣ ಮಾಹಿತಿಯಲ್ಲಿಯೂ Savings Deposit, Term Deposit ಮತ್ತು Recurring Depositಗಳ ಉದ್ದೇಶಗಳು ವಿಭಿನ್ನವಾಗಿವೆ ಎಂದು ವಿವರಿಸಲಾಗಿದೆ.


2. Fixed Deposit – FD

Fixed Deposit ಅಥವಾ FD ಎಂದರೆ ನಿರ್ದಿಷ್ಟ ಮೊತ್ತವನ್ನು ನಿರ್ದಿಷ್ಟ ಅವಧಿಗೆ ಠೇವಣಿ ಇಟ್ಟು ಬಡ್ಡಿ ಪಡೆಯುವ ವಿಧಾನ.

FD ಮಾಡುವಾಗ ಕೇವಲ ಬಡ್ಡಿದರ ನೋಡಬಾರದು.

ಈ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು:

  • ಬಡ್ಡಿದರ ಎಷ್ಟು?
  • ಅವಧಿ ಎಷ್ಟು?
  • maturityಗೆ ಎಷ್ಟು ಹಣ ಸಿಗುತ್ತದೆ?
  • ಬಡ್ಡಿ ಯಾವ ಅವಧಿಯಲ್ಲಿ ಪಾವತಿಯಾಗುತ್ತದೆ?
  • ಅವಧಿಗೆ ಮುನ್ನ ಹಣ ತೆಗೆದುಕೊಂಡರೆ ಏನಾಗುತ್ತದೆ?
  • ತೆರಿಗೆ ಪರಿಣಾಮವೇನು?
  • ಹಿರಿಯ ನಾಗರಿಕರಿಗೆ ಪ್ರತ್ಯೇಕ ದರವಿದೆಯೇ?

RBIಯ ಹಣಕಾಸು ಶಿಕ್ಷಣ ಮಾಹಿತಿಯ ಪ್ರಕಾರ Term Deposit ನಿರ್ದಿಷ್ಟ ಅವಧಿಗೆ ಇಡಲಾಗುತ್ತದೆ ಮತ್ತು ಅವಧಿಗೆ ಮುನ್ನ ಹಣ ಹಿಂಪಡೆದರೆ ಬಡ್ಡಿ ಕಡಿಮೆಯಾಗಬಹುದು.


3. Recurring Deposit – RD

ಒಂದೇ ಬಾರಿಗೆ ದೊಡ್ಡ ಮೊತ್ತ ಇಡಲು ಸಾಧ್ಯವಾಗದವರು Recurring Deposit (RD) ಮೂಲಕ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಉಳಿಸಬಹುದು.

ಉದಾಹರಣೆಗೆ ತಿಂಗಳಿಗೆ ₹1,000, ₹2,000 ಅಥವಾ ₹5,000ರಂತೆ ನಿರ್ದಿಷ್ಟ ಅವಧಿಗೆ ಹಣ ಉಳಿಸಬಹುದು.

RBIಯ ಮಾಹಿತಿಯ ಪ್ರಕಾರ RD ನಿಯಮಿತವಾಗಿ ಸಣ್ಣ ಮೊತ್ತಗಳನ್ನು ಉಳಿಸಲು ಬಳಸಬಹುದಾದ ಠೇವಣಿ ವಿಧಾನವಾಗಿದೆ.

ಹೀಗಾಗಿ “ತಿಂಗಳ ಆದಾಯ ಬಂದಾಗಲೇ ಒಂದು ಭಾಗವನ್ನು ಪ್ರತ್ಯೇಕಿಸುವ” ಅಭ್ಯಾಸ ಬೆಳೆಸಲು RD ಸಹಾಯಕವಾಗಬಹುದು.


4. ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು

ಬ್ಯಾಂಕ್‌ಗಳ ಜೊತೆಗೆ India Post ಮೂಲಕವೂ ಹಲವು ಸಣ್ಣ ಉಳಿತಾಯ ಯೋಜನೆಗಳು ಲಭ್ಯವಿವೆ.

ಅವುಗಳಲ್ಲಿ ಪ್ರಮುಖವಾಗಿ:

  • Post Office Savings Account
  • Recurring Deposit
  • Time Deposit
  • Monthly Income Account
  • National Savings Certificate – NSC
  • Public Provident Fund – PPF
  • Kisan Vikas Patra – KVP
  • Sukanya Samriddhi Account
  • Senior Citizens' Savings Scheme – SCSS

ಪ್ರತಿಯೊಂದು ಯೋಜನೆಯ ಅವಧಿ, ಬಡ್ಡಿ, ಠೇವಣಿ ಮಿತಿ, ತೆರಿಗೆ ನಿಯಮ ಮತ್ತು ಹಣ ಹಿಂಪಡೆಯುವ ನಿಯಮಗಳು ವಿಭಿನ್ನವಾಗಿರುತ್ತವೆ.

ಹೀಗಾಗಿ “ಪೋಸ್ಟ್ ಆಫೀಸ್‌ನಲ್ಲಿ ಹೆಚ್ಚು ಬಡ್ಡಿ” ಎಂಬ ಸಾಮಾನ್ಯ ಮಾತಿಗಿಂತ, ಯಾವ ಯೋಜನೆಯ ನಿಯಮಗಳು ನಮಗೆ ಅನ್ವಯಿಸುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.

ಅಧಿಕೃತ ಮಾಹಿತಿಗಾಗಿ:

India Post – ಅಧಿಕೃತ ವೆಬ್‌ಸೈಟ್


5. PPF, NSC, KVP ಮುಂತಾದವು

ದೀರ್ಘಾವಧಿಯ ಉಳಿತಾಯಕ್ಕಾಗಿ PPF ಮುಂತಾದ ಯೋಜನೆಗಳನ್ನು ಪರಿಗಣಿಸಬಹುದು.

PPF ದೀರ್ಘಾವಧಿಯ ಉಳಿತಾಯದ ಸ್ವರೂಪ ಹೊಂದಿದ್ದು, ಸಾಮಾನ್ಯ ಉಳಿತಾಯ ಖಾತೆ ಅಥವಾ FDಗಿಂತ ವಿಭಿನ್ನ ನಿಯಮಗಳನ್ನು ಹೊಂದಿದೆ.

NSC ನಿರ್ದಿಷ್ಟ ಅವಧಿಯ ಉಳಿತಾಯಕ್ಕೆ ಬಳಸಬಹುದಾದ ಸಾಧನ.

KVP ಕೂಡ ನಿರ್ದಿಷ್ಟ ನಿಯಮಗಳ ಅಡಿಯಲ್ಲಿ ಉಳಿತಾಯಕ್ಕೆ ಬಳಸಲಾಗುತ್ತದೆ.

ಇವುಗಳನ್ನು ಆಯ್ಕೆ ಮಾಡುವಾಗ ಬಡ್ಡಿದರ ಮಾತ್ರವಲ್ಲದೆ ಅವಧಿ, ಹಣ ಹಿಂಪಡೆಯುವ ನಿಯಮ ಮತ್ತು ತೆರಿಗೆ ಪರಿಣಾಮಗಳನ್ನು ತಿಳಿದುಕೊಳ್ಳಬೇಕು.


6. ಸಹಕಾರಿ ಬ್ಯಾಂಕ್ ಮತ್ತು ಸಹಕಾರಿ ಸಂಸ್ಥೆಗಳು

ಗ್ರಾಮೀಣ ಪ್ರದೇಶಗಳಲ್ಲಿ ಸಹಕಾರಿ ಬ್ಯಾಂಕ್‌ಗಳು ಮತ್ತು ಸಹಕಾರಿ ಸಂಸ್ಥೆಗಳು ಉಳಿತಾಯ ಹಾಗೂ ಸಾಲ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಆದರೆ ಸಹಕಾರಿ ಬ್ಯಾಂಕ್ ಮತ್ತು ಸಹಕಾರಿ ಸಂಸ್ಥೆ ಒಂದೇ ಅಲ್ಲ.

ಠೇವಣಿ ಮಾಡುವ ಮೊದಲು ಸಂಸ್ಥೆಯ ಕಾನೂನುಬದ್ಧ ಸ್ವರೂಪ, ನಿಯಂತ್ರಣ ವ್ಯವಸ್ಥೆ ಮತ್ತು ಠೇವಣಿ ವಿಮೆ ಅನ್ವಯಿಸುತ್ತದೆಯೇ ಎಂಬುದನ್ನು ಪರಿಶೀಲಿಸಬೇಕು.

ಹೆಚ್ಚಿನ ಬಡ್ಡಿ ನೀಡುತ್ತದೆ ಎಂಬ ಕಾರಣಕ್ಕೆ ಮಾತ್ರ ಹಣ ಇಡುವುದು ಸರಿಯಾದ ವಿಧಾನವಲ್ಲ.


7. DICGC – ಬ್ಯಾಂಕ್ ಠೇವಣಿಗೆ ವಿಮೆ

ಬ್ಯಾಂಕ್‌ನಲ್ಲಿ FD ಅಥವಾ RD ಮಾಡುವವರು DICGC ಬಗ್ಗೆ ತಿಳಿದುಕೊಳ್ಳುವುದು ಮುಖ್ಯ.

ಅರ್ಹ ಬ್ಯಾಂಕ್ ಠೇವಣಿಗಳಿಗೆ ಪ್ರಸ್ತುತ ಒಬ್ಬ ಠೇವಣಿದಾರನಿಗೆ ಒಂದೇ ಬ್ಯಾಂಕ್‌ನಲ್ಲಿ ಮೂಲಧನ ಮತ್ತು ಬಡ್ಡಿ ಸೇರಿ ಗರಿಷ್ಠ ₹5 ಲಕ್ಷದವರೆಗೆ ಠೇವಣಿ ವಿಮಾ ರಕ್ಷಣೆ ಇದೆ.

ಆದರೆ ಪ್ರತಿಯೊಂದು ಹಣಕಾಸು ಉತ್ಪನ್ನಕ್ಕೂ ಈ ರಕ್ಷಣೆ ಅನ್ವಯಿಸುವುದಿಲ್ಲ.

ಹೀಗಾಗಿ ದೊಡ್ಡ ಮೊತ್ತದ ಠೇವಣಿ ಮಾಡುವವರು “ಈ ಠೇವಣಿಗೆ DICGC ರಕ್ಷಣೆ ಇದೆಯೇ?” ಎಂದು ಪರಿಶೀಲಿಸಬೇಕು.


8. ಖಾಸಗಿ Finance Company / NBFC FD

ಕೆಲವು ಖಾಸಗಿ ಹಣಕಾಸು ಸಂಸ್ಥೆಗಳು ಅಥವಾ NBFCಗಳು ಠೇವಣಿ ಯೋಜನೆಗಳನ್ನು ನೀಡುತ್ತವೆ.

ಕೆಲವೊಮ್ಮೆ ಬ್ಯಾಂಕ್ FDಗಿಂತ ಹೆಚ್ಚಿನ ಬಡ್ಡಿದರವೂ ಕಂಡುಬರಬಹುದು.

ಆದರೆ:

ಹೆಚ್ಚಿನ ಬಡ್ಡಿ = ಹೆಚ್ಚಿನ ಸುರಕ್ಷತೆ ಎಂದಲ್ಲ.

ಇಂತಹ ಠೇವಣಿ ಮಾಡುವ ಮೊದಲು ಸಂಸ್ಥೆಯ ವಿಶ್ವಾಸಾರ್ಹತೆ, ನಿಯಂತ್ರಣ, ಕ್ರೆಡಿಟ್ ರೇಟಿಂಗ್, ಅವಧಿ, ಮುಂಚಿತವಾಗಿ ಹಣ ಪಡೆಯುವ ನಿಯಮ, ತೆರಿಗೆ ಮತ್ತು ಠೇವಣಿ ವಿಮೆಯ ಸ್ಥಿತಿಯನ್ನು ಪರಿಶೀಲಿಸಬೇಕು.

ಬ್ಯಾಂಕ್ FD ಮತ್ತು NBFC FD ಒಂದೇ ರೀತಿಯದ್ದಲ್ಲ.


9. ಷೇರು ಮಾರುಕಟ್ಟೆ – ಉಳಿತಾಯದಿಂದ ಹೂಡಿಕೆಯತ್ತ

ಉಳಿತಾಯದ ಹಣವನ್ನು ದೀರ್ಘಾವಧಿಯಲ್ಲಿ ಬೆಳೆಸುವ ಬಗ್ಗೆ ಯೋಚಿಸುವಾಗ ಷೇರು ಮಾರುಕಟ್ಟೆ ಕೂಡ ಒಂದು ಹೂಡಿಕೆ ಮಾರ್ಗ.

ಷೇರು ಎಂದರೆ ಕಂಪನಿಯಲ್ಲಿನ ಮಾಲೀಕತ್ವದ ಒಂದು ಭಾಗ.

ಷೇರುಗಳ ಬೆಲೆ ಮಾರುಕಟ್ಟೆಯ ಪರಿಸ್ಥಿತಿಗೆ ಅನುಗುಣವಾಗಿ ಏರಿಳಿತಗೊಳ್ಳುತ್ತದೆ. ಆದ್ದರಿಂದ ಬ್ಯಾಂಕ್ FDಯಂತೆ ನಿರ್ದಿಷ್ಟ ಬಡ್ಡಿ ಅಥವಾ ಖಚಿತ maturity ಮೊತ್ತ ಇರುವುದಿಲ್ಲ.

ಷೇರುಗಳಲ್ಲಿ ಹೂಡಿಕೆ ಮಾಡುವವರು ಕಂಪನಿಯ ವ್ಯವಹಾರ, ಹಣಕಾಸಿನ ಸ್ಥಿತಿ, ಮೌಲ್ಯಮಾಪನ, ಅಪಾಯ ಮತ್ತು ತಮ್ಮ ಹೂಡಿಕೆಯ ಅವಧಿಯನ್ನು ಅರ್ಥಮಾಡಿಕೊಳ್ಳಬೇಕು.

ಅಲ್ಪಾವಧಿಯ ಬೆಲೆ ಏರಿಳಿತವನ್ನು ನೋಡಿ ಉಳಿತಾಯದ ಹಣವನ್ನೆಲ್ಲ ಷೇರುಗಳಲ್ಲಿ ಹಾಕುವುದು ಮತ್ತು ದೀರ್ಘಾವಧಿಯ ಹೂಡಿಕೆಗಾಗಿ ಹಣವನ್ನು ಬಳಸುವುದು — ಇವೆರಡೂ ಒಂದೇ ವಿಷಯವಲ್ಲ.


10. ಮ್ಯೂಚುವಲ್ ಫಂಡ್ – ಸಣ್ಣ ಮೊತ್ತದಿಂದ ಹೂಡಿಕೆ

ಮ್ಯೂಚುವಲ್ ಫಂಡ್‌ಗಳು ಕೂಡ ಉಳಿತಾಯದ ನಂತರ ಪರಿಗಣಿಸಬಹುದಾದ ಹೂಡಿಕೆ ಮಾರ್ಗಗಳಲ್ಲಿ ಒಂದು.

ಮ್ಯೂಚುವಲ್ ಫಂಡ್‌ನಲ್ಲಿ ಅನೇಕ ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಯೋಜನೆಯ ಉದ್ದೇಶಕ್ಕೆ ಅನುಗುಣವಾಗಿ ವಿವಿಧ ಆಸ್ತಿಗಳಲ್ಲಿ ಹೂಡಿಕೆ ಮಾಡಲಾಗುತ್ತದೆ.

SIP (Systematic Investment Plan) ಮೂಲಕ ತಿಂಗಳಿಗೆ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡುವ ವಿಧಾನವೂ ಜನಪ್ರಿಯವಾಗಿದೆ.

ಆದರೆ ಇಲ್ಲಿ ಮುಖ್ಯವಾದ ವ್ಯತ್ಯಾಸ:

FDಯಲ್ಲಿ ಬಡ್ಡಿದರ ಮತ್ತು ನಿಯಮಗಳು ಠೇವಣಿಗೆ ಸಂಬಂಧಿಸಿದವು; ಮ್ಯೂಚುವಲ್ ಫಂಡ್‌ನಲ್ಲಿ ಮಾರುಕಟ್ಟೆ ಆಧಾರಿತ ಅಪಾಯ ಇರುತ್ತದೆ.



11. ಷೇರು ಮತ್ತು ಮ್ಯೂಚುವಲ್ ಫಂಡ್‌ಗಳಿಗೆ ಮುನ್ನ ತಿಳಿಯಬೇಕಾದುದು

ಹೂಡಿಕೆ ಮಾಡುವ ಮೊದಲು:

ಅಪಾಯ ಎಷ್ಟು?

ಹಣ ಎಷ್ಟು ಕಾಲ ಹೂಡಿಕೆಯಲ್ಲಿ ಇರಲಿದೆ?

ಮಾರುಕಟ್ಟೆ ಕುಸಿದರೆ ನಷ್ಟವನ್ನು ಸಹಿಸುವ ಸಾಮರ್ಥ್ಯವಿದೆಯೇ?

ಹೂಡಿಕೆ ಮಾಡುತ್ತಿರುವ ಉತ್ಪನ್ನದ ಬಗ್ಗೆ ಅರ್ಥವಾಗಿದೆಯೇ?

ಎಂಬ ಪ್ರಶ್ನೆಗಳಿಗೆ ಉತ್ತರ ಇರಬೇಕು.

ಮಾರುಕಟ್ಟೆ ಆಧಾರಿತ ಹೂಡಿಕೆಯಲ್ಲಿ ಹಿಂದಿನ ಆದಾಯವು ಭವಿಷ್ಯದ ಆದಾಯಕ್ಕೆ ಖಾತರಿ ನೀಡುವುದಿಲ್ಲ.

SEBI ತನ್ನ ಹೂಡಿಕೆದಾರರ ಶಿಕ್ಷಣ ಸಾಮಗ್ರಿಗಳಲ್ಲಿ ಹೂಡಿಕೆ, ವಿವಿಧ asset classes ಮತ್ತು securities market ಕುರಿತು ಮಾಹಿತಿ ಹಾಗೂ Financial Tools & Calculators ಒದಗಿಸುವ Saa thi ವ್ಯವಸ್ಥೆಯನ್ನು ಪರಿಚಯಿಸಿದೆ.


12. Financial Calculator – ಲೆಕ್ಕವನ್ನು ನೀವೇ ಹಾಕಿ

ಉಳಿತಾಯದ ಬಗ್ಗೆ ತಿಳಿದುಕೊಳ್ಳುವ ಮುಂದಿನ ಹಂತ ಲೆಕ್ಕಾಚಾರ ಕಲಿಯುವುದು.

ಉದಾಹರಣೆಗೆ:

₹5,000 ತಿಂಗಳಿಗೆ ಉಳಿಸಿದರೆ 5 ವರ್ಷದಲ್ಲಿ ಎಷ್ಟು?

₹5,000 ತಿಂಗಳಿಗೆ ಹೂಡಿಕೆ ಮಾಡಿದರೆ 10 ವರ್ಷದಲ್ಲಿ ಅಂದಾಜು ಎಷ್ಟು?

₹1 ಲಕ್ಷ FD ಮಾಡಿದರೆ maturity ಮೊತ್ತ ಎಷ್ಟು?

ಒಂದು ಗುರಿಗಾಗಿ ತಿಂಗಳಿಗೆ ಎಷ್ಟು ಹಣ ಉಳಿಸಬೇಕು?

ಇಂತಹ ಪ್ರಶ್ನೆಗಳಿಗೆ Financial Calculator ಸಹಾಯ ಮಾಡುತ್ತದೆ.

SEBIಯ ಅಧಿಕೃತ Investor Website

SEBI Investor – Financial Tools & Calculators

ಇಲ್ಲಿ ಹೂಡಿಕೆದಾರರ ಶಿಕ್ಷಣದ ಜೊತೆಗೆ Financial Tools & Calculators ಲಭ್ಯವಿದ್ದು, SIP Calculator ಕೂಡ SEBIಯ Saa₹thi ಶಿಕ್ಷಣ ವ್ಯವಸ್ಥೆಯಲ್ಲಿ ಪರಿಚಯಿಸಲಾಗಿದೆ.

ಗಮನಿಸಿ: Calculatorನಲ್ಲಿ 10%, 12% ಅಥವಾ 15% ಎಂಬ ನಿರೀಕ್ಷಿತ return ನಮೂದಿಸಿದರೆ ಅದು ಖಚಿತ ಭವಿಷ್ಯದ ಆದಾಯವಲ್ಲ. ಅದು ಕೇವಲ ಲೆಕ್ಕಾಚಾರದ ಅಂದಾಜು.


13. ಸಣ್ಣ ಮೊತ್ತ + ನಿಯಮಿತ ಉಳಿತಾಯ + ದೀರ್ಘಾವಧಿ = ಹಣಕಾಸಿನ ಶಿಸ್ತಿನ ಉತ್ತಮ ಅಭ್ಯಾಸ.



“ಹೆಚ್ಚು ಬಡ್ಡಿ” ಎನ್ನುವುದೊಂದೇ ಮಾನದಂಡವಾಗಬಾರದು. ಒಂದು ಸಂಸ್ಥೆ 7% ಬಡ್ಡಿ ನೀಡುತ್ತದೆ, ಇನ್ನೊಂದು 8% ನೀಡುತ್ತದೆ ಎಂದರೆ 8% ನೀಡುವ ಸಂಸ್ಥೆಯನ್ನೇ ಆಯ್ಕೆ ಮಾಡಬೇಕು ಎಂಬುದು ಸರಳ ಲೆಕ್ಕ.

ಆದರೆ ನಿಜವಾದ ಹಣಕಾಸಿನ ನಿರ್ಧಾರದಲ್ಲಿ ಇನ್ನೂ ಹಲವು ಪ್ರಶ್ನೆಗಳಿವೆ:

ಸುರಕ್ಷತೆ ಹೇಗಿದೆ?

ಹಣ ಯಾವಾಗ ಬೇಕಾಗಬಹುದು?

ಅವಧಿಗೆ ಮುನ್ನ ಹಣ ತೆಗೆದುಕೊಳ್ಳಬಹುದೇ?

ತೆರಿಗೆ ನಂತರ ನಿಜವಾದ ಲಾಭ ಎಷ್ಟು?

ಠೇವಣಿ ವಿಮೆ ಇದೆಯೇ?

ಸಂಸ್ಥೆಯ ನಿಯಂತ್ರಣ ಮತ್ತು ವಿಶ್ವಾಸಾರ್ಹತೆ ಹೇಗಿದೆ?

ಹೀಗಾಗಿ ಬಡ್ಡಿದರದ ಜೊತೆಗೆ ನಿಯಮಗಳನ್ನೂ ಓದುವುದು ಹಣಕಾಸಿನ ಜಾಣ್ಮೆ.


ಕೊನೆಯ ಮಾತು

ಉಳಿತಾಯ ಮಾಡುವುದು ಮೊದಲ ಹೆಜ್ಜೆ.

ಉಳಿಸಿದ ಹಣವನ್ನು ಎಲ್ಲಿ ಇಡಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಂದಿನ ಹೆಜ್ಜೆ.

ಬ್ಯಾಂಕ್, FD, RD, ಪೋಸ್ಟ್ ಆಫೀಸ್, ಸಹಕಾರಿ ಬ್ಯಾಂಕ್, ಇತರ ಠೇವಣಿ ಸಂಸ್ಥೆಗಳು, ಮ್ಯೂಚುವಲ್ ಫಂಡ್ ಮತ್ತು ಷೇರು ಮಾರುಕಟ್ಟೆ — ಪ್ರತಿಯೊಂದಕ್ಕೂ ತನ್ನದೇ ಆದ ಸ್ವರೂಪ ಮತ್ತು ಅಪಾಯವಿದೆ.

ಆದ್ದರಿಂದ,

“ಹೆಚ್ಚು ಬಡ್ಡಿ ಎಲ್ಲಿ?” ಎನ್ನುವುದಕ್ಕಿಂತ
“ನನ್ನ ಹಣದ ಸ್ವರೂಪಕ್ಕೆ ಯಾವ ಸಾಧನವನ್ನು ಅರ್ಥಮಾಡಿಕೊಂಡು ಆಯ್ಕೆ ಮಾಡಬಹುದು?” ಎಂಬ ಪ್ರಶ್ನೆ ಮುಖ್ಯ.

ಉಳಿತಾಯದ ಹಣವನ್ನು ಜ್ಞಾನದಿಂದ ನಿರ್ವಹಿಸಿದಾಗ ಮಾತ್ರ ಅದು ಭವಿಷ್ಯದ ಆರ್ಥಿಕ ಭದ್ರತೆಗೆ ಸಹಾಯ ಮಾಡುತ್ತದೆ.

ಮುಂದಿನ ಭಾಗದಲ್ಲಿ FD, RD, PPF, NSC, ಮ್ಯೂಚುವಲ್ ಫಂಡ್, SIP ಮುಂತಾದ ಆಯ್ಕೆಗಳನ್ನು ಸರಳ ಉದಾಹರಣೆಗಳೊಂದಿಗೆ ಹೋಲಿಸಿ ನೋಡೋಣ.