ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

ಭಾರಿ ನಕಲಿ ಜಾಲದ ಕಿಂಗ್‌ಪಿನ್ ಬಂಧನ – ರಾಜ್ಯಾದ್ಯಂತ ಹೈಅಲರ್ಟ್, 16 ಲೈಸೆನ್ಸ್ ರದ್ದು

ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ನಕಲಿ ಜೀವ ರಕ್ಷಕ ಔಷಧಿ ಜಾಲದ ಪ್ರಮುಖ ಸೂತ್ರಧಾರ (ಕಿಂಗ್‌ಪಿನ್) ಆರ್. ಪ್ರಶಾಂತ್ ರಂಜನ್ ಬಾಬು (36) ನನ್ನು ವಿಶೇಷ ತನಿಖಾ ತಂಡ (SIT) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದುಕೊಂಡಿದೆ.


ವಿದೇಶಕ್ಕೆ ಪರಾರಿಯಾಗಿದ್ದ ಆರೋಪಿಯ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಲಾಗಿತ್ತು. ಶಾರ್ಜಾ ಮಾರ್ಗವಾಗಿ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಕಾರ್ಯಾಚರಣೆ ನಡೆಸಿರುವ ಎಸ್‌ಐಟಿ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ, ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

₹5.05 ಕೋಟಿ ಮೌಲ್ಯದ ನಕಲಿ ಔಷಧಿ ಜಪ್ತಿ

ಬೆಂಗ​ಳೂರು ಗ್ರಾಮಾಂತರ ಜಿಲ್ಲೆಯ ಬಿಡದಿ ಸಮೀಪದ ತವರೇಕೆರೆಯಲ್ಲಿದ್ದ ಫಾರ್ಮ್‌ಹೌಸ್‌ ಮೇಲೆ ದಾಳಿ ನಡೆಸಿದ್ದ ಪೊಲೀಸರು, ಅಲ್ಲಿ ನಡೆಯುತ್ತಿದ್ದ ಬೃಹತ್ ನಕಲಿ ಔಷಧ ತಯಾರಿಕಾ ಘಟಕವನ್ನು ಭೇದಿಸಿದ್ದರು. ದಾಳಿ ವೇಳೆ ಅಂದಾಜು ₹5.05 ಕೋಟಿಗೂ ಅಧಿಕ ಮೌಲ್ಯದ ನಕಲಿ ಜೀವ ರಕ್ಷಕ ಇಂಜೆಕ್ಷನ್‌ಗಳು, ದಿನಾಂಕ ಮುಕ್ತಾಯಗೊಂಡ (Expired) ದಾಸ್ತಾನುಗಳು, ಅತ್ಯಾಧುನಿಕ ಪ್ಯಾಕಿಂಗ್ ಯಂತ್ರಗಳು ಹಾಗೂ ಪ್ರಸಿದ್ಧ ಕಂಪನಿಗಳ ನಕಲಿ ಲೇಬಲ್‌ಗಳನ್ನು ಜಪ್ತಿ ಮಾಡಲಾಗಿತ್ತು.

ಜಾಲದ ಕಾರ್ಯವೈಖರಿ ಹೇಗಿತ್ತು?

ನೆರೆರಾಜ್ಯಗಳಿಂದ ಅತ್ಯಂತ ಕಡಿಮೆ ಬೆಲೆಯ ಮತ್ತು ಕಳಪೆ ಗುಣಮಟ್ಟದ ಔಷಧ ಹಾಗೂ ದ್ರವಗಳನ್ನು ತರಿಸಿಕೊಳ್ಳುತ್ತಿದ್ದ ಈ ಜಾಲ, ಅವುಗಳನ್ನು ಹೆಸರಾಂತ ಫಾರ್ಮಾ ಕಂಪನಿಗಳ ಬಾಟಲಿಗಳಲ್ಲಿ ತುಂಬುತ್ತಿತ್ತು. ನಂತರ ನಕಲಿ ಕ್ಯೂಆರ್ (QR) ಕೋಡ್ ಮತ್ತು ಲೇಬಲ್‌ಗಳನ್ನು ಅಂಟಿಸಿ, ನಿಜವಾದ ಔಷಧಿಗಳಂತೆ ಬಿಂಬಿಸುತ್ತಿತ್ತು. ಈ ನಕಲಿ ಔಷಧಿಗಳನ್ನು ಬೆಂಗಳೂರು ಸೇರಿದಂತೆ ರಾಜ್ಯದ 90ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು ಹಾಗೂ ಮೆಡಿಕಲ್ ಶಾಪ್‌ಗಳಿಗೆ ಸರಬರಾಜು ಮಾಡಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.

ಪ್ರಕರಣದ ಪ್ರಮುಖ ಪರಿಣಾಮಗಳು:

  • 16 ಲೈಸೆನ್ಸ್‌ಗಳು ರದ್ದು: ಘಟನೆ ಬೆಳಕಿಗೆ ಬರುತ್ತಿದ್ದಂತೆ ಕಾರ್ಯಪ್ರವೃತ್ತವಾಗಿರುವ ಔಷಧ ನಿಯಂತ್ರಣ ಮಂಡಳಿ, ಜಾಲದಲ್ಲಿ ಭಾಗಿಯಾಗಿದ್ದ 16 ಫಾರ್ಮಾಸ್ಯುಟಿಕಲ್ ಲೈಸೆನ್ಸ್‌ಗಳನ್ನು ರದ್ದುಗೊಳಿಸಿದೆ ಹಾಗೂ 8ಕ್ಕೂ ಹೆಚ್ಚು ವಿತರಕರ ಪರವಾನಗಿಯನ್ನು ಅಮಾನತುಗೊಳಿಸಿದೆ.

  • 7ಕ್ಕೂ ಹೆಚ್ಚು ಮಂದಿ ಬಂಧನ: ಮಿನರ್ವಾ ಸರ್ಕಲ್‌ನ ಪ್ರಸಿದ್ಧ ಮೆಡಿಕಲ್ ರಿಸೇಲರ್‌ಗಳು ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 7ಕ್ಕೂ ಹೆಚ್ಚು ಪ್ರಮುಖರನ್ನು ಬಂಧಿಸಲಾಗಿದೆ.

  • ರಾಜ್ಯಾದ್ಯಂತ ತಪಾಸಣೆ ತೀವ್ರ: ಔಷಧ ಪರಿವೀಕ್ಷಕರು (Drug Inspectors) ರಾಜ್ಯದಾದ್ಯಂತ ಸಗಟು ಮಾರಾಟಗಾರರು ಮತ್ತು ಆಸ್ಪತ್ರೆಗಳ ಗೋದಾಮುಗಳ ಮೇಲೆ ದಿಢೀರ್ ದಾಳಿ ನಡೆಸಿ, ಔಷಧಿ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸುತ್ತಿದ್ದಾರೆ.

ಆರೋಗ್ಯ ಇಲಾಖೆಯಿಂದ ಎಚ್ವರಿಕೆ:

ನಕಲಿ ಔಷಧಿಗಳಿಂದ ಸಾರ್ವಜನಿಕರ ಜೀವಕ್ಕೆ ಭಾರಿ ಅಪಾಯವಿರುವುದರಿಂದ, ಸಾರ್ವಜನಿಕರು ಅಧಿಕೃತ ಫಾರ್ಮಸಿಗಳಿಂದ ಮಾತ್ರ ರಶೀದಿಯೊಂದಿಗೆ ಔಷಧಿಗಳನ್ನು ಖರೀದಿಸಬೇಕು. ಔಷಧಿಗಳ ಮೇಲಿರುವ ಬ್ಯಾಚ್ ಸಂಖ್ಯೆ ಮತ್ತು ಕ್ಯೂಆರ್ ಕೋಡ್‌ಗಳನ್ನು ಪರಿಶೀಲಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಬಂಧಿತ ಪ್ರಶಾಂತ್ ರಂಜನ್‌ನನ್ನು ಪೊಲೀಸ್ ಕಸ್ಟಡಿಗೆ ಪಡೆದಿರುವ ಎಸ್‌ಐಟಿ, ಈ ಜಾಲದಲ್ಲಿ ಭಾಗಿಯಾಗಿರುವ ನೆರೆರಾಜ್ಯಗಳ ಫ್ಯಾಕ್ಟರಿಗಳು ಹಾಗೂ ವೈದ್ಯಕೀಯ ಪ್ರತಿನಿಧಿಗಳ (Medical Representatives) ಬೆನ್ನುಬಿದ್ದಿದೆ.