ಕರ್ನಾಟಕದಲ್ಲಿ 80ಕ್ಕೂ ಹೆಚ್ಚು ಭಾಷೆಗಳಿದ್ದು ಕೊಡಗು ಒಂದರಲ್ಲಿಯೇ 15 ಉಪಭಾಷೆಗಳಿವೆ. ವಿದ್ಯಾರ್ಥಿಗಳಿಗೆ ಕನ್ನಡ ಕಬ್ಬಿಣದ ಕಡೆಲೆಯಾಗಿದ್ದರೆ ಇಂಗ್ಲೀಷ್ ಸುಲಿದ ಬಾಳೆಹಣ್ಣೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ ಅವರು ಪ್ರಶ್ನಿಸಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸ.ಪ.ಪೂ. ಕಾಲೇಜು, ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ತಾಲೂಕು ಕರ್ನಾಟಕ ಜಾನಪದ ವೇದಿಕೆ ಸಹಯೋಗದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಇವರು ವಿಶ್ವದಲ್ಲಿ 8 ಸಾವಿರ ಭಾಷೆಗಳಿದ್ದು 3600 ಭಾಷೆಗಳು ನಿತ್ಯದ ಬದುಕಿನಲ್ಲಿ ಬಂದು ಹೋಗುತ್ತವೆ. ಅದರಲ್ಲಿ ಕೇವಲ 20 ಭಾಷೆಗಳನ್ನು ವೈಜ್ಞಾನಿಕ ಭಾಷೆಯಾಗಿ ಗುರುತಿಸಿದ್ದು ಕನ್ನಡವೂ ಸೇರಿಕೊಂಡಿದೆ. ಮಾತನಾಡುವುದು, ಹೇಳುವುದು, ಕೇಳುವುದು ಎಲ್ಲವೂ ಕನ್ನಡದಲ್ಲಿ ಸುಲಭವಾಗಿದೆ .ಆರೋಗ್ಯ, ಮತ್ತು ಶಿಕ್ಷಣ ದುಬಾರಿಯಾಗುತ್ತಿರುವ ಸಂದರ್ಭದಲ್ಲಿ ಖಾಸಗಿ ಶಾಲೆಗಳು ಸರ್ಕಾರಿ ಶಾಲೆ ದತ್ತು ಪಡೆಯಬೇಕೆಂಬ ನಿಯಮ ಮೂರ್ಖತನದ್ದು. ರಾಜಕಾರಣಿಗಳು, ಜನಪ್ರತಿನಿಧಿಗಳು ಆಸ್ಪತ್ರೆ, ಶಾಲೆಯನ್ನು ನಡೆಸುತ್ತಿದ್ದು ದೇಶದ ದುರಂತ. ಮೊದಲು ಅವುಗಳನ್ನು ಸರ್ಕಾರ ಸಂಪೂರ್ಣ ಉಚಿತಗೊಳಿಸಬೇಕು. ಬಡವರ ಸೇವೆ ಎಂಬುದು ಕೇವಲ ನಾಟಕ. ಅನಗತ್ಯ ಭಾಗ್ಯಗಳನ್ನು ನೀಡಿರುವುದು ವಿಷಾದದ ಸಂಗತಿ ಎಂದರು.
ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಜಿಲ್ಲಾ ಕಾರ್ಯದರ್ಶಿ ಶಿವಪ್ಪ, ತಾಲ್ಲೂಕು ಅಧ್ಯಕ್ಷೆ ರೇಣುಕಾ ಎಂ ಹೆಗಡೆ, ಸಾಹಿತಿ ಉಮಾದೇವಿ ಉರಾಳ್, ಲೇಖಕಿ ಶೃತಿ ಗದ್ದೆಗಲ್, ಪ್ರಭಾರ ಪ್ರಾಂಶುಪಾಲರಾದ ಎಸ್.ಎಂ.ಜಗದೀಶ್, ಪ್ರಕಾಶ್ ಬಿ. ಉಪಸ್ಥಿತರಿದ್ದು ಮಾತನಾಡಿದರು.ಕಾಲೇಜಿನ ವಿದ್ಯಾರ್ಥಿಗಳು ಕನ್ನಡ ಗೀತೆಗಳನ್ಮು ಹಾಡಿದರು. ಶಕುಂತುಲಾ ಮತ್ತು ತಂಡದವರು ಜ್ಯೋತಿಯೊಂದಿಗೆ ಕನ್ನಡ ಗೀತೆ ಹಾಡಿದರು. ಅಧ್ಯಾಪಕ ಸುರೇಶ್ ಏಕಪಾತ್ರಭಿನಯ ಮಾಡಿದರು.
ಉಪನ್ಯಾಸಕ ಡಾ.ದೇವರಾಜ್ ಸ್ವಾಗತಿಸಿದರು. ಉಪನ್ಯಾಸಕಿ ಸುಧಾ ಎಚ್. ಜಿ. ವಂದಿಸಿದರು. ಉಪನ್ಯಾಸಕಿ ರೋಹಿಣಿ ಯು.ಪಿ. ಕಾರ್ಯಕ್ರಮ ನಿರೂಪಿಸಿದರು.