ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

ವಾಗ್ದೇವಿ ಟ್ರಸ್ಟ್‌ ವತಿಯಿಂದ ಬಸ್ತಿಕೊಪ್ಪ-ಹೊರಬೈಲು ಮಜರೆ ಗ್ರಾಮದಲ್ಲಿ ಎರಡು ಸುಲಭ ಶೌಚಾಲಯ ಫಲಾನುಭವಿಗಳಿಗೆ ಹಸ್ತಾಂತರ


ವಾಗ್ದೇವಿ ಟ್ರಸ್ಟ್‌ ವತಿಯಿಂದ  ಬಸ್ತಿಕೊಪ್ಪ-ಹೊರಬೈಲು ಮಜರೆ ಗ್ರಾಮದಲ್ಲಿ ಎರಡು ಸುಲಭ ಶೌಚಾಲಯ ಫಲಾನುಭವಿಗಳಿಗೆ ಹಸ್ತಾಂತರ
ತೀರ್ಥಹಳ್ಳಿ : ತಾಲ್ಲೂಕು ಆಡಳಿತ, ವಾಗ್ದೇವಿ ಚಾರಿಟೇಬಲ್‌ ಟ್ರಸ್ಟ್‌, ದಾನಿಗಳ ಸಹಾಯದಿಂದ ಬಸ್ತಿಕೊಪ್ಪ-ಹೊರಬೈಲು ಮಜರೆ ಗ್ರಾಮದ ಪರಿಶಿಷ್ಟ ಕುಟುಂಬಗಳಿಗೆ ಎರಡು ಸುಲಭ ಶೌಚಾಲಯ ನಿರ್ಮಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.

ಫಲಾನುಭವಿ ಕುಟುಂಬಗಳಿಗೆ ಆಧಾರ್‌ ಕಾರ್ಡ್‌ ಸೇರಿದಂತೆ ಅಗತ್ಯಪೂರಕ ದಾಖಲೆಗಳಿಲ್ಲದ ಕಾರಣ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ನೆರವು ನೀಡಲು ಸಾಧ್ಯವಾಗುತ್ತಿಲ್ಲ. ನಿವಾಸಿಗಳ ವಾಸಸ್ಥಳ ಮತ್ತು ಮನೆ ನಿರ್ಮಾಣಕ್ಕೆ ಸರ್ಕಾರದ ಹಂತದಲ್ಲಿ ಪ್ರಯತ್ನಿಸಲಾಗುತ್ತಿದೆ. ತಕ್ಷಣದ ಸೇವೆಗಳನ್ನು ನೀಡುವ ಉದ್ದೇಶದಿಂದ ಶೌಚಾಲಯ ನಿರ್ಮಿಸಲಾಗಿದೆ” ಎಂದು ತಹಶೀಲ್ದಾರ್‌ ಎಸ್.ರಂಜಿತ್‌ ಹೇಳಿದರು.

“ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಕ್ಕೆ ವಾಗ್ದೇವಿ ಚಾರಿಟೇಬಲ್‌ ಟ್ರಸ್ಟ್‌ ಮೂಲಕ ವೃದ್ಧರು, ವಿಧವೆಯರು, ವಿಕಲಚೇತನರು, ಅಶಕ್ತರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ತಲುಪಿಸುತ್ತಿದ್ದೇವೆ. ಟ್ರಸ್ಟ್‌ ಸುಮಾರು ರೂ. 42,000 ವೆಚ್ಚದಲ್ಲಿ ಶೌಚಾಲಯ ನಿರ್ಮಿಸಿದೆ. ಫಲಾನುಭವಿಗಳು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು” ಎಂದು ಶೌಚಾಲಯ ಹಸ್ತಾಂತರಿಸಿ ಟ್ರಸ್ಟ್‌ ಕಾರ್ಯದರ್ಶಿ ಸತೀಶ್‌ ಹೇಳಿದರು.

“ಟ್ರಸ್ಟ್ ವ್ಯಾಪ್ತಿ ಸೀಮಿತವಾಗಿಲ್ಲ. ಅನಾಥರು, ದುರ್ಬಲರ ಯಾವುದೇ ದಾಖಲೆಗಳನ್ನು ನಾವು ಕೇಳುವುದಿಲ್ಲ. ಸಹಾಯದ ಅರ್ಹತೆ ಬಡತನ ಮಾತ್ರ. ಫಲಾನುಭವಿಗಳು ದುಶ್ಚಟಗಳಿಂದ ದೂರ ಇದ್ದು ಶ್ರಮ ವಹಿಸಿ ಕೆಲಸ ಮಾಡಬೇಕು” ಟ್ರಸ್ಟಿ ವಿನುತ ಮುರುಳೀಧರ ಸಲಹೆ ನೀಡಿದರು.

“ಕುಟುಂಬಗಳಿಗೆ ಸಾರ್ವಜನಿಕರ ಸಹಾಯದಿಂದ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಟ್ರಸ್ಟಿನ ಅಧ್ಯಕ್ಷರಾದ ರವಿರಾಜ್‌ ವೈದ್ಯರನ್ನು ಸಂಪರ್ಕಿಸಿದೆವು. ಅವರು ಎರಡು ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ. ಫಿಟ್‌ ನಿರ್ಮಿಸಲು ಸಹ್ಯಾದ್ರಿ ಪಾಲಿಟೆಕ್ನಿಕ್‌ ಕಾಲೇಜಿನ ಅಧ್ಯಕ್ಷರಾದ ಅನಿತಾ ನಾಗರಾಜ್‌ ರೂ.20,000 ಧನ ಸಹಾಯ ಮಾಡಿದ್ದಾರೆ” ಎಂದು ತಾಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಶೈಲಾ ಎನ್‌ ತಿಳಿಸಿದರು.