ಸಾಧನೆಯ ಹೂರಣದ ನಡುವೆ ಎದ್ದುನಿಂತ ಮೂಲಭೂತ ಸೌಕರ್ಯಗಳ ಕೊರತೆ!
ತೀರ್ಥಹಳ್ಳಿ: ಪಟ್ಟಣ ಪಂಚಾಯಿತಿಯ ಐದು ವರ್ಷಗಳ ಕಾಂಗ್ರೆಸ್ ಆಡಳಿತಾವಧಿ ಪೂರ್ಣಗೊಂಡಿದ್ದು, ಆಡಳಿತಾಧಿಕಾರಿಗಳ ಕೈಗೆ ಪಟ್ಟಣದ ಚುಕ್ಕಾಣಿ ಹಸ್ತಾಂತರವಾಗಿದೆ. ಈ ಸಂದರ್ಭದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಿರ್ಗಮಿತ ಅಧ್ಯಕ್ಷ ರತ್ನಾಕರ್ ಶೆಟ್ಟಿ ಮಾತನಾಡಿ, "ನಾವು ಮಾಡಿರುವ ಕೆಲಸ ಜನರಿಗೆ ಮುಟ್ಟಿದೆ ಎಂದು ಭಾವಿಸುತ್ತೇವೆ. ಕಳೆದ 5 ವರ್ಷಗಳಲ್ಲಿ ಒಟ್ಟು ₹26 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.
ಐದು ವರ್ಷಗಳ ಅವಧಿಯಲ್ಲಿ ಐದು ಜನ ಅಧ್ಯಕ್ಷರು ಆಡಳಿತ ನಡೆಸಿದ್ದು, ಫುಡ್ ಕೋರ್ಟ್, ಬಯಲು ರಂಗಮಂದಿರ, ಸ್ವಿಮ್ಮಿಂಗ್ ಪೂಲ್ ನಿರ್ಮಾಣ, ಸ್ವಚ್ಛತೆಗೆ ಆದ್ಯತೆ, ಗಾಂಧಿಚೌಕದಲ್ಲಿ ಅಶೋಕ ಸ್ತಂಭ, ರಾಮೇಶ್ವರ ದೇವಸ್ಥಾನದ ರಸ್ತೆಗೆ ಇಂಟರ್ ಲಾಕ್, ಬಡವರಿಗೆ ಶೌಚಾಲಯ, ನೂತನ ಪಟ್ಟಣ ಪಂಚಾಯಿತಿ ಕಟ್ಟಡ, ಕುರುವಳ್ಳಿ ಜೋಪಡಿ ನಿವಾಸಿಗಳಿಗೆ ನಿವೇಶನ ಹಂಚಿಕೆ ( ಇವರೇನೋ ಮನೆ ಕಟ್ಟಿಕೊಂಡು ವಾಸವಾಗುತ್ತಿದ್ದಾರೆ. ಇವರಿಗೆ ಅಲ್ಲಿ ತುರ್ತಾಗಿ ಶೌಚಾಲಯ ವ್ಯವಸ್ಥೆಯ ನ್ಯೂನ್ಯತೆ ಸರಿ ಪಡಿಸದಿದ್ದರೆ ಸ್ಥಳೀಯ ನಿವಾಸಿಗಳ ಸಂಕಟ ಹೇಳತೀರದಾಗಿದೆ ಎಂಬುದನ್ನು ತುರ್ತು ಗಮನಿಸಬೇಕಿದೆ.) ತುಂಗಾ ಸೇತುವೆ ಬಳಿ ಸಬ್ವೇ ನಿರ್ಮಾಣ ಮುಂತಾದ ಕೆಲಸಗಳನ್ನು ಪೂರ್ಣಗೊಳಿಸಿರುವುದಾಗಿ ಆಡಳಿತ ಪಕ್ಷ ಹೇಳಿಕೊಂಡಿದೆ.
ಆದರೂ ನಿರೀಕ್ಷೆ ಹುಸಿಯಾಯಿತೇ ಕಾಗದಲ್ಲೇ ಉಳಿಯಿತೇ ಕುಡಿಯುವ ನೀರಿನ ಶುದ್ಧತೆ ಮತ್ತು ಗುಣಮಟ್ಟ?
ಸ್ಥಳೀಯಾಡಳಿತದ ಪ್ರಥಮ ಆದ್ಯತೆ ಜನರಿಗೆ ಸುರಕ್ಷಿತ ಮೂಲಭೂತ ಸೌಕರ್ಯ ಒದಗಿಸುವುದಾಗಿದೆ. ಭಾರತೀಯ ಮಾನಕ ಸಂಸ್ಥೆಯ IS 10500:2012 ಮಾನದಂಡದ ಪ್ರಕಾರ ಕಲುಷಿತ ಮುಕ್ತ ನೀರು ಪೂರೈಕೆ ಆಗಬೇಕು. ನೀರು ಸರಬರಾಜು ಮೂಲದಿಂದ ಮನೆ ಬಾಗಿಲಿಗೆ ತಲುಪುವವರೆಗೆ ಯಾವುದೇ ಮಲಿನ್ಯ (Contamination) ಮಿಶ್ರಣವಾಗಬಾರದು. ಆದರೆ, ಪಟ್ಟಣದ ಕೆಲವೆಡೆ ಈ ನಿಬಂಧನೆ ಪಾಲನೆಯಾಗುವಲ್ಲಿ ಪಟ್ಟಣ ಪಂಚಾಯಿತಿ ವಿಫಲವಾಗಿದೆ.
ನಿಯಮಿತ ಶುದ್ಧೀಕರಣ (Chlorination/UV/RO): ನೀರನ್ನು ಕಡ್ಡಾಯವಾಗಿ ನಿಯಮಿತವಾಗಿ ಶುದ್ಧೀಕರಿಸಿ ಪೂರೈಸಬೇಕು ಎಂಬ ನಿಯಮವಿದ್ದರೂ, ಅದು ನಿಗದಿತ ವೇಳಾಪಟ್ಟಿಯಂತೆ ನಡೆಯುತ್ತಿಲ್ಲ ಎಂಬ ದೂರುಗಳಿವೆ. ಮಾಸಿಕ ಲ್ಯಾಬ್ ಪರೀಕ್ಷೆ (Lab Testing): ತಿಂಗಳಿಗೊಮ್ಮೆಯಾದರೂ ನೀರಿನ ಮಾದರಿಯನ್ನು ಲ್ಯಾಬೋರೇಟರಿಯಲ್ಲಿ ಪರೀಕ್ಷಿಸಬೇಕು. ಆದರೆ ಈ ಮಹತ್ವದ ವಿಷಯದ ಕುರಿತು ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಗಳಲ್ಲಿ ಗಂಭೀರ ಚರ್ಚೆಯಾಗದಿರುವುದು ಸಾರ್ವಜನಿಕರ ಆರೋಗ್ಯದ ಮೇಲಿನ ಅಲಕ್ಷ್ಯವನ್ನು ತೋರಿಸುತ್ತದೆ.
ಅಪೂರ್ಣ ಕಾಮಗಾರಿ & ಅಂದಾಜು ಪಟ್ಟಿ (Estimate) ಲೋಪದ ಆರೋಪ
10ನೇ ವಾರ್ಡ್ನಲ್ಲಿ ಚರಂಡಿ ಕಾಮಗಾರಿ ಪೂರ್ಣಗೊಳ್ಳದಿದ್ದಾಗ, "ಕೆಲಸ ಮುಗಿಯುವವರೆಗೆ ಬಿಲ್ ಆಗಲು ಬಿಡುವುದಿಲ್ಲ" ಎಂದಿದ್ದ ವಾರ್ಡ್ ಸದಸ್ಯರು, ಕೆಲವೇ ದಿನಗಳಲ್ಲಿ ಬಿಲ್ ಪಾಸಾದಾಗ "ನಮ್ಮ ಗಮನಕ್ಕೆ ಬರಲಿಲ್ಲ, ಮುಂದೆ ಏನಾದರೂ ಮಾಡೋಣ" ಎಂದು ನುಣುಚಿಕೊಂಡ ಉದಾಹರಣೆ ನಡೆದಿದೆ.
ದೋಷಪೂರಿತ ಎಸ್ಟಿಮೇಟ್: ಕಾಮಗಾರಿಯ ಅಂದಾಜು ಪಟ್ಟಿ (Estimate) ತಯಾರಿಸುವಾಗ ಇಂತಿಷ್ಟು ಮೀಟರ್ಗಳು ಎಂದು ಸ್ಪಷ್ಟವಾಗಿ ನಮೂದಿಸುವ ಬದಲು, "ಇಂಥವರ ಮನೆಯಿಂದ ಇಂಥವರ ಮನೆಯವರೆಗೆ" ಎಂದು ಅಸ್ಪಷ್ಟವಾಗಿ ನಮೂದಿಸಿ ಜಾರಿಕೊಳ್ಳುವ ತಂತ್ರ ಅನುಸರಿಸಲಾಗಿದೆ.
ಚುನಾವಣೆ ಘೋಷಣೆಯಾಗಿ ನೂತನ ಆಡಳಿತ ಮಂಡಳಿ ಬರುವವರೆಗೆ ಆಡಳಿತಾಧಿಕಾರಿ ನೇಮಕ :
ಒಂದಷ್ಟು ಜನರಿಗೆ ಸಮಾಧಾನ, ಇನ್ನು ಕೆಲವರಿಗೆ ತೀವ್ರ ಅಸಮಾಧಾನಗಳ ನಡುವೆಯೇ ಐದು ವರ್ಷಗಳ ಜನಪ್ರತಿನಿಧಿಗಳ ಆಡಳಿತ ಮುಗಿದಿದೆ. ಮುಂದಿನ ಚುನಾವಣೆ ನಡೆಯುವವರೆಗೆ ಆಡಳಿತಾಧಿಕಾರಿಗಳೇ ಪಟ್ಟಣದ ಉಸ್ತುವಾರಿ ವಹಿಸಲಿದ್ದಾರೆ.
ಜನಪ್ರತಿನಿಧಿಗಳಿದ್ದಾಗ ಸಾರ್ವಜನಿಕರ ಧ್ವನಿಗೆ ಬೆಲೆ ಸಿಗುತ್ತಿತ್ತೇ? ಅಥವಾ ಅಧಿಕಾರಿಗಳ ಆಡಳಿತದಲ್ಲೇ ಕೆಲಸಗಳು ಸುಲಭವಾಗಿ, ಪಾರದರ್ಶಕವಾಗಿ ನಡೆಯುತ್ತವೆಯೇ? ಅಥವಾ ಯಾರೇ ಬಂದರೂ ಪಟ್ಟಣದ ಜನರ ಅಹವಾಲಿಗೆ ಮನ್ನಣೆ ದೊರಕದ ದಿನಗಳಿದ್ದೀತೇ ಎಂಬುದನ್ನು ಮುಂಬರುವ ದಿನಗಳಲ್ಲಿ ಕಾದು ನೋಡಬೇಕಿದೆ.
