ಕಾರ್ಯಕ್ರಮವನ್ನು ರಾಷ್ಟ್ರೀಯ ಉತ್ತಮ ಶಿಕ್ಷಕಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ರತ್ನಕುಮಾರಿ ಉದ್ಘಾಟಿಸಿ ಮಾತನಾಡಿದರು. ಹೆಣ್ಣು ಅಬಲೆಯಲ್ಲ, ಸಬಲೆ. ಸಮಾಜದಲ್ಲಿ ಮೂಲೆಗುಂಪಾಗಿದ್ದ ಮಹಿಳೆಯರಿಗೆ ಗುರುತಿಸಿಕೊಳ್ಳಲು ಹಾಗೂ ಸ್ವಾವಲಂಬಿಗಳಾಗಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಲವು ರೀತಿಯಲ್ಲಿ ವೇದಿಕೆ ಕಲ್ಪಿಸುತ್ತಿದೆ ಎಂದು ಹೇಳಿದರು.
ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ, ಮಹಿಳೆಯರು ಯೋಜನೆಯ ವಿವಿಧ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಳ್ಳಬೇಕು. ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ ಹಾಗೂ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಪ್ರಕಟವಾಗುವ ಜೀವನಮೌಲ್ಯಾಧಾರಿತ ಕಥೆಗಳನ್ನು ಓದಿ, ಅವುಗಳಲ್ಲಿರುವ ಉತ್ತಮ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸುರಭಿ ಮಹಿಳಾ ಮಂಡಳಿ, ಶಿವಮೊಗ್ಗದ ನಿರ್ದೇಶಕಿ ಶ್ರೀಮತಿ ರೇಖಾ ಜಿ.ಎಂ. ಅವರು ಸೈಬರ್ ಅಪರಾಧಗಳ ಕುರಿತು ಮಾಹಿತಿ ನೀಡಿದರು. ಮೊಬೈಲ್ ಬಳಕೆಯಿಂದ ಹಲವು ಅನುಕೂಲಗಳಿದ್ದರೂ, ಅಜಾಗರೂಕತೆಯಿಂದ ಅಪಾಯಕ್ಕೂ ಸಿಲುಕುವ ಸಾಧ್ಯತೆ ಇದೆ. ಅಪರಿಚಿತರು ಕರೆ ಮಾಡಿ ಒಟಿಪಿ ಕೇಳಿದರೆ ಯಾವುದೇ ಕಾರಣಕ್ಕೂ ಒಟಿಪಿ ಹಂಚಿಕೊಳ್ಳಬಾರದು. ಇದರಿಂದ ಬ್ಯಾಂಕ್ ಖಾತೆಯಲ್ಲಿರುವ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ಅಲ್ಲದೆ, ಎ1 ಆ್ಯಪ್ ಬಳಕೆಯಿಂದ ಉಂಟಾಗಬಹುದಾದ ಅನಾಹುತಗಳ ಬಗ್ಗೆಯೂ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯೆ ಶ್ರೀಮತಿ ವಿನುತಾ ಮುರುಳಿಧರ್ ಮಾತನಾಡಿ, ಮಹಿಳೆಯರ ಪ್ರತಿಭೆ ಹಾಗೂ ಸೃಜನಶೀಲತೆಯನ್ನು ಹೊರತರುವಲ್ಲಿ ಇಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ತಾಲೂಕು ಸಮನ್ವಯಾಧಿಕಾರಿ ಶ್ರೀಮತಿ ರಮ್ಯಾ ಕಾರ್ಯಕ್ರಮದ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ತಾಲೂಕಿನ ಕೃಷಿ ಅಧಿಕಾರಿ ರಾಕೇಶ್ ನಿರೂಪಣೆ ಮಾಡಿದರು.
ಸೇವಾ ಪ್ರತಿನಿಧಿ ಶ್ರೀಮತಿ ಜಯಶೀಲ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಶ್ರೀಮತಿ ಮೈತ್ರಿ ವಂದಿಸಿದರು. ಕಾರ್ಯಕ್ರಮದಲ್ಲಿ ಯೋಜನೆಯ ಎಲ್ಲಾ ಸೇವಾ ಪ್ರತಿನಿಧಿಗಳು ಹಾಗೂ ಜ್ಞಾನವಿಕಾಸ ಸದಸ್ಯರು ಭಾಗವಹಿಸಿದ್ದರು.
