34 ವರ್ಷಗಳ ಸೇವೆ: ಮೆಟ್ರನ್ ಜಯಲಕ್ಷ್ಮಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ
ತೀರ್ಥಹಳ್ಳಿ: 34 ವರ್ಷಗಳ ಸುದೀರ್ಘ ಸರ್ಕಾರಿ ಸೇವಾವಧಿಯಲ್ಲಿ ಪ್ರಾಮಾಣಿಕತೆ, ಶಿಸ್ತು ಹಾಗೂ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ ಉತ್ತಮ ಹೆಸರು ಗಳಿಸಿದ ಮೆಟ್ರನ್ ಜಯಲಕ್ಷ್ಮಿ ಪುಟ್ಟಯ್ಯ ಅವರು ವಯೋನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯ ಜೆ.ಸಿ. ಆಸ್ಪತ್ರೆಯಲ್ಲಿ ಹೃದಯಸ್ಪರ್ಶಿಯಾಗಿ ಬೀಳ್ಕೊಡಲಾಯಿತು.ಕಾರ್ಯಕ್ರಮದಲ್ಲಿ ಜೆ.ಸಿ. ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ಪ್ರಕಾಶ್ ಕೆ.ಎಸ್. ಮಾತನಾಡಿ, ಜಯಲಕ್ಷ್ಮಿಯವರು ತಮ್ಮ ಕರ್ತವ್ಯದಲ್ಲಿ ಶಿಸ್ತು ಮತ್ತು ಸಮಯಪಾಲನೆಗೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ಸಿಬ್ಬಂದಿಯೂ ಅದನ್ನು ಪಾಲಿಸುವಂತೆ ಪ್ರೇರೇಪಿಸುತ್ತಿದ್ದರು. ಆಸ್ಪತ್ರೆಯ ಆಡಳಿತ ಮತ್ತು ಕಾರ್ಯವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿಡಲು ಅವರು ನೀಡಿದ ಕೊಡುಗೆ ಮಾದರಿಯಾಗಿದೆ ಎಂದು ಶ್ಲಾಘಿಸಿ, ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.
ಮೆಗ್ಗಾನ್ ಆಸ್ಪತ್ರೆಯ ಪ್ರಭಾರ ಮೆಟ್ರನ್ ಶೇಷಮ್ಮ ಮಾತನಾಡಿ, ಜಯಲಕ್ಷ್ಮಿಯವರು 18 ವರ್ಷಗಳ ಕಾಲ ಮೆಗ್ಗಾನ್ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯ ಮೇಲ್ವಿಚಾರಕರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದರು. ಸೇವಾವಧಿಯುದ್ದಕ್ಕೂ ಬದ್ಧತೆ ಮತ್ತು ಕಾರ್ಯತತ್ಪರತೆಯಿಂದ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಸ್ಮರಿಸಿದರು.
ತಾಲೂಕು ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಸತೀಶ್ ಟಿ.ವಿ. ಮಾತನಾಡಿ, ಬೀಳ್ಕೊಡುಗೆ ಕಾರ್ಯಕ್ರಮಗಳು ವ್ಯಕ್ತಿಯ ಸೇವಾ ಬದುಕಿನ ಪ್ರತಿಬಿಂಬವಾಗಿರುತ್ತವೆ. ಜಯಲಕ್ಷ್ಮಿಯವರು ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಸ್ಥಳಗಳಿಂದ ಹಿತೈಷಿಗಳು, ಅಭಿಮಾನಿಗಳು ಹಾಗೂ ಸಹೋದ್ಯೋಗಿಗಳು ಆಗಮಿಸಿರುವುದು ಅವರ ಸೇವಾ ಬದುಕಿನಲ್ಲಿ ಗಳಿಸಿದ ಪ್ರೀತಿ ಮತ್ತು ಗೌರವಕ್ಕೆ ಸಾಕ್ಷಿಯಾಗಿದೆ. ಇಂತಹ ಆದರ್ಶ ಬದುಕು ಎಲ್ಲರಿಗೂ ಮಾದರಿಯಾಗಬೇಕು ಎಂದರು.
ಮೆಟ್ರನ್ ಶಿವಿಗಂಗಮ್ಮ, ಶುಶ್ರೂಷಣಾಧಿಕಾರಿ ಪ್ರಮೀಳಾ, ಹೊರಗುತ್ತಿಗೆ ಸಿಬ್ಬಂದಿ ಅನ್ಸರ್ ಸೇರಿದಂತೆ ಹಲವರು ಮಾತನಾಡಿ ಜಯಲಕ್ಷ್ಮಿಯವರಿಗೆ ಶುಭ ಹಾರೈಸಿದರು. ಜೆ.ಸಿ. ಆಸ್ಪತ್ರೆ, ತಾಲೂಕು ಆರೋಗ್ಯ ಇಲಾಖಾ ಸಂಘ, ವಿವಿಧ ವೃಂದ ಸಂಘಗಳು, ಅಭಿಮಾನಿಗಳು, ಹಿತೈಷಿಗಳು ಹಾಗೂ ಬಂಧುಗಳು ಜಯಲಕ್ಷ್ಮಿ–ಪುಟ್ಟಯ್ಯ ದಂಪತಿಗಳನ್ನು ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಿದರು. ಶುಶ್ರೂಷಣಾಧಿಕಾರಿ ಲಕ್ಷ್ಮಿ ಶ್ರೀಕಾಂತ್ ಅವರು ಜಯಲಕ್ಷ್ಮಿಯವರ ಸೇವಾ ಪರಿಚಯ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಯಲಕ್ಷ್ಮಿಯವರು, ತಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸಿದ್ದಕ್ಕೆ ಆತ್ಮತೃಪ್ತಿ ಇದೆ ಎಂದು ಹೇಳಿದರು. “ಇತರರಿಗೆ ಹೇಳುವ ಮುನ್ನ ನಾವು ಅದನ್ನು ಪಾಲಿಸಬೇಕು” ಎಂಬ ತತ್ವದಂತೆ ತಾವು ನಡೆದುಕೊಂಡಿದ್ದಾಗಿ ತಿಳಿಸಿದರು. ಕರ್ತವ್ಯದ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಆಸ್ಪತ್ರೆಗೆ ಹಾಜರಾಗುತ್ತಿದ್ದೆ. ಆರಂಭದಲ್ಲಿ ಕೆಲವರಿಗೆ ಇದು ಕಿರಿಕಿರಿ ಎನಿಸಿದರೂ, ನಂತರ ಸಿಬ್ಬಂದಿಯಲ್ಲೂ ಸಮಯಪಾಲನೆ ಬೆಳೆಸಲು ಪ್ರೇರಣೆಯಾಯಿತು ಎಂದು ತಮ್ಮ ಸೇವಾ ಅನುಭವ ಹಂಚಿಕೊಂಡರು.
ಎಲ್ಲ ವೈದ್ಯಾಧಿಕಾರಿಗಳು ಹಾಗೂ ಸಹೋದ್ಯೋಗಿಗಳು ನೀಡಿದ ಸಹಕಾರವನ್ನು ಸ್ಮರಿಸಿದ ಅವರು, ಇಂತಹ ಅಪೂರ್ವ ಬೀಳ್ಕೊಡುಗೆಯನ್ನು ನಿರೀಕ್ಷಿಸಿರಲಿಲ್ಲ. ತಮ್ಮ ಮೇಲೆ ಪ್ರೀತಿ ಮತ್ತು ಅಭಿಮಾನ ತೋರಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆ.ಸಿ. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅರವಿಂದ್ ಕೆ.ವಿ. ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸಿದಾಗ ಮಾತ್ರ ಸಂಸ್ಥೆಗೆ ಉತ್ತಮ ಹೆಸರು ಬರಲು ಸಾಧ್ಯ. ಜಯಲಕ್ಷ್ಮಿಯವರು ತಮ್ಮ ಕರ್ತವ್ಯವನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಈ ಹಿಂದೆ ಜೆ.ಸಿ. ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿದ್ದ ಡಾ. ಅಕ್ಷತಾ ಹಾಗೂ ಶುಶ್ರೂಷಣಾಧಿಕಾರಿ ಪ್ರಮೀಳಾ, ಪದೋನ್ನತಿ ಹೊಂದಿದ ಕಚೇರಿ ಅಧೀಕ್ಷಕ ರಾಘವೇಂದ್ರ ಸಿ.ಡಿ. ಹಾಗೂ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸುನೀತಾ ಅವರನ್ನು ಗೌರವಿಸಲಾಯಿತು.
ಆಸ್ಪತ್ರೆಗೆ ನೂತನವಾಗಿ ಆಗಮಿಸಿರುವ ಡಾ. ಸುಮಾ, ಡಾ. ರುಬಿಯಾ, ಡಾ. ವಸಂತ್, ಡಾ. ದಿಗಂತ್, ಸಹಾಯಕ ಆಡಳಿತಾಧಿಕಾರಿ ಅನುಸೂಯ ಹೆಗಡೆ, ಪ್ರಥಮ ದರ್ಜೆ ಸಹಾಯಕ ನಾಗರಾಜ್, ಹಿರಿಯ ಲ್ಯಾಬ್ ಟೆಕ್ನಿಕಲ್ ಅಧಿಕಾರಿ ತಿಪ್ಪೇಶಿ ಹಾಗೂ ಶುಶ್ರೂಷಣಾಧಿಕಾರಿ ಶೀಲಾ ಈಶ್ವರಪ್ಪ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.
ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕಿ ಹಾಗೂ ಮೆಗ್ಗಾನ್ ಆಸ್ಪತ್ರೆಯ ಶುಶ್ರೂಷಣಾಧಿಕಾರಿ ಮಂಜುಳಾ, ಜೆ.ಸಿ. ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ರಶ್ಮಿ, ಡಾ. ಕವಿತಾ, ಡಾ. ಸುಮಾ, ಡಾ. ರಂಗಸ್ವಾಮಿ, ಡಾ. ಗಣೇಶ್ ನಾಯಕ್, ಹಿರಿಯ ಶುಶ್ರೂಷಣಾಧಿಕಾರಿ ಶೈಲಜಾ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿ, ತಾಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷೆ ಗೀತಾ ಎಲ್., ಆರೋಗ್ಯ ಇಲಾಖಾ ಸಂಘದ ಉಪಾಧ್ಯಕ್ಷರಾದ ಅನುಸೂಯ, ತಿಲಕಮ್ಮ ಹಾಗೂ ಜಯಲಕ್ಷ್ಮಿಯವರು ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಮೆಗ್ಗಾನ್ ಆಸ್ಪತ್ರೆ ಮತ್ತು ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯ ಸಹೋದ್ಯೋಗಿಗಳು, ಬಂಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ತಿಪ್ಪೇಶಿ ಪ್ರಾರ್ಥಿಸಿದರು. ಪ್ರಭಾಕರ ಪೂಜಾರಿ ಸ್ವಾಗತಿಸಿದರು. ರಾಜಪ್ಪ ನಿರೂಪಿಸಿದರು. ಶೈಲಜಾ ವಂದಿಸಿದರು.
